ಮಂಗಳವಾರ, ಮೇ 17, 2022
25 °C

ಐಎಸ್‌ಎಲ್‌ ಫುಟ್‌ಬಾಲ್‌: ಎಟಿಕೆಎಂಬಿಗೆ ಭರ್ಜರಿ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಅಮೋಘ ಆಟವಾಡಿದ ಎಟಿಕೆ ಮೋಹನ್ ಬಾಗನ್ ಮತ್ತು ಒಡಿಶಾ ಎಫ್‌ಸಿ ತಂಡಗಳ ಆಟಗಾರರು ಫುಟ್‌ಬಾಲ್ ಪ್ರಿಯರ ಮನ ಗೆದ್ದರು. ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಎಟಿಕೆ ಎಂಬಿ ತಂಡ ಮೇಲುಗೈ ಸಾಧಿಸಿತು. ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಈ ತಂಡ 4–1 ಗೋಲುಗಳಿಂದ ಗೆಲುವು ಸಾಧಿಸಿತು.

ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಎಟಿಕೆಎಂಬಿ ಮತ್ತು ಕೊನೆಯಲ್ಲಿರುವ ಒಡಿಶಾ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಟೂರ್ನಿಯಲ್ಲಿ ಈ ವರೆಗೆ ಕೇವಲ ಒಂದು ಜಯ ಸಾಧಿಸಿರುವ ತಂಡವಾದರೂ ಶನಿವಾರದ ಪಂದ್ಯದಲ್ಲಿ ಎಟಿಕೆಎಂಬಿಗೆ ಪ್ರಬಲ ಪೈಪೋಟಿ ನೀಡಿತು. 

11ನೇ ನಿಮಿಷದಲ್ಲಿ ಮೋಹಕ ಗೋಲು ಗಳಿಸಿದ ಮನ್ವಿರ್ ಸಿಂಗ್ ಎಟಿಕೆಎಂಬಿಗೆ ಮುನ್ನಡೆ ಗಳಿಸಿಕೊಟ್ಟರು. ಎಡಭಾಗದಿಂದ ಮಾರ್ಸೆಲೊ ಪೆರೇರ ಚೆಂಡನ್ನು ಪ್ರಣಯ್ ಹಲ್ದರ್ ಕಡೆಗೆ ಕ್ರಾಸ್ ಮಾಡಿದರು. ಹಲ್ದರ್ ಅದನ್ನು ರಾಯ್ ಕೃಷ್ಣಗೆ ನೀಡಿದರು. ಕೃಷ್ಣ ಚೆಂಡನ್ನು ಮನ್ವಿರ್ ಕಡೆಗೆ ಅಟ್ಟಿದರು. ಮನ್ವಿರ್ ದೂರದಿಂದ ಎಡಗಾಲಿನಿಂದ ಒದ್ದ ಚೆಂಡು ಗಾಳಿಯಲ್ಲಿ ತೇಲಿ ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿದು ಬಲೆಗೆ ಮುತ್ತಿಕ್ಕಿತು. 

45ನೇ ನಿಮಿಷದಲ್ಲಿ ಅದೇ ರೀತಿಯ ಸೊಗಸಾದ ಗೋಲಿನ ಮೂಲಕ ನಾಯಕ ಕೋಲ್ ಅಲೆಕ್ಸಾಂಡರ್ ತಿರುಗೇಟು ನೀಡಿದರು. ಮಿಡ್‌ಫೀಲ್ಡ್‌ನಲ್ಲಿ ಪಾಲ್ ರಾಮ್‌ಫಂಗ್ಜಾವ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗುರಿಯತ್ತ ಒದ್ದರು. ಗೋಲ್‌ಕೀಪರ್ ಅರಿಂದಂ ಭಟ್ಟಾಚಾರ್ಯ ಅದನ್ನು ತಡೆದರೂ ಅವರ ಕೈಯಿಂದ ಜಾರಿ ವಾಪಸ್ ಬಂತು. ದಕ್ಷಿಣ ಆಫ್ರಿಕಾದ ಅಲೆಕ್ಸಾಂಡರ್ ದೂರದಿಂದ ಗಾಳಿಯಲ್ಲಿ ತೇಲಿಬಿಟ್ಟ ಚೆಂಡು ಗೋಲುಪೆಟ್ಟಿಗೆಯ ಮೇಲ್ಭಾಗದಲ್ಲಿ, ಭಟ್ಟಾಚಾರ್ಯ ಅವರ ಕೈಗೆಟುಕದೇ ಸಾಗಿ ಗುರಿ ಮುಟ್ಟಿತು.

ಸಮಬಲದೊಂದಿಗೆ ವಿರಾಮಕ್ಕೆ ತೆರಳಿದ ಎಟಿಕೆಎಂಬಿ ಪರ ಮನ್ವಿರ್ ಸಿಂಗ್ 54ನೇ ನಿಮಿಷದಲ್ಲಿ ಮತ್ತೊಮ್ಮೆ ಮಿಂಚಿದರು. ಸುಲಭವಾಗಿ ಗೋಲು ಗಳಿಸಿಕೊಟ್ಟ ಅವರು ತಂಡದ ಮುನ್ನಡೆಗೆ ಕಾರಣರಾದರು. ಎದುರಾಳಿ ತಂಡದ ಆವರಣದ ಹೊರಗಿನಿಂದ ಏಕಾಂಗಿಯಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ ಸಾಗಿದ ಮನ್ವಿರ್ ಅಂತಿಮ ಕ್ಷಣದಲ್ಲಿ ಬಲವಾಗಿ ಒದ್ದು ಗುರಿ ಮುಟ್ಟಿಸಿದರು.

83ನೇ ನಿಮಿಷದಲ್ಲಿ ಕೋಲ್ ಅಲೆಕ್ಸಾಂಡರ್ ಎಸಗಿದ ಪ್ರಮಾದವು ಎಟಿಕೆಎಂಬಿಯ ಮುನ್ನಡೆಯನ್ನು ಹೆಚ್ಚಿಸಿತು. ಪ್ರಣಯ್ ಹಲ್ದರ್ ಒದ್ದ ಚೆಂಡನ್ನು ಅಲೆಕ್ಸಾಂಡರ್ ಪೆನಾಲ್ಟಿ ಆವರಣದಲ್ಲಿ ತಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಎಡಗೈಗೆ ತಾಗಿತು. ಪೆನಾಲ್ಟಿ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಯ್ ಕೃಷ್ಣ ಗೋಲು ಗಳಿಸಿದರು. 86ನೇ ನಿಮಿಷದಲ್ಲಿ ಕೃಷ್ಣ ಮತ್ತೊಂದು ಗೋಲು ತಂದುಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು