ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾ ದೇವಿಯ ಭರವಸೆಯ ಹೆಜ್ಜೆ

Last Updated 9 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಭಾರತದ ಮಹಿಳಾ ಫುಟ್‌ಬಾಲ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಆಟಗಾರ್ತಿ ಗಂಗೊಮ್‌ ಬಾಲಾ ದೇವಿ. ಸದ್ಯ ಯೂರೋಪ್‌ನ ಪ್ರಮುಖ ಲೀಗ್‌ವೊಂದರಲ್ಲಿ ಆಡುತ್ತಿರುವ ಅವರು ಹಲವು ಆಟಗಾರ್ತಿಯರಿಗೆ ಮಾದರಿಯಾಗಿದ್ದಾರೆ.

ಯೂರೋಪ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ ಬಾಲಾ. ಇತ್ತೀಚೆಗೆ ಸ್ಕಾಟಿಷ್‌ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಅವರು, ರೇಂಜರ್ಸ್ ಎಫ್‌ಸಿ ತಂಡದ ಪರ 85ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ್ದರು. ಅವರು ಪ್ರತಿನಿಧಿಸಿದ್ದ ತಂಡವು ಮದರ್‌ವೆಲ್ ಎಫ್‌ಸಿ ಎದುರು 9–0 ಅಂತರದಿಂದ ಜಯಿಸಿತ್ತು. ತಂಡಕ್ಕೆ ಪೆನಾಲ್ಟಿ ಅವಕಾಶವೊಂದನ್ನು ಒದಗಿಸಿಕೊಡುವಲ್ಲಿಯೂ ಬಾಲಾ ದೇವಿ ನೆರವಾಗಿದ್ದರು.

ಈ ವರ್ಷದ ಜನವರಿಯಲ್ಲಿ ಯೂರೋಪ್‌ನ ಲೀಗ್‌ನಲ್ಲಿ ಆಡಲು ಅವರು ಸಹಿ ಹಾಕಿದ್ದರು.

ಫಾರ್ವರ್ಡ್‌ ಆಟಗಾರ್ತಿ ಮಣಿಪುರದಬಾಲಾ ದೇವಿ, ಬಾಲ್ಯದಿಂದ ಹೆಚ್ಚಾಗಿ ಹುಡುಗರೊಂದಿಗೇ ಫುಟ್‌ಬಾಲ್ ಆಡುತ್ತ ಬೆಳೆದವರು.

2005ರಲ್ಲಿ 16 ವರ್ಷದೊಳಗಿನವರ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರು. ಹಂತಹಂತವಾಗಿ ಏಳ್ಗೆ ಕಾಣುತ್ತ 2010ರಲ್ಲಿ ರಾಷ್ಟ್ರೀಯ ಸೀನಿಯರ್‌ ತಂಡಕ್ಕೆ ಪದಾರ್ಪಣೆ ಮಾಡಿದರು. ಅದೇ ವರ್ಷ ಮೊದಲ ಬಾರಿ ನಡೆದ ಮಹಿಳೆಯರ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) ಚಾಂಪಿಯನ್‌ಷಿಪ್‌ನಲ್ಲಿ 8 ಗೋಲುಗಳನ್ನು ಗಳಿಸಿ ಮಿಂಚು ಹರಿಸಿದ್ದರು. ಟೂರ್ನಿಯಲ್ಲಿ ಭಾರತ ತಂಡ ನೇಪಾಳವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. 2016ರ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದ 30 ವರ್ಷದ ಬಾಲಾ ದೇವಿ ಟ್ರೋಫಿ ಗೆದ್ದುಕೊಟ್ಟಿದ್ದರು.

ಭಾರತ ತಂಡದ ಪರ 38 ಪಂದ್ಯಗಳನ್ನು ಆಡಿರುವ ಬಾಲಾ ದೇವಿ ಇದುವರೆಗೆ ಗಳಿಸಿದ್ದು 36 ಗೋಲುಗಳು.

ಮಾನವೀಯ ಕಾರ್ಯಗಳಲ್ಲೂ ಮುಂದು: ಬಾಲಾ ದೇವಿ ಕೋವಿಡ್‌–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವ ಬಾಲಕಾರ್ಮಿಕರ ನೆರವಿಗೆ ಧಾವಿಸಿದ್ದರು. ‘ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯೂ (ಸಿಆರ್‌ವೈ)’ ಎಂಬ ಸರ್ಕಾರೇತರ ಸಂಸ್ಥೆಯೊಂದಿಗೆ ಕೈಜೋಡಿಸಿ, ಅಗತ್ಯವಿರುವ ಮಕ್ಕಳಿಗೆ ಮೂಲಭೂತ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ನೆರವಾಗಿದ್ದಾರೆ.

‘ಹೆಚ್ಚಿನ ಆಟಗಾರ್ತಿಯರು ಬಾಲಾ ದೇವಿಯವರ ರೀತಿ ಮಾನ್ಯತೆ ಪಡೆಯಬೇಕು. ಬಲಿಷ್ಠ ಎದುರಾಳಿಗಳ ಎದುರು ಆಡುವುದನ್ನು ಕಲಿಯಬೇಕು. ಕಿರಿಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿರುವ ಕಾರಣ ಖಂಡಿತವಾಗಿಯೂ ಅವರು ಬಾಲಾ ದೇವಿಯ ಹೆಜ್ಜೆ ಅನುಸರಿಸಲಿದ್ದಾರೆ’ ಎಂದು ಭಾರತ ತಂಡದ ಗೋಲ್‌ಕೀಪರ್ ಅದಿತಿ ಚವಾಣ್‌ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT