ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಚೆಸ್ಟರ್‌ಗೆ ಸೋಲುಣಿಸಿ ದಾಖಲೆಯ ಫೈನಲ್ ಪ್ರವೇಶಿಸಿದ ಆರ್ಸೆನಲ್

Last Updated 19 ಜುಲೈ 2020, 7:58 IST
ಅಕ್ಷರ ಗಾತ್ರ

ಲಂಡನ್: ಕೋಚ್ ಮೈಕೆಲ್ ಆರ್ಟೆರಾ ಸಂಭ್ರಮದಿಂದ ಹೇಳಿದಂತೆ, ’ಅಮೋಘ ತಾಳ–ಮೇಳ‘ ಆರ್ಸೆನಲ್ ತಂಡಕ್ಕೆ ನೆರವಾಯಿತು. ಬಲಿಷ್ಠ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಏಕಪಕ್ಷೀಯ ಗೋಲುಗಳಿಂದ ಮಣಿಸಿದ ಈ ತಂಡ ಎಫ್‌ಎ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ದಾಖಲೆಯ 21ನೇ ಬಾರಿ ಫೈನಲ್ ಪ್ರವೇಶಿಸಿತು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೀರಿ ಎಮೆರಿಕ್ ಔಬಮೆಯಾಂಗ್ ಮೊದಲಾರ್ಧದ ಆರಂಭದಲ್ಲೂ ದ್ವಿತೀಯಾರ್ಧದ ಕೊನೆಯಲ್ಲೂ ಗಳಿಸಿದ ಎರಡು ಮೋಹಕ ಗೋಲುಗಳ ನೆರವಿನಿಂದ ಆರ್ಸೆನಲ್ 2–0ಯಿಂದ ಗೆಲುವು ಸಾಧಿಸಿತು. ಭಾನುವಾರ ರಾತ್ರಿ ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಚೆಲ್ಸಿ ಮತ್ತು ಮ್ಯಾಂಚೆಸ್ಟರ್ ಸಿಟಿ ಯುನೈಟೆಡ್ ತಂಡಗಳು ಸೆಣಸಲಿವೆ. ಆಗಸ್ಟ್ ಒಂದರಂದು ಫೈನಲ್ ಪಂದ್ಯ ವೆಂಬ್ಲಿಯಲ್ಲಿ ನಡೆಯಲಿದೆ.

ಪ್ರೀಮಿಯರ್ ಲೀಗ್ ಚಾಂಪಿಯನ್‌ ಲಿವರ್‌ಪೂಲ್ ತಂಡವನ್ನು ಕೆಲವು ದಿನಗಳ ಹಿಂದೆ ಮಣಿಸಿ ಉತ್ಸಾಹದಲ್ಲಿದ್ದ ಆರ್ಸೆನಲ್ ತಂಡ ಪ್ರಬಲ ಆಕ್ರಮಣಕಾರಿ ಆಟದ ತಂತ್ರ ಹೆಣೆದುಕೊಂಡೇ ಇಲ್ಲಿ ಕಣಕ್ಕೆ ಇಳಿದಿತ್ತು. ಈ ಯೋಜನೆ ಫಲಿಸಿತು. ಈ ಹಿಂದಿನ ಏಳು ಪಂದ್ಯಗಳಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡಕ್ಕೆ ಮಣಿದಿತ್ತು. ಕೊರೊನಾ ವೈರಸ್ ಹಾವಳಿಯ ನಂತರ ಮೊದಲ ಪಂದ್ಯದಲ್ಲಿ 0–3ಯಿಂದ ಸೋತಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ಛಾತಿಯೂ ತಂಡಕ್ಕೆ ಇತ್ತು.

ದೇಶಿ ಟೂರ್ನಿಯ ಕಳೆದ 22 ಪಂದ್ಯಗಳಲ್ಲಿ ಸೋಲರಿಯದೇ ಮುನ್ನುಗ್ಗಿದ್ದ ಮ್ಯಾಂಚೆಸ್ಟರ್ ಸಿಟಿ ಸುಲಭವಾಗಿ ಫೈನಲ್ ಪ್ರವೇಶದ ಕನಸಿನೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ 19ನೇ ನಿಮಿಷದಲ್ಲಿ ಔಬಮೆಯಾಂಗ್ ಆ ತಂಡಕ್ಕೆ ಮೊದಲ ಪೆಟ್ಟು ನೀಡಿದರು.

18 ಪಾಸ್‌ಗಳ ಕೊನೆಯಲ್ಲಿ ಚೆಂಡು ಪೊಪೆ ಅವರ ಬಳಿಗೆ ಬಂದಿತ್ತು. ಅವರು ಸುದೀರ್ಘ ಕ್ರಾಸ್ ಮೂಲಕ ಚೆಂಡನ್ನು ವಾಕರ್ ಬಳಿಗೆ ಕಳುಹಿಸಿದರು. ನಂತರ ಔಬಮೆಯಾಂಗ್‌ಗೆ ಚೆಂಡು ಲಭಿಸಿತು. ಕಣ್ಣೆವೆ ಇಕ್ಕಿ ತೆರೆಯುವಷ್ಟರಲ್ಲಿ ಅವರು ಗುರಿ ಮುಟ್ಟಿಸಿದರು. ಈ ಮುನ್ನಡೆಯನ್ನು ಕಾಯ್ದುಕೊಂಡೇ ಆರ್ಸೆನಲ್ ಆಕ್ರಮಣವನ್ನು ಇನ್ನಷ್ಟು ಬಲಪಡಿಸಿಕೊಂಡಿತು. ಎದುರಾಳಿಗಳಿಗೆ ಯಾವುದೇ ರೀತಿಯಲ್ಲೂ ಅವಕಾಶಗಳು ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

71ನೇ ನಿಮಿಷದಲ್ಲಿ ತಂಡ ಎದುರಾಳಿಗಳಿಗೆ ಮತ್ತೊಂದು ಆಘಾತ ನೀಡಿತು. ಮ್ಯಾಂಚೆಸ್ಟರ್ ತಂಡದ ಆಕ್ರಮಣ ವಿಭಾಗದವರು ಸ್ವಲ್ಪ ಹಿನ್ನಡೆ ಅನುಭವಿಸಿದ್ದನ್ನು ಗಮನಿಸಿದ ಔಬಮೆಯಾಂಗ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗುರಿಯತ್ತ ಒದ್ದರು. ಈ ಗೋಲಿನಲ್ಲಿ ಕೀರನ್ ಟೆರ್ನಿ ಅವರ ನಿಖರ ಪಾಸ್ ಕೂಡ ಪ್ರಮುಖವಾಗಿತ್ತು. ಪಂದ್ಯದ ಹೆಚ್ಚಿನ ಅವಧಿಯಲ್ಲಿ (ಶೇಕಡಾ 70) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದು ಮ್ಯಾಂಚೆಸ್ಟರ್ ಸಿಟಿ ತಂಡ. ತಲಾ 12 ಕಾರ್ನರ್ ಮತ್ತು ಶಾಟ್‌ಗಳೂ ಆ ತಂಡಕ್ಕೆ ಲಭಿಸಿದ್ದವು.

ಆರು ವರ್ಷಗಳ ಹಿಂದೆ ಆರ್ಸೆನಲ್ ತಂಡ ಎಫ್‌ಎ ಕಪ್ ಗೆದ್ದಾಗ ಆರ್ಟೆರಾ ನಾಯಕರಾಗಿದ್ದರು. ಉತ್ತರ ಲಂಡನ್‌ನ ಈ ತಂಡದೊಂದಿಗೆ ಅದು ಅವರ ಮೊದಲ ವರ್ಷ ಆಗಿತ್ತು. 2017ರಲ್ಲಿ ತಂಡದ ಕಪ್ ಗೆದ್ದಾಗಲೂ ಆರ್ಟೆರಾ ನಾಯಕರಾಗಿದ್ದರು.

’ಅತ್ಯುತ್ತಮ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸುವುದು ಸುಲಭದ ಮಾತಲ್ಲ. ಅವಕಾಶಗಳನ್ನು ಸೃಷ್ಟಿಸಲು ಮತ್ತು ಸಿಕ್ಕಿದ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ನಿಖರ ಯೋಜನೆಗಳು ಬೇಕಾಗುತ್ತವೆ. ಎದುರಾಳಿಗಳ ಆಕ್ರಮಣವನ್ನು ತಡೆಯುವಾಗಲೂ ತುಂಬ ಎಚ್ಚರಿಕೆಯಿಂದ ಇರಬೇಕು. ಈ ಪಂದ್ಯದಲ್ಲಿ ನಮ್ಮ ಆಟಗಾರರು ಇಂಥ ಯೋಜನೆಗಳನ್ನೆಲ್ಲ ನಿಖರವಾಗಿ ಜಾರಿಗೆ ತಂದರು. ಆಟಗಾರರು ಇಲ್ಲಿ ತೋರಿದ ಸಾಮರ್ಥ್ಯ ನನಗೆ ತುಂಬ ಖುಷಿ ನೀಡಿದೆ‘ ಎಂದು ಆರ್ಟೆರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT