ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಡಿತ ಬಿಡದ ಕಾಂಗರೂ ಪಡೆ; ಕೆರೀಬಿಯನ್ನರಿಂದ ದೂರಾದ ಗೆಲುವು

ವಿಶ್ವಕಪ್‌ ಕ್ರಿಕೆಟ್‌: 5 ವಿಕೆಟ್‌ ಪಡೆದ ಸ್ಟಾರ್ಕ್‌
Last Updated 6 ಜೂನ್ 2019, 20:01 IST
ಅಕ್ಷರ ಗಾತ್ರ

ನಾಟಿಂಗಂ(ಇಂಗ್ಲೆಂಡ್‌):ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೇಥನ್ ಕಾಲ್ಟರ್‌ನೈಲ್ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಗುರುವಾರ ಟ್ರೆಂಟ್‌ಬ್ರಿಜ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ತಂಡವು 15 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಆಸ್ಟ್ರೇಲಿಯಾ ಬ್ಯಾಟಿಂಗ್ ನ ಆರಂಭ ಚೆನ್ನಾಗಿರಲಿಲ್ಲ. ವಿಂಡೀಸ್ ಬೌಲರ್‌ಗಳಾದ ಓಷೇನ್ ಥಾಮಸ್ (63ಕ್ಕೆ2) ಮತ್ತು ಶೇಲ್ಡನ್ ಕಾಟ್ರೆಲ್ (56ಕ್ಕೆ2) ಮತ್ತು ಆ್ಯಂಡ್ರೆ ರಸೆಲ್ (41ಕ್ಕೆ2) ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ ಆಸ್ಟ್ರೇಲಿಯಾ 16.1 ಓವರ್‌ಗಳಲ್ಲಿ 79 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನೇಥನ್ (92;60ಎಸೆತ, 8ಬೌಂಡರಿ, 4ಸಿಕ್ಸರ್) ಅವರು ಆಸ್ಟ್ರೇಲಿಯಾ ತಂಡವು ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಅವರಿಗೆ ಸ್ಟೀವನ್ ಸ್ಮಿತ್ (73; 103ಎ, 7ಬೌಂ) ಉತ್ತಮ ಜೊತೆ ನೀಡಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 49 ಓವರ್‌ಗಳಲ್ಲಿ 288 ರನ್‌ ಗಳಿಸಿತು.

ಅದಕ್ಕುತ್ತರವಾಗಿ ವಿಂಡೀಸ್ ಬಳಗವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 273 ರನ್‌ ಗಳಿಸಿ ಪರಾಭವಗೊಂಡಿತು. ಐದು ವಿಕೆಟ್ ಪಡೆದ ಮಿಷೆಲ್ ಸ್ಟಾರ್ಕ್ ಮಿಂಚಿದರು. ವಿಶ್ವಕಪ್ ಇತಿಹಾಸದಲ್ಲಿ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಮೊತ್ತದ ದಾಖಲೆ ಬರೆದರು. 2003ರಲ್ಲಿ ಜಿಂಬಾಬ್ವೆ ತಂಡದ ಹೀತ್ ಸ್ಟ್ರೀಕ್ (72 ರನ್) ಅವರ ದಾಖಲೆಯನ್ನು ಮೀರಿ ನಿಂತರು. ಒಟ್ಟಾರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿ ದೊಡ್ಡ ಸ್ಕೋರ್ ಗಳಿಸಿದ ಶ್ರೇಯವೂ ಅವರದ್ದಾಯಿತು. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್‌ (95 ರನ್) ಇದ್ದಾರೆ.

153.3ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ನೇಥನ್ ಶತಕದ ಸನಿಹ ಎಡವಿದರು. 49ನೇ ಓವರ್‌ನಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಹಾಕಿದ ಎಸೆತವನ್ನು ಬೌಂಡರಿ ಬಾರಿಸುವ ಭರದಲ್ಲಿ ಫೀಲ್ಡರ್ ಜೇಸನ್ ಹೋಲ್ಡರ್‌ಗೆ ಕ್ಯಾಚಿತ್ತರು. ಎಂಟು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.

ತಿರುವು ನೀಡಿದ ಕ್ಯಾಚ್: ಒಂದು ಹಂತದಲ್ಲಿ ವಿಂಡೀಸ್ ಗುರಿ ಮುಟ್ಟುವುದು ಕಷ್ಟವೆಂದು ತೋರಿದ್ದ ಸಂದರ್ಭದಲ್ಲಿ ನಾಯಕ ಜೇಸನ್ ಹೋಲ್ಡರ್ ( 51 ರನ್) ಅರ್ಧಶತಕ ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, 46ನೇ ಓವರ್‌ನಲ್ಲಿ ಮಿಷೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಸಿಕ್ಸರ್‌ ಎತ್ತುವ ಹೋಲ್ಡರ್‌ ಪ್ರಯತ್ನ ಕೈಕೊಟ್ಟಿತು. ಫೀಲ್ಡರ್ ಆ್ಯಡಂ ಜಂಪಾ ಪಡೆದ ಕ್ಯಾಚ್‌ ಪಂದ್ಯಕ್ಕೆ ತಿರುವು ನೀಡಿತು. ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ವಿಂಡೀಸ್‌ ಬಳಗಕ್ಕೆ ಇದೇನೂ ದೊಡ್ಡ ಗುರಿ ಆಗಿರಲಿಲ್ಲ. ಆರಂಭದಲ್ಲಿ ಎಡವಿದರೂ ಮಧ್ಯಮಕ್ರಮಾಂಕದ ಶಾಯ್ ಹೋಪ್ (68 ರನ್) ಮತ್ತು ನಿಕೊಲಸ್ ಪೂರನ್ (40 ರನ್) ಅವರಿಬ್ಬರ ಆಟದಿಂದ ಚೇತರಿಸಿಕೊಂಡಿತು. 20ನೇ ಓವರ್‌ನಲ್ಲಿ ಪೂರನ್ ಔಟಾದರು. ಆಗಿನ್ನೂ ತಂಡದ ಮೊತ್ತ ನೂರು ರನ್ ಕೂಡ ಆಗಿರಲಿಲ್ಲ. ಆಗ ಶಿಮ್ರೊನ್ ಹೆಟ್ಮೆಯರ್ (21 ರನ್) ಮತ್ತು ಹೋಲ್ಡರ್ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಆ್ಯಂಡ್ರೆ ರಸೆಲ್ ಮತ್ತು ಕಾರ್ಲೋಸ್ ಬ್ರಾಥ್‌ವೈಟ್ ದೊಡ್ಡ ಇನಿಂಗ್ಸ್‌ ಕಟ್ಟದಿರುವುದು ತಂಡಕ್ಕೆ ಹಿನ್ನಡೆಯಾಯಿತು.

ಸ್ಮಿತ್ ಅರ್ಧಶತಕ: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷದ ಶಿಕ್ಷೆ ಮುಗಿಸಿ ತಂಡಕ್ಕೆ ಮರಳಿರುವ ಸ್ಟೀವನ್ ಸ್ಮಿತ್ ಅರ್ಧಶತಕ ಹೊಡೆದು ತಂಡಕ್ಕೆ ಆಸರೆಯಾದರು. ಸ್ವೀವ್ ಸ್ಮಿತ್ ಅವರು ಅಲೆಕ್ಸ್‌ ಕ್ಯಾರಿ (45 ರನ್) ಅವರೊಂದಿಗೆ ಆರನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ ಸೇರಿಸಿದರು. ಇಬ್ಬರೂ ತಾಳ್ಮೆಯಿಂದ ಬೌಲರ್‌ಗಳನ್ನು ಎದುರಿಸಿದ್ದರಿಂದ ವಿಕೆಟ್ ಪತನ ತಡೆಯಲು ಸಾಧ್ಯವಾಯಿತು. ಆ್ಯಂಡ್ರೆ ರಸೆಲ್ 31ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದರು. ಅಲೆಕ್ಸ್‌ ಕ್ಯಾರಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT