ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಮೊದಲ ಜಯದ ತವಕ

ಪಂಜಾಬ್‌ ಕಿಂಗ್ಸ್ ಎದುರು ಹಣಾಹಣಿ; ರೋಹಿತ್ ಶರ್ಮಾ–ಮಯಂಕ್ ಅಗರವಾಲ್ ಮುಖಾಮುಖಿ
Last Updated 12 ಏಪ್ರಿಲ್ 2022, 13:10 IST
ಅಕ್ಷರ ಗಾತ್ರ

ಪುಣೆ: ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

ಐದು ಬಾರಿಯ ಚಾಂಪಿಯನ್ ಮುಂಬೈ ಹಿಂದಿನ ಆವೃತ್ತಿಗಳಲ್ಲೆಲ್ಲ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿತ್ತು. ಆದರೆ ಈ ಬಾರಿ ಪ್ರತಿ ಪಂದ್ಯದಲ್ಲೂ ನೀರಸ ಆಟವಾಡಿದೆ. ಜಯದ ಲಯಕ್ಕೆ ಮರಳಬೇಕಾದರೆ ತಂಡವು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಬ್ಯಾಟರ್‌ಗಳಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಆಗುತ್ತಿಲ್ಲ. ಬೌಲಿಂಗ್‌ನಲ್ಲೂ ಮೊನಚು ಕಾಣುತ್ತಿಲ್ಲ. ಹೀಗಾಗಿ ತಂಡದ ಒಟ್ಟಾರೆ ಸಾಮರ್ಥ್ಯ ಕುಂದಿದೆ. ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಹೊಸ ನಾಯಕನ ನೇತೃತ್ವದಲ್ಲಿ ಈ ಬಾರಿ ಕಣಕ್ಕೆ ಇಳಿದಿರುವ ಪಂಜಾಬ್ ಕಿಂಗ್ಸ್ ಈ ವರೆಗೆ ಮಿಶ್ರ ಫಲ ಕಂಡಿದೆ. ಎರಡು ಪಂದ್ಯಗಳಲ್ಲಿ ಗೆದ್ದಿರುವ ತಂಡ ಮತ್ತೆರಡು ಪಂದ್ಯಗಳಲ್ಲಿ ಸೋತಿದೆ. ತಂಡಕ್ಕೆ ಈ ವರೆಗೆ ಸತತ ಎರಡು ಜಯ ಗಳಿಸಲು ಆಗಿಲಿಲ್ಲ. ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ಎದುರು ಸೋತಿರುವುದರಿಂದ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.

ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಕೆಲವು ಪಂದ್ಯಗಳಲ್ಲಿ ಮಿಂಚಿದ್ದಾರೆ. ಆದರೂ ಸತತವಾಗಿ ಲಯವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮುಂತಾದವರು ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಾಗಿದೆ. ಅನುಭವಿ ಬ್ಯಾಟರ್ ಕೀರನ್ ಪೊಲಾರ್ಡ್ ಅವರು ಇನ್ನೂ ಲಯ ಕಂಡುಕೊಳ್ಳದೇ ಇರುವುದು ತಂಡದ ಚಿಂತೆಗೆ ಕಾರಣವಾಗಿದೆ.

ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಮುರುಗನ್ ಅಶ್ವಿನ್‌, ಬಾಸಿಲ್ ಥಂಪಿ ಮತ್ತು ಜಯದೇವ್ ಉನದ್ಕತ್ ಅವರಿಂದ ಸಹಕಾರ ಸಿಕ್ಕಿದರೆ ಪಂಜಾಬ್‌ ಕಿಂಗ್ಸ್‌ನ ಬ್ಯಾಟಿಂಗ್ ಬಳಗವನ್ನು ನಿಯಂತ್ರಿಸಬಹುದಾಗಿದೆ.

ಈ ಬಾರಿ ಉಭಯ ತಂಡಗಳ ನಾಯಕರ ಬಲಾಬಲ

ಆಟಗಾರ;ತಂಡ;ಪಂದ್ಯ;ರನ್;ಗರಿಷ್ಠ;ಬೌಂಡರಿ;ಸಿಕ್ಸರ್

ರೋಹಿತ್ ಶರ್ಮಾ;ಮುಂಬೈ;4;80;41;8;4

ಮಯಂಕ್ ಅಗರವಾಲ್;ಪಂಜಾಬ್;4;42;32;4;2

ಉಭಯ ತಂಡಗಳಲ್ಲಿ ಗರಿಷ್ಠ ರನ್‌ ಗಳಿಸಿದವರು

ಅಟಗಾರ;ತಂಡ;ರನ್‌;ಗರಿಷ್ಠ;ಅರ್ಧಶತಕ

ಇಶಾನ್ ಕಿಶನ್;ಮುಂಬೈ;175;81*;2

ಲಿಯಾಮ್ ಲಿವಿಂಗ್‌ಸ್ಟೋನ್;ಪಂಜಾಬ್‌;4;162;64;2

ಶಿಖರ್‌ ಧವನ್;ಪಂಜಾಬ್‌;4;127;43;–

ತಿಲಕ್ ವರ್ಮಾ;ಮುಂಬೈ;4;121;61;1

ಸೂರ್ಯಕುಮಾರ್;ಮುಂಬೈ;2;120;68*;2

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT