ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್‌: ಗುಜರಾತ್‌ ಜೈಂಟ್ಸ್‌ ವಿರುದ್ಧ ವಾರಿಯರ್ಸ್‌ಗೆ ಜಯ

ಗ್ರೇಸ್ ಹ್ಯಾರಿಸ್ ಅರ್ಧಶತಕ l ಸೋಫಿ ಎಕ್ಲೆಸ್ಟೋನ್ ಮಿಂಚು
Published 1 ಮಾರ್ಚ್ 2024, 18:20 IST
Last Updated 1 ಮಾರ್ಚ್ 2024, 18:20 IST
ಅಕ್ಷರ ಗಾತ್ರ

ಬೆಂಗಳೂರು: ಗ್ರೇಸ್ ಹ್ಯಾರಿಸ್ ಅವರ ಅಜೇಯ ಅರ್ಧಶತಕ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ಯುಪಿ ವಾರಿಯರ್ಸ್‌ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಶುಕ್ರವಾರ ಗುಜರಾತ್‌ ಜೈಂಟ್ಸ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಈ ಸಾಧಾರಣ ಗುರಿಯನ್ನು ಯುಪಿ ವಾರಿಯರ್ಸ್‌ ತಂಡವು ಇನ್ನೂ 26 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 143 ರನ್‌ ಸೇರಿಸಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿತು. ಯುಪಿ ತಂಡದ ಗ್ರೇಸ್ ಹ್ಯಾರಿಸ್ (ಔಟಾಗದೆ 60, 33ಎ, 4x9, 6x2) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ನಾಯಕಿ ಅಲಿಸಾ ಹೀಲಿ (33, 21ಎ, 4x7) ಬೆಂಬಲ ನೀಡಿದರು.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಮತ್ತೆ ಎರಡರಲ್ಲಿ ಸೋತಿರುವ ಯುಪಿ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಆಡಿರುವ ಮೂರು ಪಂದ್ಯದಲ್ಲಿ ಸೋತಿರುವ ಜೈಂಟ್ಸ್‌ ಕೊನೆಯ ಸ್ಥಾನದಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ತಂಡವು ಉತ್ತಮ ಆರಂಭವನ್ನೇನೊ ಮಾಡಿತ್ತು. ಲಾರಾ ವೊಲ್ವಾರ್ಡ್‌ (28, 26ಎ, 4x4) ಮತ್ತು ನಾಯಕಿ ಬೆತ್‌ ಮೂನಿ (16, 16 ಎಸೆತ) ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 41 ರನ್ ಸೇರಿಸಿದರು. ಪವರ್‌ಪ್ಲೇ ಅವಧಿಯೊಳಗೆ ಮೂನಿ ನಿರ್ಗಮಿಸಿದರು.

‌ವೋಲ್ವಾರ್ಡ್‌ ಅವರು ಮಧ್ಯಮ ವೇಗಿ ಅಂಜಲಿ ಸರ್ವಾಣಿ ಬೌಲಿಂಗ್‌ನಲ್ಲಿ ಆಫ್‌ಸೈಡ್‌ಗೆ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ಆದರೆ ಪವರ್‌ಪ್ಲೇ ಅವಧಿ (6 ಓವರ್‌: 1 ವಿಕೆಟ್‌ಗೆ 41) ಮುಗಿಯುತ್ತಿದ್ದಂತೆ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಎಡಗೈ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್ ಬೌಲಿಂಗ್‌ನಲ್ಲಿ ಹೊಡೆತಕ್ಕೆ ಮುನ್ನುಗ್ಗಿದ ಅವರು ಮಿಡ್‌ ಆಫ್‌ನಲ್ಲಿ ಕ್ಯಾಚಿತ್ತರು.

ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಫೋಬಿ ಲಿಚ್‌ಫೀಲ್ಡ್‌ (35, 26 ಎಸೆತ) ಮತ್ತು ಆ್ಯಶ್ಲೆ ಗಾರ್ಡನರ್‌ (30, 17ಎ, 4x4, 1x6) ಅವರು ನಾಲ್ಕನೇ ವಿಕೆಟ್‌ಗೆ ವೇಗವಾಗಿ 52 ರನ್ ಸೇರಿಸಿದ್ದರಿಂದ ಜೈಂಟ್ಸ್ ತಂಡ ಗೌರವದ ಮೊತ್ತ ತಲುಪಲು ಸಾಧ್ಯವಾಯಿತು. ಇಬ್ಬರೂ 19ನೇ ಓವರ್‌ನಲ್ಲಿ ನಿರ್ಗಮಿಸಿದರು. ವಾರಿಯರ್ಸ್‌ ಬೌಲರ್‌ಗಳ ಪೈಕಿ ಸೋಫಿ ಪರಿಣಾಮಕಾರಿಯಾಗಿದ್ದು, 20 ರನ್ನಿಗೆ ಮೂರು ವಿಕೆಟ್ ಪಡೆದು ಮಿಂಚಿದರು.

ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್‌ ತಂಡದ ಅಲಿಸಾ ಹೀಲಿ ಮತ್ತು ಕಿರಣ್ ನವಗಿರೆ (12) ಮೊದಲ ವಿಕೆಟ್‌ಗೆ 42 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 90 ರನ್‌ ಆಗುವಷ್ಟರಲ್ಲಿ ಪ್ರಮುಖ ಆಟಗಾರ್ತಿಯರಾದ ಅಲಿಸಾ, ಕಿರಣ್‌, ಚಾಮರಿ ಅಟ್ಟಪಟ್ಟು (17) ಮತ್ತು ಶ್ವೇತಾ ಸೆಹ್ರಾವತ್ (2) ನಿರ್ಗಮಿಸಿದರು. ಈ ಹಂತದಲ್ಲಿ ಗ್ರೇಸ್ ಅವರು ದೀಪ್ತಿ ಶರ್ಮಾ (ಔಟಾಗದೆ 17) ಅವರೊಂದಿಗೆ ತಾಳ್ಮೆಯ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಸ್ಕೋರುಗಳು: ಗುಜರಾತ್ ಜೈಂಟ್ಸ್‌: 20 ಓವರುಗಳಲ್ಲಿ 5 ವಿಕೆಟ್‌ಗೆ 142 (ಲಾರಾ ವೋಲ್ವಾರ್ಡ್‌ 28, ಫೋಬಿ ಲಿಚ್‌ಫೀಲ್ಡ್‌ 35, ಆಶ್ಲೆ ಗಾರ್ಡನರ್‌ 30; ಸೋಫಿ ಎಕ್ಲೆಸ್ಟೋನ್ 20ಕ್ಕೆ3) ಯುಪಿ ವಾರಿಯರ್ಸ್‌: 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 143 (ಗ್ರೇಸ್ ಹ್ಯಾರಿಸ್ ಔಟಾಗದೆ 60, ಅಲಿಸಾ ಹೀಲಿ 33; ತನುಜಾ ಕನ್ವರ್ 23ಕ್ಕೆ 2). ಫಲಿತಾಂಶ: ಯುಪಿ ವಾರಿಯರ್ಸ್‌ಗೆ 6 ವಿಕೆಟ್‌ ಜಯ.

ಶನಿವಾರದ ಪಂದ್ಯ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು– ಮುಂಬೈ ಇಂಡಿಯನ್ಸ್‌ (ರಾತ್ರಿ 7.30)

ನೇರಪ್ರಸಾರ: ಸ್ಪೋರ್ಟ್ಸ್‌ 18.

ಎಕ್ಲೊಸ್ಟನ್, ಹ್ಯಾರಿಸ್ ಮಿಂಚು, ಯುಪಿ ವಾರಿಯರ್ಸ್​ಗೆ ಸತತ 2ನೇ ಗೆಲುವು; ಗುಜರಾತ್ ಜೈಂಟ್ಸ್​ಗೆ ಹ್ಯಾಟ್ರಿಕ್ ಸೋಲು
ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ ಗುಜರಾತ್ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್​ನ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 40 ರನ್​ಗಳು ಹರಿದುಬಂದವು. ಆದರೆ, ನಾಯಕಿ ಬೆತ್​ ಮೂನಿ 16, ಲಾರಾ ವೊಲ್ವಾರ್ಡ್ಟ್ 28 ರನ್​ ಗಳಿಸಿ ಔಟಾದರು. ಬಳಿಕ ಕಣಕ್ಕಿಳಿದ ಹರ್ಲೀನ್ ಡಿಯೋಲ್ 24 ಎಸೆತಗಳಲ್ಲಿ 18 ರನ್ ಗಳಿಸಿ ನೀರಸ ಪ್ರದರ್ಶನ ನೀಡಿದರೆ, ಫೀಬಿ ಲಿಚ್​ಫೀಲ್ಡ್ ಮತ್ತು ಆ್ಯಶ್ಲೆ ಗಾರ್ಡ್ನರ್​ ಜೋಡಿ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಲಿಚ್​​ಫೀಲ್ಡ್ 26 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 35 ರನ್ ಗಳಿಸಿ ರನೌಟ್ ಆದರು. ಗಾರ್ಡ್ನರ್​ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ನೆರವಿನಿಂದ 30 ರನ್ ಬಾರಿಸಿದರು. ದಯಾಲನ್ ಹೇಮಲತಾ 2, ಕ್ಯಾಥರಿನ್ ಬ್ರೈಸ್ 5 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಅಂತಿಮವಾಗಿ ಗುಜರಾತ್ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಯುಪಿ ವಾರಿಯರ್ಸ್ ಪರ ಸೋಫಿ ಎಕ್ಲೊಸ್ಟನ್ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದು ಮಿಂಚಿದರು.
ಹ್ಯಾರಿಸ್ ಅರ್ಧಶತಕ
ಇನ್ನು 143 ರನ್​ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಯುಪಿ ಕೂಡ ಉತ್ತಮ ಆರಂಭ ಪಡೆಯಿತು. ಅಲೀಸಾ ಹೀಲಿ 33, ಕಿರಣ್ ನವ್​ಗಿರೆ 12 ರನ್, ಚಾಮರಿ ಅಟ್ಟಪಟ್ಟು 17 ರನ್ ಗಳಿಸಿದರು. ಆದರೆ, ಅಗ್ರ ಕ್ರಮಾಂಕದ ಮೂವರಿಂದ ಪರಿಣಾಮಕಾರಿ ಇನ್ನಿಂಗ್ಸ್​ ಬರಲಿಲ್ಲ. ಈ ಹಂತದಲ್ಲಿ ಸ್ಫೋಟಕ ಆಟವಾಡಿದ ಗ್ರೇಸ್ ಹ್ಯಾರಿಸ್ ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ಎರಡನೇ ಗೆಲುವು ತಂದುಕೊಟ್ಟರು. ಐದನೇ ವಿಕೆಟ್​ಗೆ ದೀಪ್ತಿ ಶರ್ಮಾ ಜೊತೆಗೂಡಿ ಅರ್ಧಶತಕದ ಪಾಲುದಾರಿಕೆ ನೀಡಿದ ಗ್ರೇಸ್ ಹ್ಯಾರಿಸ್, 33 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ ಅಜೇಯ 60 ರನ್ ಚಚ್ಚಿದರು. 181.82ರ ಸ್ಟ್ರೈಕ್​​ರೇಟ್​ ಹೊಂದಿದ್ದರು. ಇನ್ನು ದೀಪ್ತಿ ಶರ್ಮಾ 14 ಎಸೆತಗಳಲ್ಲಿ 3 ಬೌಂಡರಿ ಸಹಿತ 17 ರನ್ ಕಲೆ ಹಾಕಿದರು. ಅಂತಿಮವಾಗಿ 15.4 ಓವರ್​​ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಯುಪಿ ವಾರಿಯರ್ಸ್ ಆಡುವ 11 ಬಳಗ ಅಲಿಸ್ಸಾ ಹೀಲಿ (ವಿಕೆಟ್ ಕೀಪರ್, ನಾಯಕಿ), ಕಿರಣ್ ನವಗಿರೆ, ಚಾಮರಿ ಅಟ್ಟಪಟ್ಟು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಸೋಫಿ ಎಕ್ಲೊಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್. ಗುಜರಾತ್ ಜೈಂಟ್ಸ್ ಆಡುವ 11 ಬಳಗ ಹರ್ಲೀನ್ ಡಿಯೋಲ್, ಬೆತ್ ಮೂನಿ (ನಾಯಕಿ & ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಫೋಬೆ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ಸ್ನೇಹ ರಾಣಾ, ತನುಜಾ ಕನ್ವರ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT