ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನಿಂದ ಬೆಂಗಾಲ್‌ಗೆ ಜೆಜೆಗೆ ‘ಹೊಸ’ ಹುರುಪು

Last Updated 18 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ನನ್ನ ಸಾಮರ್ಥ್ಯ ಏನೆಂದು ಯಾರ ಮುಂದೆಯೂ ಸಾಬೀತು ಮಾಡುವ ಅವಶ್ಯಕತೆ ಇಲ್ಲ. ಚೆನ್ನಾಗಿ ಆಡಬಲ್ಲೆ ಎಂಬುದನ್ನು ನನಗೆ ನಾನೇ ತೋರಿಸಿಕೊಡಬೇಕಾಗಿದೆ. ಮುಂದೆ ಇರುವುದು ಅದೊಂದೇ ಸವಾಲು…’

ಇಂಡಿಯನ್ ಪ್ರೀಮಿಯರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿರುವ ಮಣಿಪುರದ ಜೆಜೆ ಲಾಲ್‌ಫೆಕ್ಲುವಾ ಅವರು ಕ್ರೀಡಾ ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆಡಿರುವ ಮಾತು ಇದು.

ಅವರ ಈ ಹೇಳಿಕೆಗೆ ಹಲವು ಆಯಾಮಗಳು ಇವೆ. ಫುಟ್‌ಬಾಲ್ ಪ್ರಿಯರಿಗೆ ಐಎಸ್‌ಎಲ್‌ನಲ್ಲಿ ಮರೆಯಲಾರದ ರಸಗಳಿಗೆಗಳನ್ನು ಕಾಣಿಕೆಯಾಗಿ ನೀಡಿರುವ ಮತ್ತು ಭಾರತ ತಂಡದ ಅವಿಭಾಜ್ಯ ಅಂಗವೂ ಆಗಿರುವ ಸ್ಟ್ರೈಕರ್‌ ಜೆಜೆಗೆ ಈ ಬಾರಿಯ ಐಎಸ್‌ಎಲ್‌ ಒಂದು ರೀತಿಯಲ್ಲಿ ಹೊಸತನದ್ದು. ಗಾಯದ ಸಮಸ್ಯೆಯಿಂದ ಬಳಲಿ ಕಳೆದ ವರ್ಷ ಪೂರ್ತಿ ಕಣಕ್ಕೆ ಇಳಿಯಲು ಸಾಧ್ಯವಾಗದೇ ಇದ್ದ ಜೆಜೆ ಈಗ ಚೆನ್ನೈಯಿನ್ ಎಫ್‌ಸಿ ತಂಡವನ್ನು ತೊರೆದಿದ್ದಾರೆ. ಕೋಲ್ಕತ್ತಾದ ದೈತ್ಯ ಕ್ಲಬ್‌ ಎಸ್‌ಸಿ ಈಸ್ಟ್ ಬೆಂಗಾಲ್‌ ಜೊತೆ ಒಪ್ಪಂದ ಮಾಡಿಕೊಂಡಿರುವ ಅವರು ಹೊಸ ಹುರುಪಿನಲ್ಲಿ ಆಡಲು ಸಜ್ಜಾಗಿದ್ದಾರೆ.

ಮರಿನಾ ಮಚ್ಚಾನ್ಸ್‌ ಎಂದೇ ಹೆಸರು ಮಾಡಿರುವ ಚೆನ್ನೈಯಿನ್ ಎಫ್‌ಸಿ ತಂಡವನ್ನು ಐಎಸ್‌ಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜೆಜೆ. ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಅವರಿಗೆ ಎರಡನೇ ಸ್ಥಾನವಿದೆ. ಈ ವರೆಗೆ ಅವರು 23 ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ.

ವೃತ್ತಿಜೀವನದ ಆರಂಭದಲ್ಲೇ ಜೆಜೆಗೆ ಅಸ್ಥಿರಜ್ಜು ನೋವಿನ ಸಮಸ್ಯೆ ಇತ್ತು. ಇದನ್ನು ಕಡೆಗಣಿಸಿ ಆಟದ ಕಡೆಗೆ ಗಮನ ಕೊಟ್ಟಿದ್ದರು. ಹೀಗಾಗಿ ಸಮಸ್ಯೆ ಉಲ್ಬಣಿಸಿತ್ತು. ಕಳೆದ ಋತುವಿನ ಆರಂಭದಲ್ಲೇ ನೋವು ತೀವ್ರವಾಗಿ ಕಾಡತೊಡಗಿತು. ಹೀಗಾಗಿ ಇಟಲಿಯಲ್ಲಿ ಡಾ.ಸಿಲಿಯೊ ಮೂಸಾ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಚೆನ್ನೈನಲ್ಲಿರುವ ಕ್ರೀಡಾವಿಜ್ಞಾನ ಕೇಂದ್ರದಲ್ಲಿ ವಿಶ್ರಾಂತಿ ಪಡೆದಿದ್ದರು.

‘ಇಟಲಿಯಲ್ಲಿ ನಡೆದ ಫಿಸಿಯೊಥೆರಪಿ ಸಾಮಾನ್ಯ ಚಿಕಿತ್ಸೆಗಿಂತಲೂ ಭಿನ್ನವಾಗಿತ್ತು. ಹೀಗಾಗಿ ತುಂಬ ಆರಾಮ ಅನಿಸುತ್ತಿದೆ. ತುಂಬ ಕಾಲ ಅಂಗಣದಿಂದ ಹೊರಗಿದ್ದ ಕಾರಣ ಮತ್ತು ಸರಿಯಾದ ಚಿಕಿತ್ಸೆ ಪಡೆದುಕೊಂಡಿದ್ದರಿಂದ ಮೊದಲಿಗಿಂತಲೂ ಬಲಿಷ್ಠವಾಗಿದ್ದೇನೆ. ಆದ್ದರಿಂದ ಈಸ್ಟ್ ಬೆಂಗಾಲ್ ಪರ ಉತ್ತಮ ಆಟ ಆಡಬಲ್ಲೆ ಎಂಬ ಭರವಸೆ ಇದೆ’ ಎನ್ನುತ್ತಾರೆ 29 ವರ್ಷದ ಜೆಜೆ.

ನವೆಂಬರ್ 20ರಂದು ಆರಂಭವಾಗಲಿರುವ ಐಎಸ್‌ಎಲ್‌ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಈಸ್ಟ್ ಬೆಂಗಾಲ್, ಕೋಲ್ಕತ್ತಾದ ಮತ್ತೊಂದು ದೈತ್ಯ ತಂಡ ಎಟಿಕೆ ಮೋಹನ್‌ ಬಾಗನ್ ವಿರುದ್ಧ 27ರಂದು ಮೊದಲ ಪಂದ್ಯ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT