ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ದಕ್ಷಿಣ ಆಫ್ರಿಕಾ ಮಣಿಸಿದ ಪಾಕಿಸ್ತಾನ

Last Updated 25 ಜೂನ್ 2019, 7:18 IST
ಅಕ್ಷರ ಗಾತ್ರ

ಲಾರ್ಡ್ಸ್, ಲಂಡನ್: ಲಯಕ್ಕೆ ಮರಳಿದ ಹ್ಯಾರಿಸ್ ಸೊಹೈಲ್ ಮತ್ತು ಬಾಬರ್ ಅಜಂ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತಂಡವು ಭಾನುವಾರ ಜಯಭೇರಿ ಬಾರಿಸಿತು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 308 ರನ್‌ ಗಳಿಸಿತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 259 ರನ್ ಗಳಿಸಿತು. ಪಾಕ್ 49 ರನ್‌ಗಳಿಂದ ಗೆದ್ದಿತು. ಹೋದ ಪಂದ್ಯದಲ್ಲಿ ಪಾಕ್ ಬಳಗವು ಭಾರತದ ಎದುರು ಸೋತಿತ್ತು.

ಸರ್ಫರಾಜ್ ಬಳಗವು ಟೂರ್ನಿಯಲ್ಲಿ ಒಟ್ಟು ಆರು ಪಂದ್ಯಗಳನ್ನು ಆಡಿದೆ. ಇದು ಎರಡನೇ ಗೆಲುವು. ಒಟ್ಟು ಮೂರರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಆದ್ದರಿಂದ ಒಟ್ಟು ಐದು ಪಾಯಿಂಟ್‌ ಗಳಿಸಿ ಏಳನೇ ಸ್ಥಾನದಲ್ಲಿದೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶದ ಆಸೆ ಜೀವಂತವಾಗುಳಿಯುವ ಸಾಧ್ಯತೆ ಇದೆ.

ಆದರೆ, ಫಾಫ್ ಡುಪ್ಲೆಸಿ ತಂಡವು ನಾಲ್ಕರ ಘಟ್ಟದ ಪ್ರವೇಶಿಸಲು ಯಾವ ಹಾದಿಯೂ ಉಳಿದಿಲ್ಲ. ಏಳು ಪಂದ್ಯಗಳ ಪೈಕಿ ಐದರಲ್ಲಿ ಸೋತು ಹೊರಬಿದ್ದಿದೆ. ಕೇವಲ ಒಂದರಲ್ಲಿ ಗೆದ್ದಿತ್ತು. ಇನ್ನೊಂದು ಪಂದ್ಯ ರದ್ದಾಗಿತ್ತು.

ಸೊಹೈಲ್–ಬಾಬರ್ ಮಿಂಚು: ಹ್ಯಾರಿಸ್ (89; 59ಎಸೆತ, 9ಬೌಂಡರಿ, 3ಸಿಕ್ಸರ್) ಈ ಪಂದ್ಯದಲ್ಲಿ ಮಿಂಚಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಅವರು ಕ್ರೀಸ್‌ಗೆ ಬರುವ ಮುನ್ನ ತಂಡವು 29.6 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 143 ರನ್‌ ಗಳಿಸಿತ್ತು. ಆರಂಭಿಕ ಜೋಡಿ ಇಮಾಮ್ ಉಲ್ ಹಕ್ (44; 58ಎಸೆತ, 6 ಬೌಂಡರಿ) ಮತ್ತು ಫಕ್ರ್‌ ಜಮಾನ್ (44; 50ಎಸೆತ, 6ಬೌಂಡರಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 81 ರನ್‌ ಗಳಿಸಿದರು. ಆ ಇವರಿಬ್ಬರ ವಿಕೆಟ್ ಕಬಳಿಸಿದ್ದ ತಾಹೀರ್ ಆತಂಕ ಮೂಡಿಸಿದ್ದರು.

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಬಾಬರ್ ಆಜಂ ತಾಳ್ಮೆಯಿಂದ ಆಡುತ್ತಿದ್ದರು. ಅವರೊಂದಿಗೆ ಸೇರಿದ ಸೊಹೈಲ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಕಲೆಹಾಕಿದರು. ಅರ್ಧಶತಕ ಗಳಿಸಿದ ಬಾಬರ್ (69; 80ಎಸೆತ, 7ಬೌಂಡರಿ) ಔಟಾದ ನಂತರವೂ ಸೊಹೈಲ್ ಬಿರುಸಿನ ಆಟವನ್ನು ಮುಂದುವರಿಸಿದರು. ಅವರು ಕೊನೆಯ ಓವರ್‌ನಲ್ಲಿ ಔಟಾಗುವ ಮುನ್ನ ತಂಡವು ಮುನ್ನೂರು ರನ್‌ಗಳ ಗಡಿ ದಾಟುವಂತೆ ನೋಡಿಕೊಂಡರು.

ಅಮೀರ್–ವಹಾಬ್ ಸ್ವಿಂಗ್: ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊಹಮ್ಮದ್ ಆಮಿರ್ ಆರಂಭದಲ್ಲಿಯೇ ಆಘಾತ ನೀಡಿದರು. ಅನುಭವಿ ಬ್ಯಾಟ್ಸ್‌ಮನ್ ಆಮ್ಲಾ ಅವರ ವಿಕೆಟ್ ಪಡೆದರು. ನಂತರ ಹೋರಾಟ ಮಾಡಿದ ಕ್ವಿಂಟನ್ ಡಿಕಾಕ್ (47 ರನ್)ಮತ್ತು ನಾಯಕ ಡುಪ್ಲೆಸಿ (63 ರನ್) ಅವರ ಜೊತೆಯಾಟವನ್ನು ಶಾದಾಬ್ ಖಾನ್ ಮುರಿದರು. ಡುಪ್ಲೆಸಿ ವಿಕೆಟ್ ಕಬಳಿಸಿದ ಅಮೀರ್ ಮಿಂಚಿದರು.

ಕೊನೆಯ ಹಂತದಲ್ಲಿ ರಿವರ್ಸ್ ಸ್ವಿಂಗ್ ಮೂಲಕ ಮಿಂಚಿದ ವಹಾಬ್ ರಿಯಾಜ್ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸಿದರು. ಆ್ಯಂಡಿಲೆ ಪಿಶುವಾಯೊ (ಔಟಾಗದೆ 46; 32ಎಸೆತ, 6ಬೌಂಡರಿ) ಮಾತ್ರ ದಿಟ್ಟತನದಿಂದ ಆಡಿದರು.

ಸಂಕ್ಷಿಪ್ತ ಸ್ಕೋರ್‌ಗೆ ಇಲ್ಲಿ ಕ್ಲಿಕ್ಕಿಸಿ:https://bit.ly/2X0FfKP

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT