ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಹೀಲ್ ಚೇರ್ ಕ್ರಿಕೆಟ್ ಸಾಧಕ

ಅಕ್ಷರ ಗಾತ್ರ

ಅಂಬೆಗಾಲಿಡುತ್ತಾ ಆಟವಾಡುವ ಎಳೆವೆಯಲ್ಲೇ ಬಂದೆರಗಿದ ಪೋಲಿಯೊ ಮಹಾಮಾರಿಯಿಂದಾಗಿ ಅವರ ಬಲಗಾಲು ಶಕ್ತಿ ಹೀನಗೊಂಡಿದೆ. ಆದರೆ, ದೇಹದ ಒಂದು ಭಾಗ ಊನಗೊಂಡರೂ ಅವರ ಜೀವನೋತ್ಸಾಹ ಮಾತ್ರ ಕರಗಲಿಲ್ಲ. ಈ ಅಂಗವಿಕಲನ ಸಾಧನೆ ಈಗಿನ ಯುವ ಜನಾಂಗಕ್ಕೆ ಪ್ರೇರಣಾದಾಯಕವಾಗಿದೆ.


ಹೌದು, ಚಿಕ್ಕೋಡಿ ಪಟ್ಟಣದ ಅಂಗವಿಕಲ ಕ್ರಿಕೆಟಿಗ ಸುನೀಲಕುಮಾರ ವಿರೂಪಾಕ್ಷಗೌಡ ಪಾಟೀಲ ಎಂಬುವವರೇ ಆ ಯೂತ್‌ ಐಕಾನ್. ಅವರು ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚಿಕ್ಕಕೊಡಗಲಿಯವರು. ಅವರ ತಂದೆ ಶಿಕ್ಷಕರಾಗಿದ್ದರಿಂದ ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹಾಗೂ ಚಿಕ್ಕೋಡಿಯಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದರು.


ಬಾಲ್ಯದಿಂದಲೂ ಈ ಹುಡುಗನಿಗೆ ಕ್ರಿಕೆಟ್ ಗೀಳು. ಟಿವಿಯಲ್ಲಿ ಕ್ರಿಕೆಟ್‌ ಪಂದ್ಯಗಳ ನೇರ ಪ್ರಸಾರ ವೀಕ್ಷಿಸುವ ಜೊತೆಗೆ ಮೈದಾನದಲ್ಲಿ ನಿಯಮಿತವಾಗಿ ಒಂದಿಷ್ಟು ಕಾಲ ಕ್ರಿಕೆಟ್ ಅಭ್ಯಾಸ ನಡೆಸಿದ ಅವರು ಕ್ರೀಡಾ ಕೌಶಲ ಬೆಳೆಸಿಕೊಂಡರು. ತಂದೆ-ತಾಯಿಯೂ ಮಗನ ಸಾಧನೆಗೆ ಇಂಬು ನೀಡಿದರು. ಇದರಿಂದಾಗಿ ಸುನೀಲಕುಮಾರ ಈಗ ಅಂತರರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಸಾಧನೆ ಶಿಖರವನ್ನೇರಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಅಂತರರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಮೊದಲ ಕ್ರಿಕೆಟಿಗರಾಗಿದ್ದಾರೆ.

ಅಂದಹಾಗೆ, ಈ ಆಟಗಾರ ಯಾವುದೇ ನುರಿತ ಕ್ರೀಡಾಪಟುಗಳಿಂದ ತರಬೇತಿ ಪಡೆದವರಲ್ಲ. ಏಕಲವ್ಯನಂತೆ ಸ್ವಂತ ಅಭ್ಯಾಸದಿಂದ ಕ್ರಿಕೆಟ್‌ ಕೌಶಲವನ್ನು ಬೆಳೆಸಿಕೊಂಡಿದ್ದಾರೆ. ನಾಗರಮುನ್ನೋಳಿ ಶಾಲೆಯ ಮೈದಾನವೇ ಅವರ ಕ್ರೀಡಾ ತರಬೇತಿಯ ಆವರಣ. ಶಾಲಾ ಬಿಡುವಿನ ನಂತರ ನಿತ್ಯವೂ ಸಂಜೆ ಸುಮಾರು ಒಂದೂವರೆ, ಎರಡು ಗಂಟೆ ವ್ಹೀಲ್‌ ಚೇರ್‌ನಿಂದಲೇ ಮಕ್ಕಳೊಂದಿಗೆ ಲೆದರ್‌ಬಾಲ್‌ನಿಂದ ಅಭ್ಯಾಸ ಮಾಡುತ್ತಾರೆ.

‘ಮೊದಲಿನಿಂದಲೂ ಕ್ರಿಕೆಟ್‌ ಆಡಬೇಕು ಎಂಬ ಹಂಬಲವಿತ್ತು. ವ್ಹೀಲ್ ಚೇರ್ ಖರೀದಿಸಿ ಪ್ರತಿದಿನ ಮಕ್ಕಳೊಂದಿಗೆ ಅಭ್ಯಾಸ ಮಾಡಿದೆ. ವ್ಹೀಲ್ ಚೇರ್‌ನಲ್ಲಿ ಕುಳಿತುಕೊಂಡೇ ಬ್ಯಾಟಿಂಗ್ ಮಾಡುವುದು, ಕೈ ತಿರುಗಿಸಿ ಬೌಲಿಂಗ್ ಮಾಡುವುದು, ಡೈವ್‌ ಮಾಡಿ ಚೆಂಡು ಹಿಡಿಯುವುದು, ಗಾಲಿಯನ್ನು ತಿರುಗಿಸುತ್ತಾ ರನ್‌ ಮಾಡುವುದು ತುಂಬ ಕಷ್ಟದಾಯಕ. ದೈಹಿಕ ಸಾಮರ್ಥ್ಯದೊಂದಿಗೆ ಏಕಾಗ್ರತೆ, ಸಮಯಪ್ರಜ್ಞೆಯೂ ಬೇಕು. ಅಭ್ಯಾಸದಲ್ಲಿ ಕಠಿಣ ಪರಿಶ್ರಮಪಟ್ಟು ಕ್ರಿಕೆಟ್‌ನ ಬಹುತೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದೇನೆ’ ಎಂದು ಸುನೀಲಕುಮಾರ ತಮ್ಮ ಕ್ರಿಕೆಟ್‌ ಅಭ್ಯಾಸದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಆಗ್ರಾದ ಡಿಸೆಬಲ್ಡ್‌ ಸ್ಪೋರ್ಟಿಂಗ್‌ ಸೊಸೈಟಿಯ ಕರ್ನಾಟಕ ಕೋ–ಆರ್ಡಿನೇಟರ್ ಮಹೇಶ ಅಂಗಡಿ ಅವರ ಪ್ರೋತ್ಸಾಹದಿಂದ ಬೆಂಗಳೂರಿನಲ್ಲಿ ನಡೆದ ವ್ಹೀಲ್ ಚೇರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡರು. ಆ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಕಳೆದ ಎರಡು ವರ್ಷಗಳ ತಮ್ಮ ಕ್ರಿಕೆಟ್‌ ಪಯಣದಲ್ಲಿ ಇದುವರೆಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ಆಗ್ರಾದ ಡಿಸೆಬಲ್ಡ್‌ ಸ್ಪೋರ್ಟಿಂಗ್ ಸೊಸೈಟಿಯ ಮೂಲಕ ಅಂತರರಾಷ್ಟ್ರೀಯಮಟ್ಟದ ನಾಲ್ಕು ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಮೊದಲ ಆಟಗಾರ ಎಂಬ ಹಿರಿಮೆಗೆ ಸುನೀಲಕುಮಾರ ಪಾತ್ರರಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ವ್ಹೀಲ್‌ ಚೇರ್ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗೂ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ದಿವ್ಯಾಂಗ ಮೈತ್ರಿ ವ್ಹೀಲ್ ಚೇರ್ ಕ್ರಿಕೆಟ್‌ ಟೂರ್ನಿ, ಬಾಂಗ್ಲಾದೇಶ ವಿರುದ್ದ ನಡೆದ ಕ್ರಿಕೆಟ್‌ ಸರಣಿ, ನೇಪಾಳದಲ್ಲಿ ನಡೆದ ಇಂಟರ್‌ನ್ಯಾಶನಲ್ ವ್ಹೀಲ್ ಚೇರ್ ತ್ರಿಕೋನ ಸರಣಿ (ಬಾಂಗ್ಲಾ, ನೇಪಾಳ ಮತ್ತು ಭಾರತ), ಕೊಲ್ಹಾಪುರ ಮತ್ತು ಮುಂಬೈನಲ್ಲಿ ನೇವಡಾ ಫುಟ್‌ಮನ್‌ ಮತ್ತು ಆಗ್ರಾದ ಡಿಸೆಬಲ್ಡ್‌ ಸ್ಪೋರ್ಟಿಂಗ್ ಸೊಸೈಟಿಯ ಸಹಯೋಗದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ನಡೆದ ಟಿ–20 ವ್ಹೀಲ್ ಚೇರ್ ಕ್ರಿಕೆಟ್‌ ಸರಣಿ, ಉತ್ತರಾಖಂಡದಲ್ಲಿ ನಡೆದ ಉತ್ತರಾಖಂಡ ಕಪ್‌ ಟಿ–20 ತ್ರಿಕೋನ ಸರಣಿಯಲ್ಲಿ (ಬಾಂಗ್ಲಾ, ಭಾರತ ಮತ್ತು ನೇಪಾಳ) ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಕ್ರಿಕೆಟ್ ಮಾತ್ರವಲ್ಲ, ರೈಫಲ್ ಶೂಟಿಂಗ್‌ನಲ್ಲೂ ಸಾಧನೆಗೈಯುವ ಹೆಬ್ಬಯಕೆಯೊಂದಿಗೆ ಹುಬ್ಬಳ್ಳಿಯಲ್ಲಿ ತರಬೇತಿ ಪಡೆದಿದ್ದಾರೆ. ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಅವರು ವ್ಯಂಗ್ಯಚಿತ್ರಕಲಾವಿದರೂ ಹೌದು.

‘ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಿಲ್ಲೊಂದು ಕಲೆ, ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೊಂದಿಗೆ ಕರಗತ ಮಾಡಿಕೊಂಡು ಸೂಕ್ತ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಯುವ ಜನಾಂಗ ಸಂಕುಚಿತ ಮನೋಭಾವವನ್ನು ಬದಿಗಿಟ್ಟು, ತಮ್ಮ ಶಕ್ತಿ, ಸಾಮರ್ಥ್ಯವನ್ನು ತಾವೇ ಗುರುತಿಸಿಕೊಂಡು ತಮ್ಮ ಜೀವನದ ಶಿಲ್ಪಿಗಳು ತಾವೇ ಆಗಬೇಕು. ಬೇರೋಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ತನ್ನದೇ ಆದ ಸಾಧನೆಯತ್ತ ಮುನ್ನಗ್ಗಬೇಕು’ ಎಂದು ಈ ಸಾಧಕ ಯುವ ಜನಾಂಗಕ್ಕೆ ಸಂದೇಶ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT