ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಆಲ್‌ರೌಂಡರ್ ವಿಜಯ ಶಂಕರ್‌ಗೆ ಗಾಯ

Last Updated 20 ಜೂನ್ 2019, 14:27 IST
ಅಕ್ಷರ ಗಾತ್ರ

ಸೌತಾಂಪ್ಟನ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ವಿಜಯಶಂಕರ್ ಅವರು ಬುಧವಾರ ಸಂಜೆ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದಾರೆ.

ನೆಟ್ಸ್‌ನಲ್ಲಿ ಅವರಿಗೆ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬೂಮ್ರಾ ಅವರ ಯಾರ್ಕರ್‌ ಎಸೆತವು ವಿಜಯಶಂಕರ್ ಅವರ ಕಾಲಿನ ಹೆಬ್ಬೆರಳಿಗೆ ಬಡಿಯಿತು. ಇದರಿಂದಾಗಿ ವಿಜಯಶಂಕರ್ ನೋವಿನಿಂದ ನರಳಿದರು. ನಂತರ ಅಭ್ಯಾಸವನ್ನು ಮೊಟಕುಗೊಳಿಸಿದರು.

‘ವಿಜಯ್ ಅವರಿಗೆ ಪೆಟ್ಟಾಗಿದೆ. ಆದರೆ ಗಂಭೀರ ಗಾಯವಾಗಿಲ್ಲ. ಸಂಜೆಯವರೆಗೆ ನೋವು ಶಮನವಾಗುವ ನಿರೀಕ್ಷೆ ಇದೆ. ಆತಂಕಪಡುವಂತಹ ವಿಷಯವೇನಿಲ್ಲ’ ಎಂದು ತಂಡದ ಮೂಲಗಳು ತಿಳಿಸಿವೆ.

ಆದರೆ, ಗುರುವಾರ ಬೆಳಿಗ್ಗೆ ವಿಜಯ್ ಅವರು ಕುಂಟುತ್ತಲೇ ನಡೆಯುತ್ತಿದ್ದರು. ನಿಧಾನವಾಗಿ ಓಡುವ ಪ್ರಯತ್ನವನ್ನೂ ಅವರು ಮಾಡಿದರು. ಹೆಚ್ಚು ದೂರ ಹೋಗಲಾಗದೇ ವಿಶ್ರಾಂತಿ ಪಡೆದರು. ನಂತರ ಸ್ವಲ್ಪ ಹೊತ್ತು ವಾರ್ಮ್‌ ಅಪ್ ವ್ಯಾಯಾಮಗಳನ್ನು ಮಾಡಿದರು. ನೆಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಪಾಕ್ ಎದುರಿನ ಪಂದ್ಯದಲ್ಲಿ ಸ್ನಾಯುಸೆಳೆತ ಅನುಭವಿಸಿದ್ದ ಭುವನೇಶ್ವರ್ ಕುಮಾರ್ ಕೂಡ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಕೆಲವು ವಾರ್ಮ್ ಅಪ್ ವ್ಯಾಯಾಮಗಳನ್ನು ಮಾಡಿದರು.

ತಮಿಳುನಾಡಿನದ ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮವೇಗದ ಬೌಲರ್ ವಿಜಯಶಂಕರ್ ಅವರು ಈಚೆಗೆ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಡಿದ್ದರು. ಎರಡು ವಿಕೆಟ್‌ಗಳನ್ನೂ ಗಳಿಸಿದ್ದರು. ಶಿಖರ್ ಧವನ್ ಗಾಯಗೊಂಡಿದ್ದರಿಂದ ಆ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಕೆ.ಎಲ್. ರಾಹುಲ್ ಅವರು ಇನಿಂಗ್ಸ್‌ ಆರಂಭಿಸಿದ್ದರು. ಆದ್ದರಿಂದ ವಿಜಯಶಂಕರ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗಿತ್ತು.

ಶಿಖರ್ ಈಗಾಗಲೇ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ರಿಷಭ್ ಪಂತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರು ಕೇವಲ 2.4 ಓವರ್‌ ಬೌಲಿಂಗ್ ಮಾಡಿದ್ದರು. ನಂತರ ವಿಜಯಶಂಕರ್ ಭುವಿಯ ಬದಲಿಗೆ ಬೌಲಿಂಗ್ ಮಾಡಿದರು. ಪಾಕ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಮತ್ತು ನಾಯಕ ಸರ್ಫರಾಜ್ ಅಹಮದ್ ಅವರ ವಿಕೆಟ್ ಗಳಿಸಿದ್ದರು.

ಮುಂದಿನ ಎರಡು ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ ಆಡುತ್ತಿಲ್ಲ. ಒಂದೊಮ್ಮೆ ವಿಜಯಶಂಕರ್ ಅವರೂ ಫಿಟ್‌ ಆಗದಿದ್ದರೆ ಮೀಸಲು ಆಟಗಾರ, ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಅಥವಾ ಅನುಭವಿ ಇಶಾಂತ್ ಶರ್ಮಾ ಅವರಲ್ಲಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಬಿಸಿಸಿಐ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT