ಸೋಮವಾರ, ಜುಲೈ 4, 2022
21 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಸುನಿಲ್ ಚೆಟ್ರಿ ಮೇಲೆ ನಿರೀಕ್ಷೆಯ ಭಾರ

ಬಿಎಫ್‌ಸಿಗೆ ಸೋಲಿನ ಕಹಿ ಮರೆಯುವ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಜೇಯ ಓಟದ ಲಯ ತಪ್ಪಿ ಸೋಲಿನ ಕಹಿ ಅನುಭವಿಸಿದ ಬಿಎಫ್‌ಸಿ ಜಯದ ಲಯಕ್ಕೆ ಮರಳುವ ಕನಸಿನೊಂದಿಗೆ ತವರಿನಲ್ಲಿ ಕಣಕ್ಕೆ ಇಳಿಯಲಿದೆ. ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬಿಎಫ್‌ಸಿ ತಂಡ ನಾರ್ತ್ ಈಸ್ಟ್ ಯುನೈಟೆಡ್‌ ಎದುರು ಸೆಣಸಲಿದೆ.

ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್ ಟೂರ್ನಿಗಾಗಿ ಐಎಸ್‌ಎಲ್‌ ಪಂದ್ಯಗಳಿಗೆ ವಿರಾಮ ನೀಡಿದಾಗ ಬಿಎಫ್‌ಸಿ ಆಡಿದ 11 ಪಂದ್ಯಗಳಲ್ಲಿ ಎಂಟನ್ನು ಗೆದ್ದು ಮೂರರಲ್ಲಿ ಡ್ರಾ ಸಾಧಿಸಿತ್ತು. 27 ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿತ್ತು. ಆದರೆ ಭಾನುವಾರ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಎದುರು ಸೋತು ಎರಡನೇ ಸ್ಥಾನಕ್ಕೆ ಕುಸಿದಿದೆ.

ಹೀಗಾಗಿ ಮೊದಲ ಸ್ಥಾನಕ್ಕೆ ಮರಳುವ ಗುರಿಯೊಂದಿಗೆ ತಂಡ ಬುಧವಾರ ಆಡಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್‌ ತಂಡ ಬಿಎಫ್‌ಸಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದು 23 ಪಾಯಿಂಟ್ ಹೊಂದಿದೆ. ಪಟ್ಟಿಯಲ್ಲಿ ಎರಡನೇ ಸ್ಥಾನದತ್ತ ಸಾಗುವ ಕನಸು ಹೊತ್ತು ತಂಡ ಬಿಎಫ್‌ಸಿ ಎದುರು ಸೆಣಸಲಿದೆ.

ದಾಖಲೆ ಬರೆದ ಬಿಎಫ್‌ಸಿ:ಮುಂಬೈ ಸಿಟಿ ಎಫ್‌ಸಿ ಎದುರು ಸೋಲುವ ವರೆಗೆ ಕಳೆದ ಆವೃತ್ತಿಯೂ ಸೇರಿದಂತೆ ಬಿಎಫ್‌ಸಿ ಲೀಗ್ ಹಂತದಲ್ಲಿ ಸತತ 11 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿತ್ತು. ಇದು ಐಎಸ್‌ಎಲ್‌ನ ದಾಖಲೆಯಾಗಿದೆ. 2014ರಲ್ಲಿ ಎಫ್‌ಸಿ ಗೋವಾ ಸತತ 10 ಪಂದ್ಯಗಳಲ್ಲಿ ಅಜೇಯವಾಗಿತ್ತು. ಕಳೆದ ಬಾರಿ ಬಿಎಫ್‌ಸಿ ಕೂಡ 10 ಪಂದ್ಯಗಳಲ್ಲಿ ಅಜೇಯವಾಗಿತ್ತು.

ಕಳೆದ ಬಾರಿಯ ರನ್ನರ್ ಅಪ್‌ ಬಿಎಫ್‌ಸಿ ತಂಡ ಈ ಬಾರಿ ಅಮೋಘ ಆಟದ ಮೂಲಕ ಫುಟ್‌ಬಾಲ್ ಪ್ರಿಯರನ್ನು ರಂಜಿಸಿದೆ. ಹೊಸ ಕೋಚ್‌ ಕಾರ್ಲ್ಸ್‌ ಕ್ವದ್ವತ್‌ ಮಾರ್ಗದರ್ಶನದಲ್ಲಿ ಈ ಬಾರಿ ಮೊದಲ ಪಂದ್ಯದಲ್ಲೇ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ವಿರುದ್ಧ ಗೆದ್ದಿತ್ತು. ಐದನೇ ಪಂದ್ಯದ ನಂತರ ಸ್ಟ್ರೈಕರ್ ಮಿಕು ಗಾಯಗೊಂಡು ತವರಿಗೆ ಮರಳಿದ್ದರು. ಆದರೆ ಚೆಟ್ರಿ ಏಕಾಂಗಿಯಾಗಿ ಆಕ್ರಮಣಕ್ಕೆ ಮೊನಚು ತುಂಬಿದ್ದರು. ಮಿಡ್‌ಫೀಲ್ಡರ್‌ಗಳಾದ ಉದಾಂತ ಸಿಂಗ್‌, ಬೋಯ್‌ತಂಗ್ ಹಾಕಿಪ್‌, ದಿಮಾಸ್ ಡೆಲ್ಗಾಡೊ ಮುಂತಾದವರಿಗೆ ಚೆಟ್ರಿ ಅವರಿಗೆ ಉತ್ತಮ ಬೆಂಬಲ ಸಿಕ್ಕಿತ್ತು.

ಹರ್ಮನ್ ಜೋತ್ ಖಾಬ್ರಾ, ನಿಶು ಕುಮಾರ್‌, ರಾಹುಲ್ ಭೆಕೆ ಮುಂತಾದವರು ಡಿಫೆಂಡಿಂಗ್ ವಿಭಾಗದ ಚುಕ್ಕಾಣಿ ಹಿಡಿದಿದ್ದರು. 

ಪವನ್, ರೆಹನೇಶ್‌ ಮಹಾಗೋಡೆ: ಎಲ್ಕೊ ಶಟೋರಿ ಗರಡಿಯಲ್ಲಿ ಪಳಗಿರುವ ನಾರ್ತ್ ಈಸ್ಟ್‌ ತಂಡಕ್ಕೆ ಗೋಲ್‌ಕೀಪರ್‌ಗಳಾದ ಪವನ್‌ ಕುಮಾರ್ ಮತ್ತು ಟಿ.ಪಿ.ರಹನೇಶ್‌ ಅವರ ಬಲವಿದೆ. ಬುಧವಾರ ಇವರ ಪೈಕಿ ಯಾರು ಕಣಕ್ಕೆ ಇಳಿದರೂ ಸುನಿಲ್ ಚೆಟ್ರಿ ಪಡೆ ಭಾರಿ ಸವಾಲನ್ನು ಎದುರಿಸಬೇಕಾದೀತು. ಗುರುವಿಂದರ್ ಸಿಂಗ್, ಶೌವಿಕ್ ಘೋಷ್‌ ಮತ್ತು ಪವನ್ ಅವರನ್ನು ಒಳಗೊಂಡ ಡಿಫೆಂಡರ್‌ಗಳ ಸವಾಲನ್ನು ಮೀರುವ ಸವಾಲು ಕೂಡ ಬಿಎಫ್‌ಸಿ ಮುಂದೆ ಇದೆ.

ದಾಖಲೆ ಬರೆದ ಬಿಎಫ್‌ಸಿ

ಮುಂಬೈ ಸಿಟಿ ಎಫ್‌ಸಿ ಎದುರು ಸೋಲುವ ವರೆಗೆ ಕಳೆದ ಆವೃತ್ತಿಯೂ ಸೇರಿದಂತೆ ಬಿಎಫ್‌ಸಿ ತಂಡ ಲೀಗ್ ಹಂತದಲ್ಲಿ ಸತತ 11 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿತ್ತು. ಇದು ಐಎಸ್‌ಎಲ್‌ನ ದಾಖಲೆಯಾಗಿದೆ. 2014ರಲ್ಲಿ ಎಫ್‌ಸಿ ಗೋವಾ ಸತತ 10 ಪಂದ್ಯಗಳಲ್ಲಿ ಅಜೇಯವಾಗಿತ್ತು. ಕಳೆದ ಬಾರಿ ಬಿಎಫ್‌ಸಿ ಕೂಡ 10 ಪಂದ್ಯಗಳಲ್ಲಿ ಅಜೇಯವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು