ಮಂಗಳವಾರ, ನವೆಂಬರ್ 19, 2019
24 °C

ಮಹಿಳಾ ಕ್ರಿಕೆಟ್: ಮತ್ತೆ ವಕ್ಕರಿಸಿದ ಫಿಕ್ಸಿಂಗ್ ಪಿಶಾಚಿ..

Published:
Updated:

‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ..’ ಎನ್ನುವ ಮಾತು ಕ್ರಿಕೆಟ್ ಪಂದ್ಯಗಳ ಫಿಕ್ಸಿಂಗ್‌ ಎಂಬ ಪೆಡಂಭೂತಕ್ಕೆ ಸರಿ ಹೊಂದುತ್ತದೆ.

ಬರೋಬ್ಬರಿ ಎರಡು ದಶಕಗಳ ಹಿಂದೆ ಮೊದಲ ಸಲ ದೊಡ್ಡಮಟ್ಟದ ಸುದ್ದಿ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣಗಳನ್ನು ಮಟ್ಟ ಹಾಕುತ್ತ ಹೋದಂತೆ ಮತ್ತೊಂದು ದಾರಿಯಿಂದ ಧುತ್ತೆಂದು ಎದುರಾಗುತ್ತದೆ. ಈ ಸಲ ಅದು ಮಹಿಳಾ ಕ್ರಿಕೆಟ್‌ ಅಂಗಳದಲ್ಲಿ ಪ್ರತ್ಯಕ್ಷವಾಗಿರುವುದು ಹೊಸ ಬೆಳವಣಿಗೆ. ಇದೇ ಹೊತ್ತಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್‌ (ಟಿಎನ್‌ಪಿಎಲ್) ಟೂರ್ನಿಗಳಲ್ಲಿಯೂ ಫಿಕ್ಸಿಂಗ್ ಪ್ರಕರಣಗಳು ಬಹಿರಂಗವಾಗಿವೆ. ಕೆಪಿಎಲ್ ಟೂರ್ನಿಯ ಬೆಳಗಾವಿ ಪ್ಯಾಂಥರ್ಸ್‌ ಮಾಲೀಕರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಟಿಎನ್‌ಪಿಎಲ್‌ ಟೂರ್ನಿಯ ತಂಡವೊಂದರ ಸಹಮಾಲೀಕರಾಗಿದ್ದ ಹಿರಿಯ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ (ವಿಬಿಸಿ) ಅತ್ಮಹತ್ಯೆಗೂ, ಈ ಫಿಕ್ಸಿಂಗ್ ಪ್ರಕರಣಗಳಿಗೂ ನಂಟು ಬೆಸೆಯಲಾಗುತ್ತಿದೆ. ಕೂಲಂಕಷ ತನಿಖೆಯ ನಂತರ ಸತ್ಯಾಂಶ ಹೊರಬೀಳಬೇಕಿದೆ.

ಈ ಹಿನ್ನೆಲೆಯಲ್ಲಿ ಬಿಸಿಸಿಯ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ಅಜಿತ್‌ಸಿಂಗ್ ಶೇಖಾವತ್ ಅವರು ‘ಬೆಟ್ಟಿಂಗ್‌ ಅನ್ನು ಕಾನೂನುಬದ್ಧಗೊಳಿಸಬೇಕು. ಆಗ ಅಕ್ರಮ ಬೆಟ್ಟಿಂಗ್ ವ್ಯವಹಾರಗಳು, ಆಟಗಾರರ ಮತ್ತು ಕ್ರಿಕೆಟ್ ಸಂಬಂಧಿತ ಅಧಿಕಾರಿಗಳ ಭ್ರಷ್ಟ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸ್ಟಷ್ಟ ಚಿತ್ರಣ ಸಿಗುತ್ತದೆ’ ಎಂದು ಹೇಳಿದ್ದಾರೆ.

ಬಿಸಿಸಿಐ ಆಡಳಿತ ಸುಧಾರಣೆಗೆ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರು ಮಾಡಿರುವ ಶಿಫಾರಸುಗಳಲ್ಲಿ ‘ಬೆಟ್ಟಿಂಗ್‌’ ಅನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಂಶ ಇದೆ. ಇದರಿಂದ ಜನರನ್ನು ದಿಕ್ಕು ತಪ್ಪಿಸುವ ಬೆಟ್ಟಿಂಗ್ ಮಾಫಿ ಯಾವನ್ನು ನಿಯಂತ್ರಿಸಬಹುದು ಮತ್ತು ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯವನ್ನು ತೆರಿಗೆ ರೂಪದಲ್ಲಿ ಕೊಡಬಹುದು ಎಂದು ಹೇಳಿದೆ.

ಬೆಟ್ಟಿಂಗ್ ಮತ್ತು ಮ್ಯಾಚ್‌ ಫಿಕ್ಸಿಂಗ್‌ ನಡುವೆ ಅವಿನಾಭಾವ ನಂಟಿದೆ. ಸಟ್ಟಾ ಬಜಾರಿನಲ್ಲಿ ದೊಡ್ಡ ಲಾಭ ಮಾಡಿಕೊಳ್ಳಲು ತಮಗೆ ಬೇಕಾದಂತೆ ಬಾಜಿ ಕಟ್ಟಲು ಮಾಫಿಯಾ ‘ಡ್ರೆಸ್ಸಿಂಗ್ ರೂಮ್‌’ ಪ್ರವೇಶಿಸುತ್ತಿದೆ.  ಇದೊಂದು ದೊಡ್ಡ ಅಂತರರಾಷ್ಟ್ರೀಯ ಜಾಲ. ಇವತ್ತು ಕ್ರಿಕೆಟ್‌ ಒಂದರಲ್ಲಿಯೇ ₹50 ಸಾವಿರ ಕೋಟಿಗೂ ಹೆಚ್ಚಿನ ಹಣ ಓಡಾಡುತ್ತಿದೆ. ಭೂಗತ ದೊರೆಗಳ ಹಿಡಿತ ಈ ದಂಧೆಯಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಬೆಟ್ಟಿಂಗ್ ಅನ್ನು ಕಾನೂನಿನ ಚೌಕಟ್ಟಿನೊಳಗೆ ತರುವುದರಿಂದ ಈ ಪಿಡುಗನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವೇ? ಎಂಬ ಅನುಮಾನವೂ ಕಾಡುತ್ತದೆ.

‘ಬೆಟ್ಟಿಂಗ್ ಅನ್ನು ಕಾನೂನಿನ ಚೌಕಟ್ಟಿನಲ್ಲಿ ತಂದರೆ ಅಕ್ರಮ ಬೆಟ್ಟಿಂಗ್ ನಿಲ್ಲುವುದಿಲ್ಲ. ಅದು ಇನ್ನಷ್ಟು ಬಲಿಷ್ಠವಾಗುತ್ತದೆ. ರಂಗೋಲಿ ಕೆಳಗೆ ನುಸುಳುತ್ತದೆ. ಕಾನೂನಾತ್ಮಕ ಬೆಟ್ಟಿಂಗ್‌ನಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಅದನ್ನು ತಪ್ಪಿಸಿ ಜನರಿಗೆ ಹೆಚ್ಚಿನ ಲಾಭ ನೀಡುವ ಆಮಿಷಗಳನ್ನು ಬುಕ್ಕಿಗಳು ಒಡ್ಡುತ್ತಾರೆ. ಮೋಸದಾಟದ ಬಾಬ್ತು ಮತ್ತು ವ್ಯಾಪ್ತಿ ಮತ್ತಷ್ಟು ಹೆಚ್ಚುವುದು ನಿಸ್ಸಂಶಯ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ತಲೆನೋವು ಖಚಿತ. ಸರ್ಕಾರಕ್ಕೆ ಒಂದಷ್ಟು ಆದಾಯ ಬರಬಹುದು. ಆದರೆ, ಇಡೀ ಪಿಡುಗನ್ನು ನಿಯಂತ್ರಿಸುವುದು ಕಷ್ಟ’ ಎಂದು ಹೋದ ವರ್ಷ ‘ದ ಪರ್ಸ್‌ಪೆಕ್ಟಿವ್ ’ ಡಿಬೇಟ್ ವೆಬ್‌ಸೈಟ್‌ ಅಭಿಪ್ರಾಯಪಟ್ಟಿತ್ತು.

ಕಾನೂನುಬದ್ಧ ಬೆಟ್ಟಿಂಗ್ ನಡೆಯುವ ದೇಶಗಳಲ್ಲಿಯ ಅಕ್ರಮ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿರುವುದು ಈ ಮಾತಿಗೆ ಇಂಬು ನೀಡುತ್ತದೆ. 

ಆಟಗಾರರಿಗೆ ಅರಿವಿಲ್ಲವೇ?

ಇವತ್ತು ಭಾರತದಲ್ಲಿ ಕ್ರಿಕೆಟಿಗರು ಉತ್ತಮ ಆದಾಯ ಗಳಿಸುತ್ತಿದ್ದರೂ ಇಂತಹ ಭ್ರಷ್ಟ ಕೂಪಕ್ಕೆ ಏಕೆ ಬೀಳುತ್ತಾರೆ? ಜೂನಿಯರ್, ಸೀನಿಯರ್ ಆಟಗಾರರಲ್ಲಿ ಜಾಗೃತಿ ಮೂಡಿಸಲು ಕಳೆದ ಒಂದು ದಶಕದಿಂದ ಹಲವಾರು ಕಾರ್ಯಕ್ರಮಗಳು ನಡೆದಿವೆ. ನಿಯಮಗಳು ರೂಪುಗೊಂಡಿವೆ. ಭ್ರಷ್ಟಾಚಾರ ತಡೆ ಘಟಕವು ಕೆಪಿಎಲ್‌ನಂತಹ ಸಣ್ಣ ಟೂರ್ನಿಯಿಂದ ಹಿಡಿದು ವಿಶ್ವ ಕಪ್ ಟೂರ್ನಿಯವರೆಗೂ ಕಾರ್ಯನಿರ್ವಹಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಡಿಜಿಟಲ್ ಮಾಧ್ಯಮಗಳ ಮೂಲಕ ಎಲ್ಲವನ್ನೂ ತಿಳಿದುಕೊಳ್ಳುವ ಯುವ ಆಟಗಾರರು ಈ ವಿಚಾರದಲ್ಲಿ ಏಕೆ ದಾರಿ ತಪ್ಪುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ದಿಗ್ಗಜ ಆಟಗಾರರು ಫಿಕ್ಸಿಂಗ್ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು ಭವಿಷ್ಯ, ಹೆಸರು ಹಾಳು ಮಾಡಿಕೊಂಡಿರುವ ಉದಾಹರಣೆಗಳು ಯುವ ಆಟಗಾರರಿಗೆ ಏಕೆ ಪಾಠವಾಗುತ್ತಿಲ್ಲ ಎನ್ನುವುದೇ ಸೋಜಿಗ.

ಇದನ್ನೂ ಓದಿ...ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಸಿಸಿಬಿ ವಶಕ್ಕೆ

1999–2000ದಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದಾಗ ಭಾರತದ ದಿಗ್ಗಜರಾದ ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೇಜ ಹೆಸರನ್ನೂ ಬಹಿರಂಗಗೊಳಿಸಿದ್ದರು.ಅದೇ ಪ್ರಕರಣದಲ್ಲಿ ಪಾಕ್‌ ತಂಡದ ಸಲೀಮ್ ಮಲೀಕ್, ಭಾರತದ ಮನೋಜ್ ಪ್ರಭಾಕರ್, ಅಜಯ್ ಶರ್ಮಾ ಕೂಡ ಸಿಕ್ಕಿಬಿದ್ದಿದ್ದರು. ಮನೋಜ್, ತಮ್ಮ ಹೇಳಿಕೆಯಲ್ಲಿ ಕಪಿಲ್ ದೇವ್ ಹೆಸರನ್ನು ಎಳೆದುತಂದಿದ್ದರು. ನಂತರ ಟಿವಿ ಸಂದರ್ಶನವೊಂದರಲ್ಲಿ ಕಪಿಲ್ ತಾವು ನಿರಪರಾಧಿ ಎಂದು ಕಣ್ಣೀರು ಹಾಕಿದ್ದರು.

ಹ್ಯಾನ್ಸಿ ವಿಮಾನ ಅಪಘಾತವೊಂದರಲ್ಲಿ ಮರಣಹೊಂದಿದರು. ಆನಂತರದ ವರ್ಷಗಳಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಫಿಕ್ಸಿಂಗ್ ಬೇರೆ ಬೇರೆ ರೂಪದಲ್ಲಿ ತಲೆ ಎತ್ತಿ ಕಾಡಿದೆ. 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ತಲೆಎತ್ತಿತು. ಪಾಕಿಸ್ತಾನದ ಕೆಲವು ಆಟಗಾರರು ಟೆಸ್ಟ್‌ ಪಂದ್ಯದಲ್ಲಿ ವೈಡ್, ನೋಬಾಲ್‌ಗಳಿಗೂ ಫಿಕ್ಸ್‌ ಆಗಿದ್ದು ಕ್ರಿಕೆಟ್‌ ಜಗತ್ತನ್ನು ತಲ್ಲಣಗೊಳಿಸಿತ್ತು. ಈ ಸ್ಪಾಟ್ ಫಿಕ್ಸಿಂಗ್ ಎಷ್ಟು ಪ್ರಭಾವಶಾಲಿಯಾಗಿದೆಯೆಂದರೆ, ಮೊಬೈಲ್, ಇಂಟರ್‌ನೆಟ್‌ ಮೂಲಕ ಹಳ್ಳಿ ಹಳ್ಳಿ, ಮನೆಮನೆಗಳನ್ನೂ ಹೊಕ್ಕಿದೆ. ಐಪಿಎಲ್, ಟಿಎನ್‌ಪಿಎಲ್, ಸಿಪಿಎಲ್ ಸೇರಿದಂತೆ ಹಲವಾರು ಲೀಗ್‌ ಟೂರ್ನಿಗಳಲ್ಲಿ ಈ ಸ್ಪಾಟ್‌ ಫಿಕ್ಸಿಂಗ್ ನದ್ದು ದೈತ್ಯ ಕುಣಿತ. ಇದರ ಹಿಂದೆ ಬಿದ್ದ ಎಷ್ಟೋ  ಕುಟುಂಬಗಳು ಬೀದಿಪಾಲಾಗಿವೆ.

ಇದನ್ನೂ ಓದಿ...ದುರಾಸೆ ನಿಗ್ರಹಿಸಿದರೆ ಫಿಕ್ಸಿಂಗ್ ಪಿಡುಗಿಗೆ ನಿಯಂತ್ರಣ: ಸುನಿಲ್‌

2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿ ಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ರಾಜಸ್ಥಾನ್ ರಾಯಲ್ ತಂಡಗಳು ಎರಡು ವರ್ಷ ನಿಷೇಧ ಅನುಭವಿಸಿದವು. ಸಿಎಸ್‌ಕೆ ತಂಡದ ಆಡಳಿತ ಮಂಡಳಿಯಲ್ಲಿದ್ದ ಗುರುನಾಥ್‌ ಮೇಯಪ್ಪನ್ (ಶ್ರೀನಿವಾಸನ್ ಸಂಬಂಧಿ), ರಾಜಸ್ಥಾನ್ ಫ್ರ್ಯಾಂಚೈಸ್‌ ಸಹಮಾಲೀಕ ರಾಜ್ ಕುಂದ್ರಾ ಅವರ ಮೇಲೆ ಆರೋಪ ಬಂದಿತ್ತು. ಆಟಗಾರ ಶ್ರೀಶಾಂತ್ ಕೂಡ ಜೈಲು ಸೇರಿದರು. ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೊಳಗಾದರು. ಅವರೊಂದಿಗೆ ಇನ್ನೂ ಕೆಲವು ಆಟಗಾರರೂ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಮುಂದೆ ಅವರೆಲ್ಲರೂ ನೇಪಥ್ಯಕ್ಕೆ ಸರಿದಾಯಿತು.

ಕ್ರಿಕೆಟ್‌ ಬೆಳೆದಂತೆ ಅದರ ರೋಚಕ ಅಂಶಗಳು (ಮೂರು ಮಾದರಿಗಳಲ್ಲಿಯೂ) ಬಾಜಿದಾರರಿಗೆ ಬಂಡವಾಳವಾಗುತ್ತಿವೆ. ನೇರಪ್ರಸಾರ ಇರುವ ಅಥವಾ ಇರದಿರುವ ಯಾವುದೇ ಪಂದ್ಯವೂ ಈಗ ಬೆಟ್ಟಿಂಗ್‌ನಿಂದ ಹೊರತಾಗಿಲ್ಲ. ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ದೇಶಿ ಪಂದ್ಯವನ್ನು ನೋಡಲು ಬಂದಿದ್ದ ಕೆಲವರು ಮೊಬೈಲ್‌ ಮೂಲಕ ಬೆಟ್ಟಿಂಗ್ ಮಾಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮಹಿಳಾ ಕ್ರಿಕೆಟ್‌ ಆಟಗಾರ್ತಿಯೊಬ್ಬರನ್ನು ಸಂಪರ್ಕಿಸಿರುವ ಆರೋಪದ ಮೇಲೆ ಇಬ್ಬರು ಬುಕ್ಕಿಗಳನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ವೇದಿಕೆಯೆಂದೇ ಪರಿಗಣಿಸಲಾಗಿದ್ದ ಕೆಪಿಎಲ್‌  ಟೂರ್ನಿಗೂ ಈಗ ಕಳಂಕ ಮೆತ್ತಿಕೊಂಡಿದೆ. ಪ್ರೊ ಲೀಗ್ ಟೂರ್ನಿಗಳಲ್ಲಿ ಫ್ರ್ಯಾಂಚೈಸ್‌ ಮಾಲೀಕರುಗಳೇ ಇಂತಹ ಅವ್ಯವಹಾರಗಳಿಗೆ ಕೈಹಾಕುತ್ತಿರುವುದು ಕ್ರೀಡೆಯ ದೃಷ್ಟಿಯಿಂದ ಅಪಾಯಕಾರಿ. 

‘ಇಂತಹ ಪ್ರಕರಣಗಳನ್ನು ಚಿಗುರಿನಲ್ಲಿಯೇ ಚಿವುಟಿ ಹಾಕಿದ್ದೇವೆ. ಪೊಲೀಸ್ ಇಲಾಖೆಯೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಯಾವುದೇ ಅವ್ಯವಹಾರ, ಭ್ರಷ್ಟಾಚಾರಗಳಿಗೆ ಅವಕಾಶ ಕೊಡುವುದಿಲ್ಲ. ಆಟಗಾರರಲ್ಲಿ ಈ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)