ಶುಕ್ರವಾರ, ಏಪ್ರಿಲ್ 3, 2020
19 °C
ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ಎದುರು ಕೌರ್‌ ಬಳಗದ ಹಣಾಹಣಿ ಇಂದು

ಜಯದ ‘ಹ್ಯಾಟ್ರಿಕ್‌’ನತ್ತ ಭಾರತ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ : ‌ಆಸ್ಟ್ರೇಲಿಯಾದ ಕ್ರಿಕೆಟ್‌ ಅಂಗಳಗಳಲ್ಲಿ ಈಗ ಪೂನಂ ಯಾದವ್ ಅವರ ಲೆಗ್‌ಸ್ಪಿನ್ ಮೋಡಿ ನಡೆಯುತ್ತಿದೆ. ಅವರ ಗೂಗ್ಲಿ ಎಸೆತಗಳಿಗೆ ಹಾಲಿ ಚಾಂಪಿಯನ್  ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳು ಚಿತ್ ಆಗಿವೆ.

ಗುರುವಾರ ಇಲ್ಲಿ ನಡೆಯಲಿರುವ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ’ಎ’ ಗುಂಪಿನಲ್ಲಿ ಮೂರನೇ ಪಂದ್ಯ ಆಡಲು ಸಿದ್ಧವಾಗಿರುವ ಭಾರತದ ಎದುರು ಕಣಕ್ಕಿಳಿಯಲಿರುವ ನ್ಯೂಜಿಲೆಂಡ್‌ ಬಳಗಕ್ಕೆ ಪೂನಂ ಅವರ ಭಯ ಕಾಡುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಈ ಪಂದ್ಯದಲ್ಲಿ ಜಯಿಸಿದರೆ ಸೆಮಿಫೈನಲ್ ಅರ್ಹತೆ ಪಡೆಯುವುದು ಸುಲಭವಾಗುತ್ತದೆ.

ಬೌಲಿಂಗ್‌ನಲ್ಲಿ ಪೂನಂ, ರಾಜೇಶ್ವರಿ ಗಾಯಕವಾಡ್ ಮತ್ತು ಮಧ್ಯಮವೇಗಿ ಶಿಖಾ ಪಾಂಡೆ ಅವರು  ತಮ್ಮ ಹೊಣೆಯನ್ನು ಚಾಣಾಕ್ಷತೆಯಿಂದ ನಿರ್ವಹಿಸಿದ್ದಾರೆ. ಹಿಂದಿನ ಎರಡೂ ಪಂದ್ಯಗಳ ಜಯದಲ್ಲಿ ಇವರ ಆಟವೇ ಪ್ರಮುಖವಾಗಿತ್ತು. ಈ ಪಂದ್ಯಗಳಲ್ಲಿ ಬ್ಯಾಟ್ಸ್‌ವುಮನ್‌ಗಳು ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಿರಲಿಲ್ಲ.

16 ವರ್ಷದ ಶೆಫಾಲಿ ವರ್ಮಾ ಆಸ್ಟ್ರೇಲಿಯಾ ಎದುರು 29 ಮತ್ತು ಬಾಂಗ್ಲಾ ಎದುರು 39 ರನ್‌ ಗಳಿಸಿ ಮಿಂಚಿದ್ದರು. ಜೆಮಿಮಾ ರಾಡ್ರಿಗಸ್ ಕೂಡ (26 ಮತ್ತು 34) ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ.  ಎರಡನೇ ಪಂದ್ಯದಲ್ಲಿ ಸ್ಮೃತಿ ಮಂದಾನಾ ಅವರು ಜ್ವರದ ಕಾರಣ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ನಿರೀಕ್ಷೆ
ಇದೆ.

ಮಧ್ಯಮ ಕ್ರಮಾಂಕದ ಆಟಗಾರ್ತಿ ದೀಪ್ತಿ ಶರ್ಮಾ ಮೊದಲ ಪಂದ್ಯದಲ್ಲಿ ಕೇವಲ ಒಂದು ರನ್‌ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡಿದ್ದರು. ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಕೂಡ ತಮ್ಮ ಮಿಂಚಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ.

ತಾನಿಯಾ ಭಾಟಿಯಾ ಚುರುಕಿನ ವಿಕೆಟ್‌ಕೀಪಿಂಗ್ ಕೂಡ ಭಾರತದ ಯಶಸ್ಸಿನಲ್ಲಿ ಮಹತ್ವದ ಪಾತ್ರ
ವಹಿಸಿದೆ.

ಆದರೆ ನ್ಯೂಜಿಲೆಂಡ್ ಸುಲಭವಾಗಿ ಮಣಿಯುವ ತಂಡವಲ್ಲ. ಈ ತಂಡವು ಆಡಿರುವ ಏಕೈಕ ಪಂದ್ಯದಲ್ಲಿ  ಶ್ರೀಲಂಕಾ ವಿರುದ್ಧ ಜಯಿಸಿದೆ. ಎಡಗೈ ಮಧ್ಯಮವೇಗಿ ಹೈಲಿ ಜೆನ್ಸೆನ್ ಮೂರು ವಿಕೆಟ್ ಗಳಿಸಿದ್ದರು. ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರು. ನಾಯಕಿ ಸೋಫಿ ಡಿವೈನ್ (ಔಟಾಗದೆ 75) ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಇದರಿಂದಾಗಿ ಭಾರತ ತಂಡಕ್ಕೆ ವಿಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿಯುವ ಸವಾಲು ಇದೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ಶೆಫಾಲಿ ವರ್ಮಾ ಅಮೋಘವಾಗಿ ಆಡುತ್ತಿದ್ದಾರೆ. ಇದರಿಂದಾಗಿ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ. ಅವರೊಂದಿಗೆ ಇನಿಂಗ್ಸ್‌ ಕಟ್ಟುವುದು ಸುಲಭ
–ಸ್ಮೃತಿ ಮಂದಾನ ಭಾರತದ ಆಟಗಾರ್ತಿ

 

ನೈಟ್ ಶತಕ: ಇಂಗ್ಲೆಂಡ್‌ಗೆ ಜಯ

ಕ್ಯಾನ್‌ಬೆರ್ರಾ: ಹೀತರ್ ನೈಟ್ (ಔಟಾಗದೆ 108; 86ಎಸೆತ, 13ಬೌಂಡರಿ, 4ಸಿಕ್ಸರ್) ಅವರ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಬಿ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 98 ರನ್‌ಗಳ ಸುಲಭ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು:ಇಂಗ್ಲೆಂಡ್: 20 ಓವರ್‌ಗಳಲ್ಲಿ 2ಕ್ಕೆ 176 (ನಥಾಲಿ ಸೀವರ್ ಔಟಾಗದೆ 59, ಹೀಥರ್ ನೈಡ್ ಔಟಾಗದೆ 108), ಥಾಯ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ78 (ನಾಟೇಕನ್ ಚಾಂಟಮ್ 32, ನಾರೆಮೊಯ್ ಚಾಯವೈ ಔಟಾಗದೆ 19, ಅನ್ಯಾ ಶ್ರಬ್‌ಸೋಲ್ 21ಕ್ಕೆ3, ನಥಾಲಿ ಸೀವರ್ 5ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 98 ರನ್‌ಗಳ ಜಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು