ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಯ ಎಎಫ್‌ಸಿ ಕಪ್ ಪಂದ್ಯ ಸದ್ಯಕ್ಕಿಲ್ಲ

ಮಾಲ್ಡೀವ್ಸ್ ಈಗಲ್ಸ್‌–ಅಬಹಾನಿ ನಡುವಿನ ಪಂದ್ಯ ನಡೆಯದ್ದರಿಂದ ಉಂಟಾಗಿರುವ ಗೊಂದಲ
Last Updated 23 ಏಪ್ರಿಲ್ 2021, 14:18 IST
ಅಕ್ಷರ ಗಾತ್ರ

ನವದೆಹಲಿ: ಎಎಫ್‌ಸಿ ಕಪ್‌ ಪ್ಲೇ ಆಫ್‌ ಹಂತದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮುಂದಿನ ವಾರ ಆಡಬೇಕಾಗಿದ್ದ ಪಂದ್ಯವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಎದುರಾಳಿ ತಂಡ ಯಾವುದೆಂದು ಇನ್ನೂ ನಿರ್ಧಾರವಾಗದ ಕಾರಣ ಪಂದ್ಯಕ್ಕೆ ವಿಘ್ನ ಒದಗಿದೆ. ನಿಗದಿತ ವೇಳಾಪಟ್ಟಿಯಂತೆಏಪ್ರಿಲ್ 28ರಂದು ಹಣಾಹಣಿ ನಡೆಯಬೇಕಾಗಿತ್ತು.

ಮಾಲ್ಡೀವ್ಸ್ ಈಗಲ್ಸ್‌ ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆರು ಬಾರಿ ಚಾಂಪಿಯನ್ ಆಗಿರುವ ಅಬಹಾನಿ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಬಿಎಫ್‌ಸಿ ಎದುರಿಸಬೇಕಾಗಿದೆ. ಅಬಹಾನಿ ಮತ್ತು ಈಗಲ್ಸ್ ನಡುವಿನ ಪಂದ್ಯ ಢಾಕಾದ ಬಂಗಾಬಂಧು ಕ್ರೀಡಾಂಗಣದಲ್ಲಿ ಏಪ್ರಿಲ್ 14ರಂದು ನಡೆಯಬೇಕಾಗಿತ್ತು. ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಪಂದ್ಯವನ್ನು 21ಕ್ಕೆ ಕಠ್ಮಂಡುವಿನಲ್ಲಿ ನಡೆಸಲು ನಿರ್ಧರಿಸಲಾಯಿತು. ಪ್ರಯಾಣ ನಿರ್ಬಂಧಗಳಿರುವುದರಿಂದ ಅದು ಕೂಡ ನಡೆಯಲಿಲ್ಲ.

‘ಎದುರಾಳಿ ಯಾರೆಂದು ತಿಳಿಯದೇ ಪಂದ್ಯ ನಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಆ ಎರಡು ತಂಡಗಳ ನಡುವಿನ ಹಣಾಹಣಿ ಮುಗಿಯುವ ವರೆಗೆ ಕಾಯಲೇಬೇಕಾಗಿದೆ. ಸದ್ಯದ ಮಟ್ಟಿಗೆ ಈ ಪಂದ್ಯವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ ಎಂದೇ ಹೇಳಬೇಕಾಗಿದೆ’ ಎಂದು ಬೆಂಗಳೂರು ಎಫ್‌ಸಿ ಶುಕ್ರವಾರ ತಿಳಿಸಿದೆ. ಪಂದ್ಯವನ್ನು ಮುಂದೂಡಲಾಗಿದೆ ಎಂದು ಎಎಫ್‌ಸಿಯ ವೆಬ್‌ಸೈಟ್‌ನಲ್ಲೂ ನಮೂದಿಸಲಾಗಿದೆ.

ಭಾರತದಲ್ಲಿ ಪಂದ್ಯ?
ಈಗಲ್ಸ್ ಎದುರಿನ ಪಂದ್ಯವನ್ನು ಭಾರತದಲ್ಲಿ ಆಡಲು ಸಾಧ್ಯವೇ ಎಂದು ಅಬಹಾನಿ ಬಳಿ ಎಎಫ್‌ಸಿ ಕೇಳಿರುವುದಾಗಿ ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ ಡೈಲಿ ಸ್ಟಾರ್‌ ವರದಿ ಮಾಡಿದೆ.

2016ರಲ್ಲಿ ರನ್ನರ್ ಅಪ್ ಆಗಿದ್ದ ಬಿಎಫ್‌ಸಿ ತಂಡ ಎಎಫ್‌ಸಿ ಕಪ್‌ನ ಈ ಹಿಂದಿನ ಪಂದ್ಯದಲ್ಲಿ ನೇಪಾಳದ ತ್ರಿಭುವನ್ ಆರ್ಮಿ ಎಫ್‌ಸಿಯನ್ನು 5–0ಯಿಂದ ಮಣಿಸಿತ್ತು. ಈ ಪಂದ್ಯ ಗೋವಾದ ಬ್ಯಾಂಬೊಲಿಮ್‌ನಲ್ಲಿ ನಡೆದಿತ್ತು. ಬಿಎಫ್‌ಸಿಯ ಹೊಸ ಕೋಚ್ ಆಗಿ ನೇಮಕಗೊಂಡ ನಂತರ ಮಾರ್ಕೊ ಪೆಜುವೊಲಿ ಅವರಿಗೆ ಅದು ಮೊದಲ ಪಂದ್ಯ ಆಗಿತ್ತು. ತಂಡ ಈಗ ಗೋವಾದಲ್ಲಿ, ಬಯೊ ಬಬಲ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT