ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಲೆ ಜತೆಗೊಂದು ಔತಣಕೂಟ: ನೆನಪು ಬಿಚ್ಚಿಟ್ಟ ಬೆಂಗಳೂರಿನ ಫುಟ್‌ಬಾಲ್‌ ಆಟಗಾರ

Last Updated 31 ಡಿಸೆಂಬರ್ 2022, 4:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಲ್ಕತ್ತದ ಗ್ರಾಂಡ್ ಹೋಟೆಲ್‌ನಲ್ಲಿ ಪೆಲೆ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಆ ಗಳಿಗೆಯನ್ನು ನೆನೆಯುವಾಗ ಈಗಲೂ ರೋಮಾಂಚನಗೊಳ್ಳುತ್ತೇನೆ. ಅದು ನನ್ನ ಜೀವನದ ಅಪೂರ್ವ ಕ್ಷಣ’ ಎಂದು ಅರುಮೈನಾಯಗಂ ನೆನಪುಗಳನ್ನು ಬಿಚ್ಚಿಟ್ಟರು.

1977 ರಲ್ಲಿ ಪೆಲೆ ಅವರು ಕೋಲ್ಕತ್ತಕ್ಕೆ ಬಂದಿದ್ದಾಗ ದಿಗ್ಗಜ ಆಟಗಾರನ ಭೇಟಿಯ ಅವಕಾಶ ಪಡೆದಿದ್ದ ಕೆಲವೇ ಮಂದಿಯಲ್ಲಿ ಬೆಂಗಳೂರಿನ ಫುಟ್‌ಬಾಲ್‌ ಆಟಗಾರ ಅರುಮೈನಾಯಗಂ ಅವರೂ ಒಬ್ಬರು.

ನಾಲ್ಕೂವರೆ ದಶಕಗಳ ಹಿಂದಿನ ನೆನಪುಗಳು 82 ವರ್ಷದ ಅವರ ಮನಸ್ಸಿನಲ್ಲಿ ಅಚ್ಚೊತ್ತಿದೆ. ‘1977ರ ಸೆಪ್ಟೆಂಬರ್‌ ತಿಂಗಳ ಒಂದು ದಿನ ಆ ಭೇಟಿ ನಡೆದಿತ್ತು. ಮೋಹನ್ ಬಾಗನ್‌ ತಂಡದ ಆಡಳಿತ ಮಂಡಳಿಯ ಸದಸ್ಯರೊಬ್ಬರು ನನಗೆ ಕರೆ ಮಾಡಿ ಪೆಲೆ ಜತೆಗೆ ಔತಣಕೂಟದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿದ್ದರು. ನನಗೆ ಅಂತಹ ಅವಕಾಶ ದೊರೆತಿದೆ ಎಂಬುದನ್ನು ನಂಬಲೂ ಆಗಿರಲಿಲ್ಲ’ ಎಂದರು.

ಅರುಮೈನಾಯಗಂ 1961 ರಿಂದ 68ರ ವರೆಗೆ ಮೋಹನ್‌ ಬಾಗನ್‌ ಕ್ಲಬ್‌ ಪರ ಆಡಿದ್ದರು. 1977ರ ಅವಧಿಯಲ್ಲಿ ಅವರು ಚೆನ್ನೈನಲ್ಲಿ ಸದರ್ನ್‌ ರೈಲ್ವೇಸ್‌ ಪರ ಆಡಿದ್ದರು.

‘ಪೆಲೆ ಅವರ ಭೇಟಿಗೆ ಕೋಲ್ಕತ್ತಕ್ಕೆ ತೆರಳುತ್ತಿರುವ ವಿಷಯವನ್ನು ಅಂದಿನ ತಮಿಳು ನಟ ಆರ್.ಮುತ್ತುರಾಮನ್‌ ಅವರಿಗೆ ತಿಳಿಸಿದೆ. ಫುಟ್‌ಬಾಲ್‌ ಕ್ರೀಡೆ ಹಾಗೂ ಪೆಲೆ ಅಭಿಮಾನಿಯಾಗಿದ್ದ ಅವರೂ ನನ್ನ ಜತೆ ಕೋಲ್ಕತ್ತಕ್ಕೆ ಬರುವುದಾಗಿ ತಿಳಿಸಿದರು’ ಎಂದು ಆ ಸಂದರ್ಭವನ್ನು ಮೆಲುಕು ಹಾಕಿದರು.

’ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯವನ್ನು ವೀಕ್ಷಿಸಿದ ಬಳಿಕ ನಾನು ಹಾಗೂ ಮುತ್ತುರಾಮನ್‌ ಔತಣ ಕೂಟ ಏರ್ಪಾಡಾಗಿದ್ದ ಗ್ರಾಂಡ್‌ ಹೋಟೆಲ್‌ಗೆ ತೆರಳಿದೆವು. ಪೆಲೆ ಅವರನ್ನು ಭೇಟಿಯಾಗಿ ಹಸ್ತಲಾಘವ ನೀಡಿದೆವು. ಅವರು ನಮ್ಮನ್ನು ನೋಡಿ ಮುಗುಳ್ನಕ್ಕರು’ ಎಂದು 1962ರ ಜಕಾರ್ತ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಅವರು ನೆನಪಿಸಿಕೊಂಡರು.

‘ನಾನು ಬೆಳ್ಳಿ ತಟ್ಟೆಯನ್ನು ಸ್ಮರಣಿಕೆಯಾಗಿ ಪೆಲೆಗೆ ನೀಡಿದೆ. ಮುತ್ತುರಾಮನ್ ಅವರು ಪೆಲೆ ಪತ್ನಿಗಾಗಿ ತಂದಿದ್ದ ಕಾಂಜೀವರಂ ಸೀರೆಗಳನ್ನು ಅವರಿಗೆ ನೀಡಿದರು. ನಮ್ಮ ಉಡುಗೊರೆಗಳನ್ನು ಸಂತಸದಿಂದ ಸ್ವೀಕರಿಸಿದರು. ಆ ಕ್ಷಣವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪೆೆಲೆಗೆ ಸಾಟಿ ಪೆಲೆ ಮಾತ್ರ. ಅವರ ಸ್ಥಾನಕ್ಕೇರಬಲ್ಲ ಇನ್ನೊಬ್ಬ ಆಟಗಾರ ಇದುವರೆಗೆ ಹುಟ್ಟಿ ಬಂದಿಲ್ಲ. ಅವರ ಆಟಕ್ಕೆ ಎಲ್ಲರೂ ಮಾರುಹೋಗಿದ್ದರು. ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು’ ಎಂಬುದು ಅರುಮೈನಾಯಗಂ ಅವರಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT