ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ವೇಳಾಪಟ್ಟಿ: ಭಾರತ ತಂಡಕ್ಕೆ ವಿಂಡೀಸ್ ಮೊದಲ ಎದುರಾಳಿ

ಆ್ಯಶಸ್ ಸರಣಿಯೊಂದಿಗೆ ಆರಂಭ
Published 14 ಜೂನ್ 2023, 13:56 IST
Last Updated 14 ಜೂನ್ 2023, 13:56 IST
ಅಕ್ಷರ ಗಾತ್ರ

ಬೆಂಗಳೂರು: ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಇದೇ 16ರಿಂದ ಆರಂಭವಾಗಲಿದೆ. ಬದ್ಧ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡವು ಆ್ಯಶಸ್‌ ಸರಣಿಯಲ್ಲಿ ಮುಖಾಮುಖಿಯಾಗುವ ಮೂಲಕ ಈ ಚಾಂಪಿಯನ್‌ಷಿಪ್ ಶುರುವಾಗಲಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ  ಶುಕ್ರವಾರ  ಆ್ಯಶಸ್ ಸರಣಿಯ ಮೊದಲ ಪಂದ್ಯ ನಡೆಯಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಡಬ್ಲ್ಯುಟಿಸಿಯ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಕಳೆದೆರಡೂ ಆವೃತ್ತಿಗಳ ರನ್ನರ್ಸ್ ಅಪ್ ಭಾರತ ತಂಡವು ವೆಸ್ಟ್ ಇಂಡೀಸ್ ಎದುರು ಜುಲೈನಲ್ಲಿ ಆಡಲಿರುವ ಟೆಸ್ಟ್ ಸರಣಿಯ ಮೂಲಕ ಅಭಿಯಾನ ಆರಂಭಿಸುವುದು.  2021ರ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಹಾಗೂ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು ಸೋತಿತ್ತು.

ವಿಂಡೀಸ್ ಎದುರಿನ ಸರಣಿಯಲ್ಲಿ ಭಾರತವು ಎರಡು ಟೆಸ್ಟ್‌ಗಳನ್ನು ಆಡಲಿದೆ. ಡಾಮ್ನಿಕಾ (ಜುಲೈ 12 ರಿಂದ 16) ಹಾಗೂ ಟ್ರಿನಿಡಾಡ್ (ಜುಲೈ 20 ರಿಂದ 24) ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತವು ಟೆಸ್ಟ್ ಸರಣಿ ಆಡಲಿದೆ.

ಮುಂದಿನ ವರ್ಷದ ಜನವರಿ–ಫೆಬ್ರುವರಿಯಲ್ಲಿ ಇಂಗ್ಲೆಂಡ್ ಎದುರಿನ ಐದು ಟೆಸ್ಟ್‌ಗಳ ಸರಣಿಗೆ ಭಾರತವು ಆತಿಥ್ಯ ವಹಿಸುವರು. ಅದರ ನಂತರ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಸರಣಿಗಳೂ ನಡೆಯಲಿವೆ.

2024ರ ನವೆಂಬರ್ ಹಾಗೂ 2025ರ ಜನವರಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು ಬಾರ್ಡರ್‌–ಗಾವಸ್ಕರ್ ಟ್ರೋಫಿ  ಸರಣಿಯಲ್ಲಿ ಆಡಲಿದೆ. ಇದು ಡಬ್ಲ್ಯುಟಿಸಿಯ ಕೊನೆಯ ಸರಣಿಯಾಗಲಿದೆ.

‘ಟೆಸ್ಟ್ ಕ್ರಿಕೆಟ್‌ ಬೆಳವಣಿಗೆಗೆ ಈ ಟೂರ್ನಿಯು ಹೊಸ ರೂಪ ನೀಡಿದೆ. ತಂಡಗಳ ನಡುವೆ ಉನ್ನತ ಗುಣಮಟ್ಟದ ಸ್ಪರ್ಧೆ ಏರ್ಪಡುತ್ತಿದೆ. ಎರಡು ವರ್ಷಗಳಲ್ಲಿ ಬೇರೆ ಬೇರೆ ತಂಡಗಳೂ ಚಾಂಪಿಯನ್ ಆಗಿವೆ. ಅದರಲ್ಲೂ  ಈಚೆಗೆ ದ ಒವಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಅಪಾರ ಸಂಖ್ಯೆಯ ಪ್ರೇಕ್ಷಕರು ಸೇರಿದ್ದು ಟೆಸ್ಟ್ ಕ್ರಿಕೆಟ್‌ನ  ಆಕರ್ಷಣೆಗೆ ನಿದರ್ಶನ‘ ಎಂದು ಐಸಿಸಿ ಕ್ರಿಕೆಟ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ವಾಸೀಂ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯೂ ಒಂಬತ್ತು ತಂಡಗಳು ಕಣಕ್ಕಿಳಿಯಲಿವೆ. ಪ್ರತಿ ತಂಡವೂ ತವರಿನಲ್ಲಿ ಮೂರು ಸರಣಿ ಹಾಗೂ ತವರಿನಾಚೆ ಮೂರು ಸರಣಿಗಳನ್ನು ಆಡಲಿವೆ.

ಅಂಕಗಳ ಶೇಕಡಾವಾರು ಪದ್ಧತಿ ಮುಂದುವರಿಯಲಿದೆ. ಗೆಲ್ಲುವ ತಂಡಕ್ಕೆ 12, ಟೈ ತಲಾ  6 ಹಾಗೂ ಹಾಗೂ ಡ್ರಾ ಫಲಿತಾಂಶಕ್ಕೆ ಉಭಯ ತಂಡಗಳೂ ತಲಾ 4 ಅಂಕಗಳನ್ನು  ಪಡೆಯಲಿವೆ.

ಡಬ್ಲ್ಯುಟಿಸಿಯ ಫೈನಲ್ ಪಂದ್ಯವು ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT