ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರತಿಭೆಗಳಿಗೆ ಮಿಂಚುವ ಅವಕಾಶ

ಭಾರತ–ವೆಸ್ಟ್ ಇಂಡೀಸ್ ನಡುವಣ‌ ಟ್ವೆ–20 ಕ್ರಿಕೆಟ್ ಪಂದ್ಯ ಇಂದು
Last Updated 3 ನವೆಂಬರ್ 2018, 19:18 IST
ಅಕ್ಷರ ಗಾತ್ರ

ಕೋಲ್ಕತ್ತ : ಅನುಭವಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಮತ್ತು ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಅವರಿಲ್ಲದ ಭಾರತ ತಂಡವು ಭಾನುವಾರ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ ಟ್ವೆಂಟಿ –20 ಸರಣಿ ಆರಂಭಿಸಲಿದೆ.

ಮೂರು ಪಂದ್ಯಗಳ ಈ ಸರಣಿಯಲ್ಲಿ ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸುವರು. ಧೋನಿ ಬದಲಿಗೆ ರಿಷಭ್ ಪಂತ್ ಅಥವಾ ಅನುಭವಿ ದಿನೇಶ್ ಕಾರ್ತಿಕ್ ಅವರು ಆಡುವ ಸಾಧ್ಯತೆ ಇದೆ. ಸತತ ವೈಫಲ್ಯ ಅನುಭವಿಸಿರುವ ಶಿಖರ್ ಧವನ್‌ ಅವರಿಗೆ ಬಿಡುವು ನೀಡಿ, ಕೆ.ಎಲ್. ರಾಹುಲ್‌ಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ನೀಡುವ ಸಾಧ್ಯತೆಯೂ ಇದೆ. ವಿರಾಟ್ ಬದಲಿಗೆ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯಬಹುದು.

ಹೋದ ವಾರ ವಿಂಡೀಸ್ ಮತ್ತು ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಿಂದ ಧೋನಿಯವರನ್ನು ಕೈಬಿಡಲಾಗಿತ್ತು. ಇದರೊಂದಿಗೆ ಅವರ ಟ್ವೆಂಟಿ–20 ಕ್ರಿಕೆಟ್‌ ಭವಿಷ್ಯ ಮುಗಿದಂತಾಯಿತು ಎಂಬ ಚರ್ಚೆಗಳು ಶುರುವಾಗಿವೆ. ಆದರೆ, ‘ಧೋನಿ ನಮ್ಮ ತಂಡದ ಅವಿಭಾಜ್ಯ ಅಂಗ. ಯುವ ಆಟಗಾರರಿಗೆ ಅವಕಾಶ ಕೊಡುವಂತೆ ಅವರೇ ಹೇಳಿದ್ದರು. ಆದ್ದರಿಂದ ಆಯ್ಕೆಗೆ ಅವರನ್ನು ಪರಿಗಣಿಸಿರಲಿಲ್ಲ’ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದರು.

ಟೆಸ್ಟ್‌ ಸರಣಿಯಲ್ಲಿ 0 –2ರಿಂದ ಸೋತಿದ್ದ ವಿಂಡೀಸ್ ತಂಡವು ಏಕದಿನ ಕ್ರಿಕೆಟ್ ಸರಣಿಯಲ್ಲಿಯೂ 1–3ರಿಂದ ನಿರಾಸೆ ಅನುಭವಿಸಿತ್ತು. ಆದರೆ ಏಕದಿನ ಸರಣಿಯ ಒಂದು ಪಂದ್ಯವನ್ನು ಟೈ ಮಾಡಿಕೊಂಡು ಮತ್ತು ಇನ್ನೊಂದು ಪಂದ್ಯದಲ್ಲಿ ಗೆದ್ದಿತ್ತು. ಆದರೆ ಟ್ವೆಂಟಿ–20 ಮಾದರಿಯಲ್ಲಿ ವಿಂಡೀಸ್ ಉತ್ತಮ ದಾಖಲೆ ಹೊಂದಿದೆ. ಈ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಕೂಡ ಆಗಿರುವ ವಿಂಡೀಸ್‌ಗೆ ಕಾರ್ಲೋಸ್ ಬ್ರಾಥ್‌ವೈಟ್ ನಾಯಕತ್ವ ವಹಿಸಿದ್ದಾರೆ. ಅವರು, ಡರೆನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್, ಪೊಲಾರ್ಡ್ ಅವರು ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಓಷೆನ್ ಥಾಮಸ್, ರೋಮನ್ ಪೊವೆಲ್ ಅವರ ಮೇಲೆ ಬೌಲಿಂಗ್ ವಿಭಾಗದ ಹೊಣೆ ಇದೆ.

ಈಡನ್‌ ಗಾರ್ಡನ್‌ ಕ್ರೀಡಾಂಗಣದ ಹಸಿರು ಗರಿಕೆಗಳಿರುವ ಪಿಚ್‌ನಲ್ಲಿ ಭಾರತವು ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಯೋಜನೆ ರೂಪಿಸಬಹುದು. ಜಸ್‌ಪ್ರೀತ್ ಬೂಮ್ರಾ, ಕೆ. ಖಲೀಲ್ ಅಹಮದ್, ಭುವನೇಶ್ವರ್ ಕುಮಾರ್ ಆಡಬಹುದು. ಯಜುವೇಂದ್ರ ಚಾಹಲ್ ಜೊತೆಗೆ ಆಲ್‌ರೌಂಡರ್‌ ಕೃಣಾಲ್ ಪಾಂಡ್ಯ ಅವಕಾಶ ಗಿಟ್ಟಿಸಬಹುದು. ಇದರಿಂದಾಗಿ ತಂಡದಲ್ಲಿರುವ ಇನ್ನುಳಿದ ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್, ಶಾಬಾಜ್ ನದೀಂ ಮತ್ತು ಕುಲದೀಪ್ ಯಾದವ್ ಬೆಂಚ್ ಕಾಯಬೇಕಾಗಬಹುದು.

ತಂಡಗಳು ಇಂತಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಕೆ. ಖಲೀಲ್ ಅಹಮದ್, ಉಮೇಶ್ ಯಾದವ್, ಶಾಬಾಜ್ ನದೀಂ.

ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೈಟ್ (ನಾಯಕ), ಫ್ಯಾಬಿಯನ್ ಅಲೆನ್, ಡರೆನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್, ಕೀಮೊ ಪಾಲ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದೀನ್ (ವಿಕೆಟ್‌ಕೀಪರ್), ಆ್ಯಂಡ್ರೆ ರಸೆಲ್, ಶೆರ್ಫೆನ್ ರುದರ್‌ಫೋರ್ಡ್, ಓಷೆನ್ ಥಾಮಸ್, ಕ್ಯಾರಿ ಪಿಯರ್, ಒಬೆನ್ ಮೆಕಾಯ್, ರೋಮನ್ ಪೊವೆಲ್. ನಿಕೋಲಾಸ್ ಪೂರಣ್,

ಪಂದ್ಯ ಆರಂಭ: ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT