ಗುರುವಾರ , ಆಗಸ್ಟ್ 11, 2022
23 °C

ಎಎಫ್‌ಸಿ ಚಾಂಪಿಯನ್ಸ್ ಲೀಗ್‌: ಅಲ್ ವಾಹ್ದ ಅಮಾನತು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ದೋಹಾ: ಟೂರ್ನಿ ನಡೆಯುವ ಸ್ಥಳಕ್ಕೆ ನಿಗದಿತ ದಿನದಲ್ಲಿ ಬರಲು ವಿಫಲವಾದ ಯುಎಇಯ ಕ್ಲಬ್‌ ಅಲ್‌ ವಾಹ್ದಾವನ್ನು ಎಎಫ್‌ಸಿ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯಿಂದ ಸೋಮವಾರ ಹೊರಹಾಕಲಾಯಿತು.

ಪ್ರಾಥಮಿಕ ಹಂತ, ಅರ್ಹತಾ ಸುತ್ತಿನ ಬಳಿಕ ಗುಂಪು ಹಂತದ ಕೆಲವು ಪಂದ್ಯಗಳು ಮಾರ್ಚ್‌ನಲ್ಲಿ ನಡೆದಿದ್ದವು. ನಂತರ ಕೋವಿಡ್‌–19ರ ಕಾರಣ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಗುಂಪು ಹಂತದ ಪಂದ್ಯಗಳು ಸೋಮವಾರ ಪುನರಾರಂಭಗೊಂಡಿವೆ. ಕತಾರ್‌ನ ದೋಹಾದಲ್ಲಿ ಅಲ್ ವಾಹ್ದಾ ತಂಡ ಉಳಿದಿರುವ ತನ್ನ ಪಂದ್ಯಗಳನ್ನು ಆಡಬೇಕಾಗಿತ್ತು.

ಮೊದಲ ಪಂದ್ಯಕ್ಕೂ ಕನಿಷ್ಠ ನಾಲ್ಕು ದಿನಗಳ ಮುನ್ನ ಅಲ್‌ ವಾಹ್ದಾ ತಂಡ ದೋಹಾಗೆ ಬರಬೇಕಾಗಿತ್ತು. ಆದರೆ ಕೋವಿಡ್‌–19 ಪರೀಕ್ಷೆಗಳು ಮುಕ್ತಾಯಗೊಳ್ಳದೆ ಪ್ರಯಾಣ ಬೆಳೆಸಲು ಯುಎಇ ಆಡಳಿತ ಅನುಮತಿ ನೀಡದ ಕಾರಣ ನಿಗದಿತ ಸಂದರ್ಭದಲ್ಲಿ ಬರಲು ಸಾಧ್ಯವಿಲ್ಲ ಎಂದು ತಂಡ ತಿಳಿಸಿತ್ತು.

’ತಂಡ ಬಾರದೇ ಇರುವ ಕಾರಣ ಟೂರ್ನಿಯಿಂದ ಹಿಂದೆ ಸರಿದಿದೆ ಎಂದೇ ಪರಿಗಣಿಸಲಾಗಿದೆ. ಇದು ಈ ಬಾರಿಯ ನಿಯಮ. ಹೀಗಾಗಿ ತಂಡವು ಟೂರ್ನಿಯಲ್ಲಿ ಇರುವುದಿಲ್ಲ. ಅದು ಈ ಸಲ ಇಲ್ಲಿಯ ವರೆಗೆ ಆಡಿರುವ ಪಂದ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ‘ ಎಂದು ಎಎಫ್‌ಸಿ ಪ್ರಕಟಣೆ ತಿಳಿಸಿದೆ.

’ಎ‘ ಗುಂಪಿನಲ್ಲಿರುವ ಅಲ್‌ ವಾಹ್ದಾ ತಂಡ ಗುಂಪು ಹಂತದ ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಕಲೆ ಹಾಕಿದ್ದು ಎರಡನೇ ಸ್ಥಾನದಲ್ಲಿತ್ತು. ಸೌದಿ ಅರೆಬಿಯಾದ ಅಲ್ ಅಹ್ಲಿ ಮೊದಲ ಸ್ಥಾನದಲ್ಲಿದೆ. ಈ ತಂಡದ ಬಳಿಯೂ ನಾಲ್ಕು ಪಾಯಿಂಟ್‌ಗಳಿವೆ. ಆದರೆ ಗೋಲು ಸರಾಸರಿಯಲ್ಲಿ ಅಲ್ ಅಹ್ಲಿ ಮುಂದೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು