ಶುಕ್ರವಾರ, ಏಪ್ರಿಲ್ 16, 2021
31 °C
ಭಾರತಕ್ಕೆ ಏಳು ವಿಕೆಟ್‌ಗಳ ಜಯ * ಏಂಜೆಲೊ ಮ್ಯಾಥ್ಯೂಸ್ ಶತಕ ವ್ಯರ್ಥ * ಶ್ರೀಲಂಕಾ ತಂಡಕ್ಕೆ ನಿರಾಸೆ * ರಾಹುಲ್‌ಗೆ ನೂರರ ಸಂಭ್ರಮ

ಪಂಚ ಶತಕಗಳ ಪರಾಕ್ರಮಿ ‘ರೋಹಿತ್ ಶರ್ಮಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೀಡ್ಸ್: ಹೆಡಿಂಗ್ಲೆ ಮೈದಾನದಲ್ಲಿ ಶನಿವಾರ ‘ವಿಶ್ವ’ದಾಖಲೆ ಬರೆದ ರೋಹಿತ್ ಶರ್ಮಾ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಶತಕ ದಾಖಲಿಸಿದ ಕನ್ನಡಿಗ ಕೆ.ಎಲ್. ರಾಹುಲ್ ಮಿಂಚಿದರು.

ಇದರಿಂದಾಗಿ ಭಾರತ ತಂಡವು ರೌಂಡ್‌ ರಾಬಿನ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಏಂಜೆಲೊ ಮ್ಯಾಥ್ಯೂಸ್ ಶತಕದ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 264 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತ ತಂಡವು ರೋಹಿತ್ (103; 94ಎಸೆತ, 14ಬೌಂಡರಿ, 2ಸಿಕ್ಸರ್) ಮತ್ತು ರಾಹುಲ್ (111; 118ಎಸೆತ, 11ಬೌಂಡರಿ, 1ಸಿಕ್ಸರ್)ಮೊದಲ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ 189 ರನ್‌ಗಳಿಂದಾಗಿ 43.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 265 ರನ್ ಗಳಿಸಿತು. ಇದರೊಂದಿಗೆ ಭಾರತ ತಂಡವು ಒಟ್ಟು 15 ಅಂಕಗಳನ್ನು ಗಳಿಸಿತು.

ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಐದು ಶತಕ ಹೊಡೆದ ವಿಶ್ವದಾಖಲೆಯನ್ನು ರೋಹಿತ್ ಬರೆದರು. ಅಲ್ಲದೇ  600ಕ್ಕೂ ಹೆಚ್ಚು ರನ್‌ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು. ಇದುವರೆಗೆ ಒಟ್ಟು 647 ರನ್‌ ಗಳಿಸಿ ಹೆಚ್ಚು ರನ್‌ ಹೊಡೆದಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಅವರು ಯಾವುದೇ ಹಂತದಲ್ಲಿಯೂ ಕಳಪೆ ಹೊಡೆತವಾಡಲಿಲ್ಲ. ಅಲ್ಲದೇ ‘ಜೀವದಾನ’ವನ್ನೂ ಪಡೆಯಲಿಲ್ಲ. 29ನೇ ಓವರ್‌ನಲ್ಲಿ ರಜಿತಾ ಎಸೆತವನ್ನು ಬೌಂಡರಿಗೆರೆ ದಾಟಿಸಿದ ‘ಹಿಟ್‌ಮ್ಯಾನ್’ ಶತಕದ ಸಂಭ್ರಮ ಆಚರಿಸಿದರು. ಅವರು ಎಡಗೈನಲ್ಲಿ ಹೆಲ್ಮೆಟ್ ತೆಗೆದು, ಬಲಗೈನಲ್ಲಿ ಬ್ಯಾಟ್ ತೋಳಗಲಿಸಿ ಪೆವಿಲಿಯನ್‌ನತ್ತ ನಗೆ ಬೀರಿದರು. ವಿರಾಟ್, ರವಿಶಾಸ್ತ್ರಿ ಮತ್ತು ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಗಣ್ಯರ ಗ್ಯಾಲರಿಯಲ್ಲಿದ್ದ ರೋಹಿತ್ ಪತ್ನಿ ರಿತಿಕಾ ಸಜ್ದೆ  ಅವರು ಮಗಳು ಸಮೈರಾ ಜೊತೆ ಈ ಸಂಭ್ರಮವನ್ನು ಕಣ್ಣುತುಂಬಿಕೊಂಡರು. ವಿರಾಟ್ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಅಲ್ಲಿದ್ದರು.

ರಾಹುಲ್ ಸಾಧನೆ: ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ರಾಹುಲ್ ಶತಕ ಹೊಡೆದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಶತಕವಾಗಿದೆ. 2016ರಲ್ಲಿ ಅವರು ಹರಾರೆಯಲ್ಲಿ ಜಿಂಬಾಬ್ವೆಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ್ದರು. ಇದು ಅವರ 22ನೇ ಪಂದ್ಯ. ಈ ಟೂರ್ನಿಯಲ್ಲಿ ಅವರು ಎರಡು ಅರ್ಧಶತಕಗಳನ್ನೂ ಬಾರಿಸಿದ್ದಾರೆ.

ಬೂಮ್ರಾ ಮೂರು; ಮ್ಯಾಥ್ಯೂಸ್ ನೂರು!: ಇದಕ್ಕೆ ಮೊದಲು, ಜಸ್‌ಪ್ರೀತ್‌ ಬೂಮ್ರಾ ಆರಂಭದಲ್ಲಿಯೇ ನೀಡಿದ ಪೆಟ್ಟಿಗೆ ಏಂಜೆಲೊ ಮ್ಯಾಥ್ಯೂಸ್ ಶತಕದ ಉತ್ತರ ನೀಡಿದರು. 

ಮ್ಯಾಥ್ಯೂಸ್‌ ಕ್ರೀಸ್‌ಗೆ ಬಂದಾಗ ನಾಯಕ ದಿಮುತ್‌ ಕರುಣಾರತ್ನೆ, ಕುಶಾಲ್ ಪೆರೆರಾ ಮತ್ತು ಕುಶಾಲ್‌ ಮೆಂಡಿಸ್ ಪೆವಿಲಿಯನ್‌ಗೆ ಮರಳಿದ್ದರು. ಕೆಲವೇ ನಿಮಿಷಗಳ ನಂತರ ಅವಿಷ್ಕಾ ಫರ್ನಾಂಡೊ ಕೂಡ ನಿರ್ಗಮಿಸಿದ್ದರು. ಈ ನಾಲ್ಕು ವಿಕೆಟ್‌ಗಳಲ್ಲಿ ಎರಡು ಬೂಮ್ರಾ ಅವರ ಖಾತೆ ಸೇರಿದ್ದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ತಲಾ ಒಂದು ಗಳಿಸಿದ್ದರು. ಈ ಹಂತದಲ್ಲಿ ತಂಡವು 11.4 ಓವರ್‌ಗಳಲ್ಲಿ ಕೇವಲ 55 ರನ್‌ ಗಳಿಸಿತ್ತು. ಈ ನಾಲ್ಕು ವಿಕೆಟ್‌ಗಳ ಪತನದಲ್ಲಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರ ಪಾತ್ರವೂ ಮಹತ್ವದ್ದಾಗಿತ್ತು. ಅವರು ಮೂರು ಕ್ಯಾಚ್ ಮತ್ತು ಒಂದು ಮಿಂಚಿನ ವೇಗದ ಸ್ಟಂಪಿಂಗ್ ಮಾಡಿದರು.

ಮ್ಯಾಥ್ಯೂಸ್‌ ಮತ್ತು ಲಾಹಿರು ತಿರಿಮನ್ನೆ (53; 68ಎಸೆತ, 4ಬೌಂಡರಿ  ) ಜೋಡಿಯು 157 ಎಸೆತಗಳಲ್ಲಿ 124 ರನ್‌ಗಳನ್ನು ಸೇರಿಸಿದ್ದರಿಂದ ತಂಡ ಚೇತರಿಸಿಕೊಂಡಿತು. ಒಟ್ಟು 115 ಎಸೆತಗಳಲ್ಲಿ ಮ್ಯಾಥ್ಯೂಸ್‌ ಶತಕದ ಗಡಿ ದಾಟಿದರು. ಈ ದಾರಿಯಲ್ಲಿ ಅವರು ಎರಡು ಸಿಕ್ಸರ್ ಕೂಡ ಸಿಡಿಸಿದರು. 37ನೇ ಓವರ್‌ನಲ್ಲಿ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಲಾಂಗ್‌ ಆನ್‌ಗೆ ಸಿಕ್ಸರ್‌ಗೆ ಎತ್ತಲು ಮ್ಯಾಥ್ಯೂಸ್ ಯತ್ನಿಸಿದರು. ಅಲ್ಲಿದ್ದ ಫೀಲ್ಡರ್‌ ಭುವನೇಶ್ವರ್ ಕುಮಾರ್ ಕ್ಯಾಚ್ ಕೈಚೆಲ್ಲಿದರು.

ಚೈನಾಮನ್ ಬೌಲರ್ ಕುಲದೀಪ್ ಯಾದವ್  38ನೇ ಓವರ್‌ನಲ್ಲಿ ತಿರಿಮನ್ನೆ ವಿಕೆಟ್ ಗಳಿಸಿದರು. ಮ್ಯಾಥ್ಯೂಸ್ ಜೊತೆಗೂಡಿದ ಧನಂಜಯ ಡಿಸಿಲ್ವಾ ಶಿಸ್ತಿನ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಆರನೇ ವಿಕೆಟ್‌ ಜೊತೆಯಾಟದಲ್ಲಿ 74 ರನ್‌ಗಳನ್ನು ಸೇರಿಸಿದರು. 

ಬೂಮ್ರಾ ‘ಶತಕ’
ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ನೂರು ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್‌ ಎಂಬ ಸಾಧನೆ ಮಾಡಿದರು.

ಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ ಅವರ ವಿಕೆಟ್ ಗಳಿಸಿದರು. ಅದು ಅವರ ನೂರನೇ ವಿಕೆಟ್‌.  57 ಪಂದ್ಯಗಳನ್ನು ಅವರು ಆಡಿದ್ದಾರೆ. 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದ ಮೊಹಮ್ಮದ್ ಶಮಿ ಮೊದಲ ಸ್ಥಾನದಲ್ಲಿದ್ದಾರೆ. ವೇಗದ ನೂರು ವಿಕೆಟ್‌ ಗಳಿಕೆಯ ಸಾಧನೆ ಮಾಡಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ ಎಂಟನೇ ಸ್ಥಾನ ಪಡೆದಿದ್ದಾರೆ. ಶಮಿ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ.

‘ಭಾರತ ವಿರೋಧಿ ಘೋಷಣೆ ಬ್ಯಾನರ್‌ ಚೆಲ್ಲಿದ ದುಷ್ಕರ್ಮಿಗಳು’
ಶನಿವಾರ ಮಧ್ಯಾಹ್ನ ಭಾರತ ಮತ್ತು ಶ್ರೀಲಂಕಾ ನಡುವಣ ಪಂದ್ಯ ನಡೆಯುವಾಗ ಅಪರಿಚಿತ ವಿಮಾನವೊಂದರ ಮೂಲಕ ಭಾರತ ವಿರೋಧಿ ಘೋಷಣೆಗಳು ಇರುವ ಬ್ಯಾನರ್‌ಗಳನ್ನು ಹೆಡಿಂಗ್ಲೆ ಮೈದಾನಕ್ಕೆ ಚೆಲ್ಲಿದ ಘಟನೆ ನಡೆಯಿತು.

‘ಕಾಶ್ಮೀರಕ್ಕೆ ನ್ಯಾಯ ಕೊಡಿ’ ಎಂದು ಬರೆದಿದ್ದ ಬ್ಯಾನರ್‌ಗಳನ್ನು ಚೆಲ್ಲಿದರು. ಕೆಲವು ನಿಮಿಷಗಳ ನಂತರ ಮತ್ತೆ ಬಂದ ಇನ್ನೊಂದು ವಿಮಾನದ ಮೂಲಕ ‘ಭಾರತವೇ ನರಮೇಧ ನಿಲ್ಲಿಸು. ಕಾಶ್ಮೀರವನ್ನು ಸ್ವತಂತ್ರಗೊಳಿಸು’ ಎಂಬ ಒಕ್ಕಣೆಗಳು ಇದ್ದ ಭಿತ್ತಿಪತ್ರಗಳನ್ನು ಚೆಲ್ಲಲಾಯಿತು.

ಹತ್ತು ದಿನಗಳ ಹಿಂದೆ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ನಡೆದಿದ್ದ ಪಂದ್ಯದ ಸಂದರ್ಭದಲ್ಲಿ ಉಭಯ ತಂಡಗಳ ಅಭಿಮಾನಿಗಳು ಹೊಡೆದುಕೊಂಡಿದ್ದರು. ಬ್ರಾಡ್‌ಫೋರ್ಡ್ ವಿಮಾನ ನಿಲ್ದಾಣದಲ್ಲಿ ಅಂದು ಇಳಿದಿದ್ದ ಅನಾಮಧೇಯ ವಿಮಾನದ ಮೇಲೆ ‘ಜಸ್ಟಿಸ್‌ ಫಾರ್ ಬಲೂಚಿಸ್ತಾನ್’  ಎಂಬ ಒಕ್ಕಣೆ ಇದ್ದ ಬ್ಯಾನರ್ ಪ್ರದರ್ಶಿಸಲಾಗಿತ್ತು.

ಲೀಡ್ಸ್‌ ಇರುವ ಯಾರ್ಕ್‌ಶೈರ್ ಉತ್ತರ ಇಂಗ್ಲೆಂಡ್‌ನಲ್ಲಿದೆ. ಅಲ್ಲಿ ಪಾಕಿಸ್ತಾನ ಮೂಲದ ಜನರು ಬಹಳಷ್ಟು ಸಂಖ್ಯೆಯಲ್ಲಿ ವಾಸವಾಗಿದ್ದಾರೆ.

ಶನಿವಾರದ ಘಟನೆಯ ಕುರಿತು ಪ್ರತಿಕ್ರಿಯಿಸಿರುವ  ಐಸಿಸಿಯು, ‘ಟೂರ್ನಿಯಲ್ಲಿ ಯಾವುದೇ ರಾಜಕೀಯ ಪ್ರೇರಿತ ಚಟುವಟಿಕೆಗೆ ಅವಕಾಶ ಇಲ್ಲ. ಆದರೆ ಇವತ್ತಿನ ಘಟನೆಯು ದುರದೃಷ್ಟಕರ. ಸ್ಥಳೀಯ ಪೊಲೀಸ್ ಮತ್ತು ಜನತೆಯೊಂದಿಗೆ ಈ ಮೊದಲೇ ಸಾಕಷ್ಟು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗಿತ್ತು’ ಎಂದಿದೆ.

ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಡೇವ್ ರಿಚರ್ಡ್ಸನ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಫೈನಲ್‌ಗೆ ಭಾರತ–ಇಂಗ್ಲೆಂಡ್ | ನಿಜವಾಗುತ್ತಾ ಗೂಗಲ್ ಸಿಇಒ ಭವಿಷ್ಯ​

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು