ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌, ಕಿವೀಸ್‌ಗೆ ಇಂದು ನಿರ್ಣಾಯಕ ಪಂದ್ಯ:ಗೆದ್ದ ತಂಡ ಸೆಮಿಫೈನಲ್‌ಗೆ ಲಗ್ಗೆ

ಭಾರತದ ವಿರುದ್ಧ ಜಯಿಸಿದ ಉತ್ಸಾಹದಲ್ಲಿ ಇಯಾನ್‌ ಮಾರ್ಗನ್‌ ಬಳಗ
Last Updated 2 ಜುಲೈ 2019, 19:31 IST
ಅಕ್ಷರ ಗಾತ್ರ

ಚೆಸ್ಟರ್‌ ಲೀ ಸ್ಟ್ರೀಟ್‌, ಇಂಗ್ಲೆಂಡ್‌: ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ಬುಧವಾರ ನಡೆಯುವ ವಿಶ್ವಕಪ್‌ನ ರೌಂಡ್‌ರಾಬಿನ್‌ ಲೀಗ್‌ನ ತಮ್ಮ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವಾಗಿದ್ದು, ಗೆಲುವು ಸೆಮಿಫೈನಲ್‌ ಸ್ಥಾನವನ್ನು ಖಚಿತಪಡಿಸಲಿದೆ.

ಒಂದೊಮ್ಮೆ ಸೋತ ತಂಡಕ್ಕೂ ಸೆಮಿಫೈನಲ್‌ ಅವಕಾಶದ ಬಾಗಿಲು ಮುಚ್ಚಿದಂತೆ ಎಂದು ಹೇಳುವ ಹಾಗಿಲ್ಲ. ಅದು ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಒಂದು ವೇಳೆ, ಇಂಗ್ಲೆಂಡ್‌ ಸೋತುಹೋದರೆ ಮತ್ತು ಪಾಕಿಸ್ತಾನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ಆಗ ಪಾಕಿಸ್ತಾನ ತಂಡಕ್ಕೆ ನಾಕೌಟ್‌ ಅದೃಷ್ಟ ಖುಲಾಯಿಸುತ್ತದೆ.

ಒಂದೊಮ್ಮೆ ನ್ಯೂಜಿಲೆಂಡ್‌ ಸೋತಲ್ಲಿ, ಆ ತಂಡಕ್ಕೆ ಅವಕಾಶ ಇಲ್ಲವೆಂದೇನಿಲ್ಲ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ನಡುವಣ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಆ ತಂಡದ ಜೊತೆ ಸಮಾನ ಅಂಕ ಗಳಿಸಲು ಸಾಧ್ಯವಾಗುತ್ತದೆ.

ನ್ಯೂಜಿಲೆಂಡ್‌ ಬುಧವಾರದ ಪಂದ್ಯದಲ್ಲಿ ದೊಡ್ಡ ಅಂತರದಿಂದ ಸೋತಲ್ಲಿ ಮತ್ತು ಪಾಕಿಸ್ತಾನ ಶುಕ್ರವಾರ ನಡೆಯುವ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸುಲಭವಾಗಿ ಜಯಗಳಿಸಿದರೆ, ಆಗ ಪಾಕ್‌ ತಂಡಕ್ಕೆ ಅವಕಾಶವಾಗಿ, 2015ರ ಫೈನಲಿಸ್ಟ್‌ ಕಿವೀಸ್‌ ತಂಡ ಹೋರಬೀಳಲಿದೆ.

ಅಜೇಯವಾಗಿದ್ದ ಭಾರತ ವಿರುದ್ಧ ಭಾನುವಾರ ಸಾಧಿಸಿದ 31 ರನ್‌ ಗೆಲುವಿನಿಂದ ಇಂಗ್ಲೆಂಡ್‌ ತಂಡ ಉತ್ಸಾಹದಿಂದ ಇದೆ.

ಈ ಪಂದ್ಯಕ್ಕೆ ಒಂದೆರಡು ದಿನ ಮೊದಲು ಭಾರತ, ಇಂಗ್ಲೆಂಡ್‌ ತಂಡವನ್ನು ಹಿಂದಿಕ್ಕಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಸೋಲುಗಳಿಂದ ಇಂಗ್ಲೆಂಡ್‌ ಆತ್ಮವಿಶ್ವಾಸದ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಇಂಗ್ಲೆಂಡ್‌ ಮೊದಲ ಸಲ ವಿಶ್ವಕಪ್‌ ಎತ್ತಿ ಹಿಡಿಯುವ ಆಸೆಯಲ್ಲಿದೆ.

ಭಾರತ ವಿರುದ್ಧ ಪಂದ್ಯದಲ್ಲಿ ಜಾನಿ ಬೆಸ್ಟೊ (111) ಶತಕ ಬಾರಿಸಿದರೆ, ಗಾಯಾಳಾಗಿ ಕೆಲವು ಪಂದ್ಯ ಕಳೆದುಕೊಂಡಿದ್ದ ಜೇಸನ್‌ ರಾಯ್‌ (66) ಮೊದಲ ವಿಕೆಟ್‌ಗೆ 160 ರನ್‌ ಸೇರಿಸಿದ್ದರು. ಬೆನ್‌ ಸ್ಟೋಕ್ಸ್‌ ಕೊನೆಯ ಕೆಲವು ಓವರುಗಳಲ್ಲಿ ಬಿರುಸಿನ ಅರ್ಧ ಶತಕ ಬಾರಿಸಿದ್ದರು. ಅದು ಅವರ ಸತತ ಮೂರನೇ ಅರ್ಧಶತಕವಾಗಿತ್ತು.

ಭಾರತ ತಂಡವನ್ನು ಆತಿಥೇಯರು ಬಿಗಿ ದಾಳಿ ಮತ್ತು ಉತ್ತಮ ಕ್ಷೇತ್ರರಕ್ಷಣೆಯಿಂದ ಕಟ್ಟಿಹಾಕಿದ್ದರು. ಕ್ರಿಸ್‌ ವೋಕ್ಸ್‌ ಪರಿಣಾಮಕಾರಿಯಾಗಿದ್ದರೆ, ತಂಡಕ್ಕೆ ಪುನರಾಗಮನ ಮಾಡಿದ್ದ ಲಿಯಾಂ ಪ್ಲಂಕೆಟ್‌ (55ಕ್ಕೆ3)
ಮಧ್ಯದ ಓವರುಗಳಲ್ಲಿ ಯಶಸ್ವಿಯಾಗಿದ್ದರು.

ಎರಡು ಪಂದ್ಯ ಸೋತ ಒತ್ತಡದ ಸನ್ನಿವೇಶದಲ್ಲಿ ಈ ಪಂದ್ಯ ಗೆದ್ದಾಗ, ಮನಃಸ್ಥಿತಿ ಉತ್ತಮವಾಗಿರುತ್ತದೆ. ಅದೂ ನ್ಯೂಜಿಲೆಂಡ್‌ ವಿರುದ್ಧ ಪಂದ್ಯ ಇರುವಾಗ ಎಂದು ವೋಕ್ಸ್‌ ಹೇಳಿದರು.

ಇನ್ನೊಂದೆಡೆ, ನ್ಯೂಜಿಲೆಂಡ್‌ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋತಿದೆ. ಇದು ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಕಂಡ ತಂಡಕ್ಕೆ ಕೊಂಚ ಹಿನ್ನಡೆ ಎನಿಸಿದೆ.

ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧಿಸಿದ್ದ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ ಮತ್ತು ವೇಗದ ಬೌಲರ್‌ ಲಾಕಿ ಫರ್ಗ್ಯುಸನ್‌ ಅವರನ್ನು ಒಳಗೊಂಡ ದಾಳಿ ಎದುರಿಸುವುದು ಯಾವುದೇ ತಂಡಕ್ಕೆ ಸವಾಲೇ ಸರಿ. ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಕಡಿಮೆಯಿದ್ದು, ಕಿವೀಸ್‌ ತಂಡ ಇನ್ನೊಬ್ಬ ವೇಗಿ ಮ್ಯಾಟ್‌ ಹೆನ್ರಿ ಅವರನ್ನು ಈಶ್‌ ಸೋಧಿ ಬದಲು ಸೇರ್ಪಡೆ ಮಾಡಿಕೊಳ್ಳಬಹುದು.

ಇಂಗ್ಲೆಂಡ್‌ನ ಕೆಲವು ಆಟಗಾರರು ಈ ವಿಶ್ವಕಪ್‌ನಲ್ಲಿ ಶತಕ ಹೊಡೆದಿದ್ದರೆ, ನ್ಯೂಜಿಲೆಂಡ್‌ ಬಲವಾಗಿ ನಂಬಿರುವುದು ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಅವರನ್ನು.

ಆಸ್ಟ್ರೇಲಿಯಾ ವಿರುದ್ಧ ಕಾಲಿನ್‌ ಮನ್ರೊ ಅವರನ್ನು ಕೈಬಿಡಲಾಗಿತ್ತು. ಮಾರ್ಟಿನ್‌ ಗಪ್ಟಿಲ್‌ ವಿಫಲರಾಗಿದ್ದು 6 ಇನಿಂಗ್ಸ್‌ಗಳಿಂದ ಬರೇ 85 ರನ್‌ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಗಳಿಸಿದ ಅಜೇಯ 73 ಅತ್ಯಧಿಕ. ಕೀಪರ್‌– ಬ್ಯಾಟ್ಸ್‌ಮನ್‌ ಟಾಮ್‌ ಲಥಾಮ್‌ ಕೂಡ ರನ್‌ ಬರ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT