ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಲ್ಸ್‌ ಸೋಲು ತಪ್ಪಿಸಿದ ಬೇಲ್

ಅಮೆರಿಕ ವಿರುದ್ದದ ಪಂದ್ಯ 1–1 ರಲ್ಲಿ ಸಮಬಲ
Last Updated 22 ನವೆಂಬರ್ 2022, 12:34 IST
ಅಕ್ಷರ ಗಾತ್ರ

ಅಲ್‌ ರಯ್ಯಾನ್, ಕತಾರ್‌: ಗ್ಯಾರೆತ್ ಬೇಲ್‌ ಅವರು 82ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಗಳಿಸಿದ ಗೋಲಿನ ನೆರವಿನಿಂದ ವೇಲ್ಸ್‌ ತಂಡ ಸೋಲಿನಿಂದ ಪಾರಾಯಿತು.

ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ವೇಲ್ಸ್‌ ತಂಡ ಅಮೆರಿಕದ ಜತೆ 1–1 ರಲ್ಲಿ ಡ್ರಾ ಸಾಧಿಸಿ ಪಾಯಿಂಟ್‌ ಹಂಚಿಕೊಂಡಿತು.

ಯುವ ಆಟಗಾರರನ್ನು ಒಳಗೊಂಡ ಅಮೆರಿಕ ಅಮೋಘ ಆಟವಾಡಿ ಅಚ್ಚರಿಯ ಫಲಿತಾಂಶದ ನಿರೀಕ್ಷೆ ಮೂಡಿಸಿತ್ತು. ಆದರೆ ಡಿಫೆಂಡರ್‌ ವಾಕರ್‌ ಜಿಮೆರ್‌ಮನ್‌ ಮಾಡಿದ ತಪ್ಪು ಎದುರಾಳಿ ತಂಡಕ್ಕೆ ಪೆನಾಲ್ಟಿ ಕಿಕ್‌ ಅವಕಾಶ ತಂದುಕೊಟ್ಟಿತು.

ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ 36ನೇ ನಿಮಿಷದಲ್ಲಿ ಟಿಮ್‌ ವಿಯಾ ಅವರು ಅಮೆರಿಕಕ್ಕೆ ಮುನ್ನಡೆ ತಂದಿತ್ತರು.

19 ವರ್ಷದ ಯೂನುಸ್‌ ಮೂಸಾ ಅವರು ಅಂಗಳದ ಮಧ್ಯ ಭಾಗದಲ್ಲಿ ಚೆಂಡನ್ನು ಜೋಶ್‌ ಸರ್ಜೆಂಟ್‌ಗೆ ತಲುಪಿಸಿದರು. ಜೋಶ್‌ ಅವರು ಡ್ರಿಬಲ್‌ ಮಾಡುತ್ತಾ ಸಾಗಿ ಕ್ರಿಸ್ಟಿಯನ್‌ ಪುಲಿಸಿಚ್‌ಗೆ ಪಾಸ್‌ ನೀಡಿದರು. ಪುಲಿಸಿಚ್‌, ಎದುರಾಳಿ ಗೋಲ್‌ಕೀಪರ್‌ ವೇಯ್ನ್‌ ಹೆನೆಸ್ಸಿ ತಮ್ಮತ್ತ ಧಾವಿಸಿ ಬರುವ ಮುನ್ನ ಚಾಣಾಕ್ಷತನದಿಂದ ಗುರಿ ಸೇರಿಸಿದರು.

10 ನೇ ನಿಮಿಷದಲ್ಲಿ ಅಮೆರಿಕಕ್ಕೆ ಮುನ್ನಡೆ ಗಳಿಸುವ ಉತ್ತಮ ಅವಕಾಶ ಲಭಿಸಿತ್ತು. ಆಂಟೋನಿ ರಾಬಿನ್ಸನ್‌ ನೀಡಿದ ಪಾಸ್‌ನಲ್ಲಿ ಸರ್ಜೆಂಟ್‌ ಹೆಡ್‌ ಮಾಡಿದ ಚೆಂಡು ಗೋಲುಕಂಬಕ್ಕೆ ಬಡಿದು ವಾಪಸಾಯಿತು.

ಮೊದಲಾರ್ಧದ ಹೆಚ್ಚಿನ ಅವಧಿಯಲ್ಲಿ ಚೆಂಡು ಅಮೆರಿಕದ ಆಟಗಾರರ ನಿಯಂತ್ರಣದಲ್ಲಿತ್ತು. ಎರಡನೇ ಅವಧಿಯಲ್ಲಿ ವೇಲ್ಸ್‌ ಆಟಗಾರರು ಮರುಹೋರಾಟ ನಡೆಸಿದರು. ಸಮಬಲದ ಗೋಲಿಗಾಗಿ ಮೇಲಿಂದ ಮೇಲೆ ಪ್ರಯತ್ನ ನಡೆಸಿದರೂ, ಅಮೆರಿಕದ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ ತಡೆಯಾಗಿ ನಿಂತರು.

ಅಮೆರಿಕದ ಗೆಲುವಿನ ಆಸೆ ಗರಿಗೆದರಿದ್ದ ಸಮಯದಲ್ಲಿ ವೇಲ್ಸ್‌ಗೆ ಪೆನಾಲ್ಟಿ ಕಿಕ್‌ ದೊರೆಯಿತು. ವೇಲ್ಸ್‌ ತಂಡದ ಬ್ರೆನ್ನನ್‌ ಜಾನ್ಸನ್‌ ಅವರು ಥ್ರೋ ಇನ್‌ ಮಾಡಿದ ಚೆಂಡನ್ನು ಆ್ಯರನ್ ರಾಮ್ಸೆ, ಸಮೀಪದಲ್ಲೇ ಇದ್ದ ಬೇಲ್‌ ಅವರತ್ತ ಕಳುಹಿಸಿದರು. ಅಮೆರಿಕದ ಡಿಫೆಂಡರ್‌ ಜಿಮೆರ್‌ಮನ್‌, ಪೆನಾಲ್ಟಿ ಆವರಣದಲ್ಲಿದ್ದ ಬೇಲ್‌ ಅವರನ್ನು ಟ್ಯಾಕಲ್‌ ಮಾಡಿ ಬೀಳಿಸಿದರು. ಕತಾರ್‌ನ ರೆಫರಿ ಅಬ್ದುಲ್‌ರಹಮಾನ್‌ ಅಲ್‌ ಜಾಸಿಮ್‌ ಪೆನಾಲ್ಟಿ ಕಿಕ್‌ ಅವಕಾಶ ನೀಡಿದರು.

ಪೆನಾಲ್ಟಿ ಅವಕಾಶದಲ್ಲಿ ಬೇಲ್‌ ಬಲವಾಗಿ ಒದ್ದ ಚೆಂಡು ಅಮೆರಿಕದ ಗೋಲ್‌ಕೀಪರ್‌ ಮ್ಯಾಟ್‌ ಟರ್ನರ್‌ ಅವರ ಎಡಗೈಯನ್ನು ಸವರಿಕೊಂಡು ಗೋಲುಪೆಟ್ಟಿಗೆ ಸೇರಿತು. ಆ ಬಳಿಕ ಉಭಯ ತಂಡಗಳು ಗೆಲುವಿನ ಗೋಲಿಗೆ ನಡೆಸಿದ ಪ್ರಯತ್ನಗಳಿಗೆ ಫಲ ಲಭಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT