ಅಂತರ ಶಾಲಾ ಕ್ರಿಕೆಟ್‌ ಟೂರ್ನಿ: ಸ್ಪೋರ್ಟ್ಸ್‌ ಅಕಾಡೆಮಿ ತಂಡಕ್ಕೆ ಜಯ

7
ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿ

ಅಂತರ ಶಾಲಾ ಕ್ರಿಕೆಟ್‌ ಟೂರ್ನಿ: ಸ್ಪೋರ್ಟ್ಸ್‌ ಅಕಾಡೆಮಿ ತಂಡಕ್ಕೆ ಜಯ

Published:
Updated:
Deccan Herald

ಹುಬ್ಬಳ್ಳಿ: ಗದಗನ ಸ್ಪೋರ್ಟ್ಸ್‌ ಅಕಾಡೆಮಿ ತಂಡ, ಕೆಎಸ್‌ಸಿಎ ಧಾರವಾಡ ವಲಯದ ಆಶ್ರಯದಲ್ಲಿ ನಡೆಯುತ್ತಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಬಿ’ ತಂಡದ ಎದುರು 25 ರನ್‌ಗಳ ಗೆಲುವು ಪಡೆಯಿತು.

ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸ್ಪೋರ್ಟ್ಸ್‌ ಅಕಾಡೆಮಿ 33.3 ಓವರ್‌ಗಳಲ್ಲಿ 163  ರನ್‌ ಗಳಿಸಿತ್ತು. ಕಿರಣ ಅಸಂಗಿ (24), ಅಲ್ತಮೇಶ ಖಾಜಿ (45) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಎದುರಾಳಿ ಸಿಸಿಕೆ ತಂಡ 33.4 ಓವರ್‌ಗಳಲ್ಲಿ 138 ರನ್ ಗಳಿಸಿ ಆಲೌಟ್‌ ಆಯಿತು.

ತಂಡದ ಸೋಲಿನ ನಡುವೆಯೂ ಶ್ರೇಯಸ್‌ ಮುರ್ಡೇಶ್ವರ ಗಮನ ಸೆಳೆದರು. 6.3 ಓವರ್‌ ಬೌಲಿಂಗ್ ಮಾಡಿದ ಶ್ರೇಯಸ್ 37 ರನ್ ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಹ್ಯಾಟ್ರಿಕ್‌ ವಿಕೆಟ್ ಪಡೆದಿದ್ದು ವಿಶೇಷ.

ಪವನ್‌ ತಂಡಕ್ಕೆ ಗೆಲುವು:  16 ವರ್ಷದ ಒಳಗಿನವರ ಅಂತರ ಶಾಲಾ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಪವನ್‌ ಇಂಗ್ಲಿಷ್‌ ಮಾಧ್ಯಮ ಶಾಲೆ, ಕೇಂದ್ರೀಯ ವಿದ್ಯಾಲಯ ವಿರುದ್ಧ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ್ದ ಪವನ್‌ ಶಾಲೆ 25 ಓವರ್‌ಗಳಲ್ಲಿ ಆರು ವಿಕೆಟ್‌ಗೆ 142 ರನ್‌ ಗಳಿಸಿತ್ತು. ಕೇಂದ್ರೀಯ ವಿದ್ಯಾಲಯ 15.4 ಓವರ್‌ಗಳಲ್ಲಿ 64 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಎನ್‌.ಕೆ. ಠಕ್ಕರ್‌ ಶಾಲೆ ಧ್ರುವ ನಾಯ್ಕ (91), ರಾಜೇಂದ್ರ ಡಂಗನವರ (54) ಉತ್ತಮ ಬ್ಯಾಟಿಂಗ್‌ನಿಂದ 21 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತು. ಎದುರಾಳಿ ಜೆ.ಕೆ. ಇಂಗ್ಲಿಷ್‌ ಮಾಧ್ಯಮ ಶಾಲೆ 21 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 56 ರನ್‌ ಮಾತ್ರ ಕಲೆಹಾಕಿತು. ಇದರಿಂದ ಠಕ್ಕರ್ ಶಾಲೆಗೆ 149 ರನ್ ಜಯ ಸಾಧ್ಯವಾಯಿತು.

ಪರಿವರ್ತನ ಗುರುಕುಲ ಎದುರಿನ ಪಂದ್ಯದಲ್ಲಿ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆ 12.2 ಓವರ್‌ಗಳಲ್ಲಿ 62 ರನ್ ಗಳಿಸಿತ್ತು. ಪರಿವರ್ತನ ಶಾಲೆ 14.5 ಓವರ್‌ಗಳಲ್ಲಿ 23 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ತಂಡದ ಸೋಲಿನ ನಡುವೆಯೂ ಪರಿವರ್ತನ ಶಾಲೆಯ ಧ್ರುವ ಕೊಠಾರಿ ಆರು ವಿಕೆಟ್‌ ಪಡೆದು ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !