ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಂದಾನ ಅಬ್ಬರ; ಜೂಲನ್ ಮಿಂಚು

ಮಹಿಳಾ ಕ್ರಿಕೆಟ್: ನ್ಯೂಜಿಲೆಂಡ್ ಎದುರು ಎರಡನೇ ಪಂದ್ಯದಲ್ಲೂ ಗೆದ್ದ ಭಾರತ; ಮಿಥಾಲಿ ಅಜೇಯ ಆರ್ಧಶತಕ
Last Updated 29 ಜನವರಿ 2019, 20:15 IST
ಅಕ್ಷರ ಗಾತ್ರ

ಮೌಂಟ್ ಮಾಂಗನೂಯಿ: ಅನುಭವಿ ಮಧ್ಯಮವೇಗಿ ಜೂಲನ್‌ ಗೋಸ್ವಾಮಿಯವರ ಬೌಲಿಂಗ್ ಮತ್ತು ಸ್ಮೃತಿ ಮಂದಾನ ಬ್ಯಾಟಿಂಗ್ ಆಬ್ಬರದ ಮುಂದೆ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವು ಶರಣಾಯಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದ ಭಾರತ ತಂಡವು ಮೂರು ಏಕದಿನ ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಜೂಲನ್ ಗೋಸ್ವಾಮಿ (23ಕ್ಕೆ3) ಅವರ ದಾಳಿಯಿಂದಾಗಿ 44.2 ಓವರ್‌ಗಳಲ್ಲಿ 161 ರನ್‌ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತವು 35.2 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 166 ರನ್‌ ಗಳಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡದ ಸ್ಮೃತಿ ಮಂದಾನ (ಔಟಾಗದೆ 90; 82ಎಸೆತ) ಮತ್ತು ನಾಯಕಿ ಮಿಥಾಲಿ ರಾಜ್ (ಔಟಾಗದೆ 63) ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ 151 ರನ್‌ಗಳ ನೆರವಿನಿಂದ ಸುಲಭವಾಗಿ ಜಯಿಸಿತು.

ಸರಣಿಯ ಮೊದಲ ಪಂದ್ಯದಲ್ಲಿ 22 ವರ್ಷದ ಸ್ಮೃತಿ ಶತಕ (105) ಬಾರಿಸಿದ್ದರು. ಇಲ್ಲಿ ಅರ್ಧಶತಕ ಹೊಡೆದರು. ಅವರು ಈಚೆಗೆ ಆಡಿರುವ ಹತ್ತು ಇನಿಂಗ್ಸ್‌ಗಳಲ್ಲಿ ಒಟ್ಟು ಎಂಟು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ ಮಿಥಾಲಿ ಅವರು 111 ಎಸೆತಗಳಲ್ಲಿ 63 ರನ್‌ ಬಾರಿಸಿದರು. 36ನೇ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಎತ್ತದ ಮಿಥಾಲಿ ತಂಡವನ್ನು ಜಯದ ಗಡಿ ಮುಟ್ಟಿಸಿದರು.

‘ತಂಡವು ರೂಪುಗೊಳ್ಳುತ್ತಿರುವ ವಿಧಾನವು ಖುಷಿ ಕೊಟ್ಟಿದೆ. ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಆದರೂ ಉತ್ತಮವಾಗಿ ಆಡಿದ್ದಕ್ಕೆ ಸಂತಸವಾಗುತ್ತಿದೆ. ಸ್ಮೃತಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರಿಗೆ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ಕೊಟ್ಟರೆ ಸಾಕು. ಉಳಿದದ್ದನ್ನು ಅವರು ಮಾಡುತ್ತಾರೆ’ ಎಂದರು.

ಭಾರತದ ಜೂಲನ್ ಗೋಸ್ವಾಮಿ, ಏಕ್ತಾ ಬಿಷ್ಠ್ ಮತ್ತು ದೀಪ್ತಿ ಶರ್ಮಾ ಅವರ ಉತ್ತಮ ದಾಳಿಯನ್ನು ಎದುರಿಸುವಲ್ಲಿ ನ್ಯೂಜಿಲೆಂಡ್‌ನ ಬಹುತೇಕ ಆಟಗಾರ್ತಿಯರು ಎಡವಿದರು.ತಂಡವು 21 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 62 ರನ್‌ ಗಳಿಸಿತ್ತು. ಕಡಿಮೆ ಮೊತ್ತಕ್ಕೆ ಆಲೌಟ್‌ ಆಗುವ ಆತಂಕ ಎದುರಿಸಿತ್ತು.

ಆದರೆ, ತಂಡದ ನಾಯಕಿ ಏಮಿ ಸೆಟ್ಟರ್‌ವೇಟ್ (71; 87ಎಸೆತ) ದಿಟ್ಟತನದಿಂದ ಆಡಿದರು. ಇದರಿಂದಾಗಿ 150 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಆದರೆ, ಉಳಿದ ಆಟಗಾರ್ತಿಯರಿಂದ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. 34ನೇ ಓವರ್‌ನಲ್ಲಿ ಪೂನಂ ಯಾದವ್ ಎಸೆತದಲ್ಲಿ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT