ಬುಧವಾರ, ಜನವರಿ 20, 2021
17 °C

ಮಾಂತ್ರಿಕ ಆಟ; ವರ್ಣರಂಜಿತ ಬದುಕು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬ್ಯೂನಸ್‌ ಐರಿಸ್: ಕಾಲ್ಚೆಂಡಿನಾಟದ ಮೋಡಿಗಾರ ಡೀಗೊ ಮರಡೋನಾ ಅವರ ವೈಯಕ್ತಿಕ ಬದುಕು ಕೂಡ ವರ್ಣರಂಜಿತ. ಅರ್ಜೆಂಟೀನಾ  ರಾಜಧಾನಿಯ ಹೊರವಲಯದ ಸೌಲಭ್ಯ ವಂಚಿತ ಪ್ರದೇಶದಲ್ಲಿ ಜನಿಸಿದ ಅವರು ಮಾಂತ್ರಿಕ ಆಟದ ಮೂಲಕ ಫುಟ್‌ಬಾಲ್ ಪ್ರಪಂಚದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಪೆಲೆ ಮತ್ತು ಮರಡೋನಾ ಅವರನ್ನು ಫುಟ್‌ಬಾಲ್ ಕ್ರೀಡೆಯ ಅಪ್ರತಿಮ ಆಟಗಾರರೆಂದೇ ಕರೆಯಲಾಗುತ್ತದೆ. ಮರಡೋನಾ ಅವರನ್ನು ಅರ್ಜೆಂಟೀನಾದಲ್ಲಿ ದೇವರಂತೆ ಪೂಜಿಸಲಾಗುತ್ತದೆ. ಅವರ ಹತ್ತು ಸಂಖ್ಯೆಯ ಜೆರ್ಸಿಗೂ ಅಲ್ಲಿ ಅಪಾರ ಗೌರವವಿದೆ. ಅಚ್ಚರಿ ಮೂಡಿಸುವ ವೇಗ ಮತ್ತು ಚಾಕಚಕ್ಯ ಪಾಸ್‌ಗಳು ಮರಡೋನಾ ಅವರ ಆಟದ ವೈಶಿಷ್ಟ್ಯ.

ನಿವೃತ್ತಿಯ ನಂತರ ಅವರ ಬದುಕು ಬೇರೊಂದು ದಿಸೆಯಲ್ಲಿ ಸಾಗಿತು. ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪ ಹೊತ್ತು ವಿಶ್ವಕಪ್‌ ತಂಡದಿಂದ ಹೊರಬಿದ್ದ ಅವರು ನಂತರ ಡ್ರಗ್ಸ್‌ ಸೇವನೆ ಆರೋಪಕ್ಕೂ ಒಳಗಾದರು. ಅತಿಯಾದ ಆಹಾರ ಸೇವನೆ ಅವರ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರಿತು. 2000ನೇ ಇಸವಿಯಲ್ಲಿ ಆರೋಗ್ಯ ಹದಗೆಟ್ಟಿತು. ಆದರೆ ಅಂಗಣದಲ್ಲಿ ಛಲದಿಂದ ಆಡಿದಂತೆ, ಜೀವನದಲ್ಲೂ ಅವರು ಪಟ್ಟು ಬಿಡಲಿಲ್ಲ. 2008ರಲ್ಲಿ ಅರ್ಜೆಂಟೀನಾ ತಂಡದ ಕೋಚ್‌ ಆಗುವ ಮೂಲಕ ಫುಟ್‌ಬಾಲ್ ಜೀವನದ ‘ದ್ವಿತೀಯಾರ್ಧ’ ಆರಂಭಿಸಿದರು.

ಮೆಕ್ಸಿಕೊದಲ್ಲಿ 1986ರಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ ಮರಡೋನಾ ಅವರ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿತು. ವಿಶ್ವಪ್ರಸಿದ್ಧವಾದ ಎರಡು ಗೋಲುಗಳು ಆ ಪಂದ್ಯದಲ್ಲಿ ಮೂಡಿದ್ದವು. ಮೊದಲನೆಯದು, ಅವರ ಕೈಗೆ ತಾಗಿ ಗುರಿ ಮುಟ್ಟಿದ ಗೋಲು. ಹೀಗಾಗಿ ಅದು ಕುಖ್ಯಾತಿಯನ್ನೂ ಗಳಿಸಿದೆ. ಪಂದ್ಯದ ನಂತರ ಅವರೇ ಆ ಗೋಲನ್ನು ‘ದೇವರ ಕೈ’ಯಿಂದ ಬಂದ ಗೋಲು ಎಂದು ಬಣ್ಣಿಸಿದ್ದರು.

ಎರಡನೆಯದು, ಎದುರಾಳಿ ತಂಡದ ಆಟಗಾರರ ನಡುವಿನಿಂದ ಚೆಂಡನ್ನು ಡ್ರಿಬಲ್ ಮಾಡುತ್ತ ಹೋಗಿ ಹೊಡೆದ ಗೋಲು. ಅದನ್ನು ಶತಮಾನದ ಗೋಲು ಎಂದೇ ಕರೆಯಲಾಗುತ್ತದೆ. ಪಂದ್ಯದಲ್ಲಿ ಅರ್ಜೆಂಟೀನಾ 2–1ರ ಗೆಲುವು ಸಾಧಿಸಿತ್ತು.

15ನೇ ವಯಸ್ಸಿನಲ್ಲಿ ಅರ್ಜೆಂಟೀನಿಯೋಸ್ ಜೂನಿಯರ್ ಎಂಬ ಪ್ರಥಮ ಡಿವಿಷನ್ ಕ್ಲಬ್‌ನಲ್ಲಿ ಸ್ಥಾನ ಗಳಿಸಿದ ಅವರು 17ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಆದರೆ ರಾಷ್ಟ್ರೀಯ ತಂಡ ಸೇರಿದ ನಂತರ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಿದರು. ವಿಶ್ವಕಪ್ ಚಾಂಪಿಯನ್ ಆದ ನಂತರದ ವರ್ಷವೂ ಅವರಿದ್ದ ತಂಡ ಫೈನಲ್ ಪ್ರವೇಶಿಸಿತ್ತು.

1991ರಿಂದ ಅವರ ಬದುಕಿನ ಹಾದಿ ದುರ್ಗಮವಾಯಿತು. ಆ ವರ್ಷ ಅವರನ್ನು 15 ತಿಂಗಳು ಅಮಾನತು ಮಾಡಲಾಯಿತು. 1994ರಲ್ಲಿ 15 ತಿಂಗಳ ನಿಷೇಧಕ್ಕೆ ಒಳಗಾದರು. 

500ಕ್ಕೂ ಹೆಚ್ಚು ಪಂದ್ಯ; 300 ಗೋಲು
ರಾಷ್ಟ್ರೀಯ ತಂಡಕ್ಕಾಗಿ ಮತ್ತು ವಿವಿಧ ಕ್ಲಬ್‌ಗಳಿಗಾಗಿ ಡೀಗೊ ಮರಡೋನ ಆಡಿದ ಪಂದ್ಯಗಳ ಸಂಖ್ಯೆ ಆರುನೂರರ ಆಸುಪಾಸು. ಗಳಿಸಿದ ಗೋಲುಗಳು 300ಕ್ಕೂ ಹೆಚ್ಚು.

1976ರಿಂದ 1981ರ ವರೆಗೆ ಅರ್ಜೆಂಟೀನಿಯೋಸ್ ಜೂನಿಯರ್ಸ್‌ ಪರವಾಗಿ 167 ಪಂದ್ಯಗಳನ್ನು ಆಡಿದ್ದ ಅವರು 116 ಗೋಲು ಗಳಿಸಿದ್ದರು. 1981ರಿಂದ ಒಂದು ವರ್ಷ ಬೋಕಾ ಜೂನಿಯರ್ಸ್ ಪರವಾಗಿ ಆಡಿದ್ದಾರೆ. ಅಲ್ಲಿ, 40 ಪಂದ್ಯಗಳಲ್ಲಿ 28 ಗೋಲು ಗಳಿಸಿದ್ದಾರೆ. ನಂತರ ಎರಡು ವರ್ಷ ಬಾರ್ಸಿಲೋನಾ ಪರವಾಗಿ 36 ಪಂದ್ಯಗಳಲ್ಲಿ 22 ಗೋಲು ಗಳಿಸಿದ್ದಾರೆ. 1984ರಿಂದ 1991ರ ವರೆಗೆ ನೆಪೋಲಿ ತಂಡದಲ್ಲಿ ಗರಿಷ್ಠ, 188 ಪಂದ್ಯಗಳನ್ನು ಆಡಿದ್ದಾರೆ. ಆ ತಂಡಕ್ಕಾಗಿ ಅವರು ಗಳಿಸಿದ್ದು 81 ಗೋಲು.

1992ರಿಂದ 1993ರ ವರೆಗೆ ಸೆವಿಲ್ಲಾ,  ನಂತರ ಒಂದು ವರ್ಷ ನ್ಯೂವೆಲ್ಸ್ ಓಲ್ಡ್ ಬಾಯ್ಸ್‌, 1995ರಿಂದ 1997ರ ವರೆಗೆ ಬೋಕಾ ಜೂನಿಯರ್ಸ್ ತಂಡಗಳಲ್ಲಿದ್ದರು. ಅಲ್ಲಿ ಕ್ರಮವಾಗಿ 26, 5 ಮತ್ತು 30 ಪಂದ್ಯಗಳನ್ನು ಆಡಿರುವ ಅವರು ಒಟ್ಟಾರೆ 12 ಗೋಲು ಗಳಿಸಿದ್ದಾರೆ.

ರಾಷ್ಟ್ರೀಯ ತಂಡದ ಪರ 1977ರಿಂದ ಎರಡು ವರ್ಷ 20 ವರ್ಷದೊಳಗಿನವರ ತಂಡದಲ್ಲಿದರು. ಈ ಅವಧಿಯಲ್ಲಿ 15 ಪಂದ್ಯಗಳಲ್ಲಿ ಎಂಟು ಗೋಲು ಗಳಿಸಿದ್ದರು. 1977ರಲ್ಲಿ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ ಮರಡೋನ 1994ರ ವರೆಗೆ ಆಡಿದ್ದಾರೆ. 1994ರಿಂದ ಇತ್ತೀಚಿನ ವರೆಗೆ ಎಂಟು ತಂಡಗಳ ಮ್ಯಾನೇಜರ್ ಮತ್ತು ಕೋಚ್ ಆಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು