ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ವಿಶ್ವಕಪ್‌ಗೆ ಭಾರತ ತಂಡ: ಕನ್ನಡಿಗ ರಾಹುಲ್‌ಗೆ ಲಂಡನ್ ಟಿಕೆಟ್‌

ರಿಷಭ್‌ ಪಂತ್‌ಗೆ ಸಿಗದ ಅವಕಾಶ: ದಿನೇಶ್‌ ಕಾರ್ತಿಕ್‌ಗೆ ನೆರವಾದ ಅನುಭವ
Last Updated 16 ಏಪ್ರಿಲ್ 2019, 2:42 IST
ಅಕ್ಷರ ಗಾತ್ರ

ಮುಂಬೈ: ಮುಂಬರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಯಾರ‍್ಯಾರಿಗೆ ಅವಕಾಶ ಸಿಗಬಹುದು ಎಂಬ ಕುತೂಹಲಕ್ಕೆ ಸೋಮವಾರ ತೆರೆ ಬಿದ್ದಿದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ಮೊದಲ ಸಲ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

26ರ ಹರೆಯದ ರಾಹುಲ್‌, ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ರಾಹುಲ್‌, ನಂತರ ಬಹಿರಂಗ ಕ್ಷಮೆಯಾಚಿಸಿ ಅಮಾನತು ಶಿಕ್ಷೆಯಿಂದ ಪಾರಾಗಿದ್ದರು.

ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದಲ್ಲಿ ಆಡುತ್ತಿರುವ ಅವರು ಅಬ್ಬರದ ಬ್ಯಾಟಿಂಗ್ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದರು. ಮುಂಬೈ ಇಂಡಿಯನ್ಸ್‌ ಎದುರು ಅಜೇಯ ಶತಕ ಸಿಡಿಸಿ ಮಿಂಚಿದ್ದರು.

ಆಲ್‌ರೌಂಡರ್‌ಗಳಾದ ವಿಜಯ್‌ ಶಂಕರ್‌ ಮತ್ತು ರವೀಂದ್ರ ಜಡೇಜ ಅವರಿಗೂ ಲಂಡನ್‌ ಟಿಕೆಟ್‌ ಸಿಕ್ಕಿದೆ.

ತಮಿಳುನಾಡಿನ ವಿಜಯ್‌, ಹಿಂದಿನ ಕೆಲ ಸರಣಿಗಳಲ್ಲಿ ಉತ್ತಮ ಆಟ ಆಡಿದ್ದರು. ಹೀಗಾಗಿ ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿಯು 28 ವರ್ಷದ ಆಟಗಾರನ ಮೇಲೆ ಒಲವು ತೋರಿದೆ. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ರೇಸ್‌ನಲ್ಲಿ ವಿಜಯ್‌, ಅಂಬಟಿ ರಾಯುಡು ಅವರನ್ನು ಹಿಂದಿಕ್ಕಿದ್ದಾರೆ.

ರಿಷಭ್‌ಗೆ ಸಿಗದ ಅವಕಾಶ: ದೆಹಲಿಯ ಸ್ಫೋಟಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ರಿಷಭ್ ಬದಲು ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ಗೆ ಮಣೆ ಹಾಕಲಾಗಿದೆ. ಕಾರ್ತಿಕ್‌ ಅವರು ಹೆಚ್ಚುವರಿ ವಿಕೆಟ್‌ ಕೀಪರ್‌ ಆಗಿ ತಂಡ ಸೇರಿದ್ದಾರೆ. 21 ವರ್ಷದ ಪಂತ್‌, ಹಿಂದಿನ ಕೆಲ ಸರಣಿಗಳಲ್ಲಿ ಉತ್ತಮ ಆಟ ಆಡಿದ್ದರು. ಐಪಿಎಲ್‌ನಲ್ಲೂ ಮಿಂಚುತ್ತಿದ್ದಾರೆ. ಹೀಗಿದ್ದರೂ ಅವರ ಮೇಲೆ ವಿಶ್ವಾಸ ಇಡದ ಆಯ್ಕೆ ಸಮಿತಿ, ಕಾರ್ತಿಕ್‌ ಅವರ ಅನುಭವಕ್ಕೆ ಮನ್ನಣೆ ನೀಡಿದೆ. ಮಹೇಂದ್ರ ಸಿಂಗ್‌ ಧೋನಿ ನಿರೀಕ್ಷೆಯಂತೆಯೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹಿಂದಿನ ವಿಶ್ವಕಪ್‌ನಲ್ಲಿ ಆಡಿದ್ದ ಅಂಜಿಕ್ಯ ರಹಾನೆ, ಅಂಬಟಿ ರಾಯುಡು, ಉಮೇಶ್‌ ಯಾದವ್‌, ಇಶಾಂತ್‌ ಶರ್ಮಾ, ಅಕ್ಷರ್‌ ಪಟೇಲ್‌, ಸುರೇಶ್‌ ರೈನಾ ಮತ್ತು ಮೋಹಿತ್‌ ಶರ್ಮಾ ಅವರಿಗೆ ಕೊಕ್‌ ನೀಡಲಾಗಿದೆ. ಇವರ ಪೈಕಿ ರಹಾನೆ ಅವರನ್ನು ಕೈ ಬಿಟ್ಟಿದ್ದು ಅಚ್ಚರಿ ಮೂಡಿಸಿದೆ. 30ರ ಹರೆಯದ ರಹಾನೆ, 90 ಏಕದಿನ ಪಂದ್ಯಗಳನ್ನು ಆಡಿದ್ದು 35.26ರ ಸರಾಸರಿಯಲ್ಲಿ 2,962ರನ್‌ ಗಳಿಸಿದ್ದಾರೆ.

ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಅವರು ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿ ನಿಭಾಯಿಸಲಿದ್ದಾರೆ. ವಿರಾಟ್‌ ಕೊಹ್ಲಿ, ಶಂಕರ್‌, ಧೋನಿ, ಹಾರ್ದಿಕ್‌ ಪಾಂಡ್ಯ ಮತ್ತು ಕೇದಾರ್‌ ಜಾಧವ್‌ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.

ಆಂಗ್ಲರ ನಾಡಿನ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳೂ ಕೈಚಳಕ ತೋರಬಲ್ಲರು ಎಂಬುದನ್ನು ಅರಿತಿರುವ ಆಯ್ಕೆ ಸಮಿತಿ, ಮೂವರು ವೇಗದ ಬೌಲರ್‌ಗಳ ಜೊತೆಗೆ ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌ ಮತ್ತು ರವೀಂದ್ರ ಜಡೇಜ ಅವರಿಗೂ ಅವಕಾಶ ನೀಡಿದೆ.

ಕಾರ್ತಿಕ್‌ ಪರಿಪಕ್ವ ಆಟಗಾರ: ಪ್ರಸಾದ್‌

‘ದಿನೇಶ್‌ ಕಾರ್ತಿಕ್‌ ಪರಿಪಕ್ವ ಆಟಗಾರ. ಉತ್ತಮ ಫಿನಿಷರ್‌ ಕೂಡಾ. ವಿದೇಶಿ ನೆಲಗಳಲ್ಲಿ ಪಂದ್ಯಗಳನ್ನು ಆಡಿದ ಅನುಭವ ಅವರಿಗಿದೆ. ಜೊತೆಗೆ ಒತ್ತಡವನ್ನು ಮೀರಿನಿಂತು ಆಡುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅವಕಾಶ ನೀಡಿದ್ದೇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಹೇಳಿದ್ದಾರೆ.

‘ಧೋನಿ ಗಾಯಗೊಂಡರೆ ಮಾತ್ರ ಕಾರ್ತಿಕ್‌ಗೆ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆ. ರಿಷಭ್‌ ಪಂತ್‌ ಪ್ರತಿಭಾನ್ವಿತ ಬ್ಯಾಟ್ಸ್‌ಮನ್. ಅವರಿಗೆ ಈ ಸಲ ಅವಕಾಶ ಸಿಕ್ಕಿಲ್ಲ. ಹಾಗಂತ ನಿರಾಸರಾಗುವುದು ಬೇಡ. ಅವರಿಗೆ ಇನ್ನೂ ವಯಸ್ಸಿದೆ. ಮುಂದೆ ಖಂಡಿತವಾಗಿಯೂ ಅವಕಾಶ ಲಭಿಸುತ್ತದೆ’ ಎಂದರು.

‘ವಿಜಯ್‌ ಶಂಕರ್‌, ಅತ್ಯುತ್ತಮ ಬ್ಯಾಟ್ಸ್‌ಮನ್‌ ಅನ್ನುವುದು ಗೊತ್ತೇ ಇದೆ. ಉತ್ತಮ ಬೌಲರ್‌ ಆಗಿರುವ ಅವರು ಫೀಲ್ಡಿಂಗ್‌ನಲ್ಲೂ ಚುರುಕುತನ ತೋರುತ್ತಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವರು ಸಮರ್ಥರಾಗಿದ್ದಾರೆ. ಕಾರ್ತಿಕ್‌ ಮತ್ತು ಕೇದಾರ್‌ ಜಾಧವ್‌ ಕೂಡಾ ಈ ಕ್ರಮಾಂಕದಲ್ಲಿ ಆಡಬಲ್ಲರು’ ಎಂದು ಪ್ರಸಾದ್‌ ನುಡಿದಿದ್ದಾರೆ.

‘ಕುಲದೀಪ್‌ ಮತ್ತು ಚಾಹಲ್‌, ಹಿಂದಿನ ಒಂದೂವರೆ ವರ್ಷದಲ್ಲಿ ನಡೆದ ಹಲವು ಸರಣಿಗಳಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಎರಡನೇ ಹಂತದ ಪಂದ್ಯಗಳಿಗೆ ಆತಿಥ್ಯವಹಿಸುವ ಇಂಗ್ಲೆಂಡ್‌ನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಡೇಜಗೆ ಸ್ಥಾನ ನೀಡಿದ್ದೇವೆ’ ಎಂದು ಹೇಳಿದರು.

ಪಂತ್‌ಗೆ ಸಿಗದ ಸ್ಥಾನ:ಗಾವಸ್ಕರ್‌ ಅಚ್ಚರಿ

ವಿಶ್ವಕಪ್‌ ತಂಡದಲ್ಲಿ ರಿಷಭ್‌ ಪಂತ್‌ಗೆ ಸ್ಥಾನ ಸಿಗದಕ್ಕೆ ಬಗ್ಗೆ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಐಪಿಎಲ್‌ನಲ್ಲಿ ಪಂತ್‌ 245 ರನ್‌ ಗಳಿಸಿದರೆ, ಕಾರ್ತಿಕ್‌ 111 ರನ್‌ ಬಾರಿಸಿದ್ದಾರೆ. ಪಂತ್‌ಅವರು ತಂಡ ಒತ್ತಡ ಸಂದರ್ಭದಲ್ಲಿದ್ದಾಗ ಉತ್ತಮವಾಗಿ ಆಡಿದ್ದಾರೆ. ಹೀಗಿದ್ದರೂ ಆಯ್ಕೆ ಸಮಿತಿ ಅವರನ್ನು ಕೈ ಬಿಟ್ಟಿದ್ದು ಅಚ್ಚರಿ ತಂದಿದೆ’ ಎಂದಿದ್ದಾರೆ.

‘ವಿಕೆಟ್‌ ಕೀಪಿಂಗ್‌ ಕೌಶಲದಲ್ಲಿ ಕಾರ್ತಿಕ್‌ ಅವರು ಪಂತ್‌ಗಿಂತ ಮುಂದಿದ್ದರು. ಅನುಭವದ ಆಧಾರದಲ್ಲಿ ಅವರನ್ನುಆಯ್ಕೆ ಮಾಡಿರಬಹುದು. ಧೋನಿ ಗಾಯಗೊಂಡಲ್ಲಿ ಕಾರ್ತಿಕ್ ಕಣಕ್ಕಿಳಿಯುವರು.ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ತುಂಬಬಲ್ಲರು ಎಂದು ಹೇಳಿದ್ದಾರೆ.‌

ಉತ್ತಮ ಆಲ್‌ರೌಂಡರ್‌ ಆಗಿ ಹೊರಹೊಮ್ಮಿರುವವಿಜಯ್‌ ಶಂಕರ್‌ ಆಯ್ಕೆ ಸರಿಯಾಗಿದೆ ಎಂದ ಗಾವಸ್ಕರ್‌,ಪಂತ್‌ ಮುಂದಿನ ದಿನಗಳಲ್ಲಿ ಭಾರತದ ಭರವಸೆಯ ವಿಕೆಟ್‌ ಕೀಪರ್‌ ಆಗಲಿದ್ದಾರೆ’ ಎಂದು ನುಡಿದಿದ್ದಾರೆ.

***

ಪ್ರಸ್ತುತ ತಂಡ ಅನುಭವಿ ಮತ್ತು ಯುವ ಆಟಗಾರರಿಂದ ಸಮ್ಮಿಳಿತಗೊಂಡಿದೆ. ಕೊಹ್ಲಿ ಪಡೆಗೆ ವಿಶ್ವಕಪ್‌ ಗೆಲ್ಲುವ ಸಾಮರ್ಥ್ಯ ಇದೆ. ಯಾರಾದರೂ ಗಂಭೀರವಾಗಿ ಗಾಯಗೊಂಡರಷ್ಟೇ ತಂಡದಲ್ಲಿ ಬದಲಾವಣೆ ಮಾಡುತ್ತೇವೆ.

–ಎಂ.ಎಸ್‌.ಕೆ.ಪ್ರಸಾದ್‌,ಆಯ್ಕೆ ಸಮಿತಿ ಮುಖ್ಯಸ್ಥ

***

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ವಿಜಯ್‌ ಶಂಕರ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಕೇದಾರ್‌ ಜಾಧವ್‌, ದಿನೇಶ್‌ ಕಾರ್ತಿಕ್‌ (ವಿಕೆಟ್‌ ಕೀಪರ್‌), ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ ಮತ್ತು ಮೊಹಮ್ಮದ್‌ ಶಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT