ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WPL |ವೋಲ್ವಾರ್ಟ್‌, ಮೂನಿ ಬಿರುಸಿನ ಆಟ: ಗುಜರಾತ್‌ಗೆ ಮೊದಲ ಗೆಲುವು

ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ಗೆ 19 ರನ್‌ಗಳ ಜಯ
Published 6 ಮಾರ್ಚ್ 2024, 18:28 IST
Last Updated 6 ಮಾರ್ಚ್ 2024, 18:28 IST
ಅಕ್ಷರ ಗಾತ್ರ

ನವದೆಹಲಿ: ಆರಂಭ ಆಟಗಾರ್ತಿಯರಾದ ಲಾರಾ ವೋಲ್ವಾರ್ಟ್‌ ಮತ್ತು ಬೆತ್ ಮೂನಿ ಅವರು ಭರ್ಜರಿ ಅರ್ಧ ಶತಕಗಳನ್ನು ಗಳಿಸಿದರು. ಇವರಿಬ್ಬರ ಅಮೋಘ 141 ರನ್ ಜೊತೆಯಾಟದ ನೆರವಿನಿಂದ ಗುಜರಾತ್‌ ಜೈಂಟ್ಸ್ ತಂಡ ಬುಧವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 19 ರನ್‌ ಗಳಿಂದ ಸೋಲಿಸಿತು. ಇದು ಗುಜರಾತ್‌ಗೆ ಎರಡನೇ ಆವೃತ್ತಿಯಲ್ಲಿ ಮೊದಲ ಜಯ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರುಗಳಲ್ಲಿ 5 ವಿಕೆಟ್‌ಗೆ 199 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ವೋಲ್ವಾರ್ಟ್ 45 ಎಸೆತಗಳಲ್ಲಿ 76 ರನ್ (4x13) ಸಿಡಿಸಿದರೆ, ನಾಯಕಿ, ವಿಕೆಟ್‌ ಕೀಪರ್‌ ಬೆತ್‌ ಮೂನಿ 51 ಎಸೆತಗಳಲ್ಲಿ ಅಜೇಯ 85 ರನ್ (4x12, 6x1) ಚಚ್ಚಿದರು. ಈ ದೊಡ್ಡ ಗುರಿಯ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ನಿಯಮಿತವಾಗಿ ವಿಕೆಟ್‌ ಗಳನ್ನು ಕಳೆದುಕೊಂಡು 8 ವಿಕೆಟ್‌ಗೆ 180 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ (24) ಪವರ್‌ ಪ್ಲೇಯೊಳಗೆ ನಿರ್ಗಮಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಯಾರಿಂದಲೂ ದೊಡ್ಡ ಕೊಡುಗೆ ಬರಲಿಲ್ಲ. ಜಾರ್ಜಿಯಾ ವೆರ್ಹಾಮ್ (48, 22ಎ, 4x6, 6x2) ಕೊನೆಯಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಗುರಿ ದೂರದಲ್ಲಿತ್ತು. ಕೊನೆಯ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ ರನೌಟ್‌ ಆದರು.

ಭರ್ಜರಿ ಜೊತೆಯಾಟ: ಜೈಂಟ್ಸ್‌ ಆರಂಭ ಆಟಗಾರ್ತಿ ವೋಲ್ವಾರ್ಟ್‌ ವಿಶ್ವಾಸ ದಿಂದಲೇ ಬ್ಯಾಟ್‌ ಬೀಸತೊಡಗಿದರು. ಸೋಫಿ ಡಿವೈನ್ ಅವರ ಮೊದಲ ಓವರಿನಲ್ಲೇ 13 ರನ್‌ಗಳು ಬಂದವು. ಎಲ್ಲಿಸ್‌ ಪೆರಿ ಅವರು ಮಾಡಿದ ಪಂದ್ಯದ 10ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ವೊಲ್ವಾರ್ಟ್ ಬ್ಯಾಟಿನಿಂದ ಹ್ಯಾಟ್ರಿಕ್ ಬೌಂಡರಿಗಳು ಬಂದವು. ಎರಡನೇ ಬೌಂಡರಿ ಬಿರುಸಿನ ನೇರ ಡ್ರೈವ್‌ ಆಗಿದ್ದು ಆ ಹೊಡೆತದ ಮೂಲಕವೇ ಅವರು 32 ಎಸೆತಗಳಲ್ಲಿ ಅರ್ಧ ಶತಕ ದಾಟಿದರು.

ಆರ್‌ಸಿಬಿಗೆ ಮೊದಲ ವಿಕೆಟ್‌ ದಕ್ಕಿದ್ದೇ 13ನೇ ಓವರಿನಲ್ಲಿ ರನೌಟ್‌ ಮೂಲಕ. ಇನ್ನೊಂದೆಡೆ ಮೂನಿ ಬಿರುಸಿನ ಆಟ ಮುಂದುವರಿಸಿ ಎರಡನೇ ವಿಕೆಟ್‌ಗೆ ಫೋಬಿ ಲಿಚ್‌ಫೀಲ್ಡ್ ಜೊತೆಗೆ 33 ಎಸೆತಗಳಲ್ಲಿ 52 ರನ್ ಸೇರಿಸಿದರು. ಕೊನೆ ಯ 10 ಎಸೆತಗಳಲ್ಲಿ ಏಳು ರನ್‌ಗಳಷ್ಟೇ ಬಂದು ಮೂರು ವಿಕೆಟ್‌ಗಳೂ ಬಿದ್ದವು. ಹೀಗಾಗಿ 200 ರನ್‌ಗಳ ಗಡಿ ದಾಟುವ ಗುರಿ ಈಡೇರಲಿಲ್ಲ.

ಸ್ಕೋರುಗಳು:

ಗುಜರಾತ್ ಜೈಂಟ್ಸ್: 20 ಓವರುಗಳಲ್ಲಿ 5 ವಿಕೆಟ್‌ಗೆ 199 (ಲಾರಾ ವೋಲ್ವಾರ್ಟ್‌ 76, ಬೆತ್‌ ಮೂನಿ ಔಟಾಗದೇ 85). ಆರ್‌ಸಿಬಿ: 20 ಓವರುಗಳಲ್ಲಿ 7 ವಿಕೆಟ್‌ಗೆ 180 (ಸ್ಮೃತಿ ಮಂದಾನ 24, ಎಲ್ಲಿಸ್‌ ಪೆರಿ 24, ರಿಚಾ ಘೋಷ್ 30, ಜಾರ್ಜಿಯಾ ವೇರ್ಹಾಮ್ 48; ಆಶ್ಲೆ ಗಾರ್ಡನರ್‌ 23ಕ್ಕೆ2, ಕ್ಯಾಥ್ರಿನ್ ಬ್ರೈಸ್‌ 26ಕ್ಕೆ1). ಪಂದ್ಯದ ಆಟಗಾರ್ತಿ: ಬೆತ್ ಮೂನಿ

ಇಂದಿನ ಪಂದ್ಯ (ರಾತ್ರಿ 7.30) ಯುಪಿ ವಾರಿಯರ್ಸ್‌– ಮುಂಬೈ ಇಂಡಿಯನ್ಸ್‌, ನೇರಪ್ರಸಾರ: ಸ್ಪೋರ್ಟ್ಸ್‌ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT