ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಅಭಿಯಾನ ಮುಗಿಸಿದ ವಿಂಡೀಸ್‌

ಅಫ್ಗಾನಿಸ್ತಾನಕ್ಕೆ ಮರೀಚಿಕೆಯಾದ ಜಯ: ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋತ ಗುಲ್ಬದಿನ್‌ ಪಡೆ
Last Updated 4 ಜುಲೈ 2019, 19:57 IST
ಅಕ್ಷರ ಗಾತ್ರ

ಲೀಡ್ಸ್: ಈ ಸಲದ ವಿಶ್ವಕ ಪ್‌ನಲ್ಲಿ ಗೆಲುವು ದಾಖಲಿಸುವ ಅಫ್ಗಾನಿಸ್ತಾನದ ಕನಸು ‌ಕೊನೆಗೂ ಕೈಗೂಡಲಿಲ್ಲ. ಕೆಚ್ಚೆದೆಯ ಹೋರಾಟ ತೋರಿಯೂ ಈ ತಂಡ ಗುರುವಾರ ವೆಸ್ಟ್‌ ಇಂಡೀಸ್‌ ಎದುರು 23 ರನ್‌ಗಳಿಂದ ಪರಾಭವಗೊಂಡಿತು. ಇದರೊಂದಿಗೆ ಗುಲ್ಬದಿನ್‌ ನೈಬ್‌ ಪಡೆ ಈ ಸಲ ಆಡಿದ ಒಂಬತ್ತು ಪಂದ್ಯಗಳಲ್ಲಿಯೂ ನಿರಾಸೆ ಕಂಡು ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ವಿಂಡೀಸ್‌ ಒಂಬತ್ತನೇ ಸ್ಥಾನದಲ್ಲೇ ಉಳಿಯಿತು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಮೋಘ ಆಟದಿಂದಾಗಿ ಕೆರಿಬಿಯನ್‌ ತಂಡ 6 ವಿಕೆಟ್‌ಗೆ 311ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಅಫ್ಗಾನ್‌ 288 ರನ್‌ ಪೇರಿಸಿತು. ಒಷೇನ್‌ ಥಾಮಸ್‌ ಬೌಲ್‌ ಮಾಡಿದ 50ನೇ ಓವರ್‌ನ ಕೊನೆಯ ಎಸೆತದಲ್ಲಿ ಸೈಯದ್‌ ಶಿರ್ಜಾದ್‌ ಬಾರಿಸಿದ ಚೆಂಡನ್ನು ಕವರ್ಸ್‌ನಲ್ಲಿದ್ದ ಫ್ಯಾಬಿಯನ್‌ ಅಲೆನ್‌ ಆಕರ್ಷಕ ರೀತಿಯಲ್ಲಿ ಹಿಡಿಯುತ್ತಿದ್ದಂತೆ ಅಫ್ಗಾನ್‌ ಇನಿಂಗ್ಸ್‌ಗೆ ತೆರೆ ಬಿತ್ತು.

ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ ಎರಡನೇ ಓವರ್‌ನಲ್ಲಿ ನಾಯಕ ನೈಬ್‌ ವಿಕೆಟ್‌ ಕಳೆದುಕೊಂಡಿತು. ನಂತರ ರಹಮತ್‌ ಶಾ (62; 78ಎ, 10ಬೌಂ) ಮತ್ತು ಇಕ್ರಂ ಅಲಿ ಖಿಲ್‌ (86; 93ಎ, 8ಬೌಂ) ಆಕರ್ಷಕ ಆಟ ಆಡಿದರು. ಈ ಜೋಡಿ ವಿಂಡೀಸ್‌ ಬೌಲರ್‌ಗಳ ಬೆವರಿಳಿಸಿತು. ಎರಡನೇ ವಿಕೆಟ್‌ಗೆ 133ರನ್‌ ಕಲೆಹಾಕಿ ಪ್ರತಿರೋಧ ತೋರಿತು. 27ನೇ ಓವರ್‌ನಲ್ಲಿ ರಹಮತ್‌, ಕಾರ್ಲೊಸ್‌ ಬ್ರಾಥ್‌ವೇಟ್‌ಗೆ ವಿಕೆಟ್‌ ನೀಡಿದರು. ಬಳಿಕ ನಜೀಬುಲ್ಲಾ ಜದ್ರಾನ್‌ (31) ಜೊತೆ ಸೇರಿದ ಇಕ್ರಂ ಇನಿಂಗ್ಸ್‌ ಬೆಳೆಸಿದರು. ಇವರು ಮೂರನೇ ವಿಕೆಟ್‌ಗೆ ಅರ್ಧಶತಕದ (51) ಜೊತೆಯಾಟವಾಡಿದರು. ಅಸ್ಗರ್‌ ಅಫ್ಗಾನ್‌ (40; 32ಎ, 4ಬೌಂ, 1ಸಿ) ಬಿರುಸಿನ ಆಟ ಆಡಿದರು. ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಗಳು ವೈಫಲ್ಯ ಕಂಡಿದ್ದರಿಂದ ತಂಡದ ಗೆಲುವಿನ ಆಸೆ ಕಮರಿತು.

ನಡೆಯದ ಗೇಲ್‌ ಆಟ: ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ವಿಂಡೀಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಮತ್ತೊಮ್ಮೆ ವಿಫಲರಾದರು. ನಿವೃತ್ತಿಯ ಅಂಚಿ ನಲ್ಲಿರುವ ಅವರು 18 ಎಸೆತಗಳಲ್ಲಿ ಕೇವಲ ಏಳು ರನ್ ಗಳಿಸಿ ದೌಲತ್ ಜದ್ರಾನ್‌ಗೆ ವಿಕೆಟ್ ಒಪ್ಪಿಸಿದರು. ಎವಿನ್ ಲೂಯಿಸ್ (58; 78 ಎಸೆತ, 2 ಸಿಕ್ಸರ್‌, 6 ಬೌಂಡರಿ) ಅವರ ಜೊತೆಗೂಡಿದ ಶಾಯ್ ಹೋಪ್ (77; 92 ಎಸೆತ, 2 ಸಿ, 6 ಬೌಂ) ಎರಡನೇ ವಿಕೆಟ್‌ಗೆ 88 ರನ್ ಸೇರಿಸಿ ತಂಡದ ಮೊತ್ತವನ್ನು ಮೂರಂಕಿಯ ಗಡಿ ದಾಟಿಸಿದರು.

25ನೇ ಓವರ್‌ನಲ್ಲಿ ಲೂಯಿಸ್‌ ಔಟಾದರು. ಈ ಸಂದರ್ಭದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಭರವಸೆ ಮೂಡಿಸಿದರು. 31 ಎಸೆತಗಳಲ್ಲಿ 39 ರನ್ ಗಳಿಸಿದ್ದ ಅವರನ್ನು ದೌಲತ್ ಜದ್ರಾನ್ ಎಸೆತದಲ್ಲಿ ಬದಲಿ ಆಟಗಾರ ನೂರ್ ಅಲಿ ಜದ್ರಾನ್ ‘ಚುರುಕಿನ’ ಕ್ಯಾಚ್‌ ಮೂಲಕ ಔಟ್ ಮಾಡಿದರು.

ಎರಡು ಓವರ್‌ಗಳ ನಂತರ ಹೋಪ್ ಕೂಡ ನಿರ್ಗಮಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 65 ರನ್ ಸೇರಿಸಿದ್ದರು.

ಪೂರನ್–ಹೋಲ್ಡರ್ ಮಿಂಚಿನ ಬ್ಯಾಟಿಂಗ್‌: ಅಂತಿಮ ಓವರ್‌ಗಳಲ್ಲಿ ನಿಕೋಲಸ್ ಪೂರನ್ (58; 43 ಎ, 1 ಸಿ, 6 ಬೌಂ) ಮತ್ತು ಜೇಸನ್ ಹೋಲ್ಡರ್ (45; 34ಎ, 4 ಸಿ, 1 ಬೌಂ) ಮಿಂಚಿನ ಬ್ಯಾಟಿಂಗ್ ಮೂಲಕ ರನ್ ಗತಿ ಏರಿಸಿದರು. 38ನೇ ಓವರ್‌ನಲ್ಲಿ 4ಕ್ಕೆ 192 ರನ್‌ ಗಳಿಸಿದ್ದಾಗ ಜೊತೆಯಾದ ಈ ಜೋಡಿ 71 ಎಸೆತಗಳಲ್ಲಿ ಗಳಿಸಿದ 105 ರನ್‌ಗಳು ತಂಡ 300ರ ಗಡಿ ದಾಟಲು ನೆರವಾದವು. ‌ಈ ಜೋಡಿಯ ಭರ್ಜರಿ ಆಟಕ್ಕೆ ಹೆಚ್ಚು ಬೆಲೆ ತೆತ್ತವರು ದೌಲತ್ ಜದ್ರಾನ್. ಅವರು ಒಂಬತ್ತು ಓವರ್‌ಗಳಲ್ಲಿ 73 ರನ್ ನೀಡಿದರು. ಇನಿಂಗ್ಸ್‌ನ ಮಧ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಸ್ಪಿನ್ನರ್‌ಗಳಾದ ಮುಜೀಬ್ ಉರ್ ರಹಮಾನ್, ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT