ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kings Cup Football: ನಾಯಕ ಸುನಿಲ್ ಚೆಟ್ರಿಯಿಲ್ಲದೆ ಇರಾಕ್‌ಗೆ ಮಣಿದ ಭಾರತ

Published 7 ಸೆಪ್ಟೆಂಬರ್ 2023, 15:20 IST
Last Updated 7 ಸೆಪ್ಟೆಂಬರ್ 2023, 15:20 IST
ಅಕ್ಷರ ಗಾತ್ರ

ಚಿಯಾಂಗ್‌ ಮೈ, ಥಾಯ್ಲೆಂಡ್‌ (ಪಿಟಿಐ): ಭಾರತ ತಂಡದವರು ಕಿಂಗ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತಮಗಿಂತ ಮೇಲಿನ ರ್‍ಯಾಂಕ್‌ನಲ್ಲಿರುವ ಇರಾಕ್‌ಗೆ ಪ್ರಬಲ ಪೈಪೋಟಿ ನೀಡಿದರೂ, ಪೆನಾಲ್ಟಿ ಶೂಟೌಟ್‌ನಲ್ಲಿ (4–5) ಸೋಲು ಅನುಭವಿಸಿದರು.

ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ತಂಡ ಗುರುವಾರ ನಡೆದ ಪಂದ್ಯದಲ್ಲಿ 79ನೇ ನಿಮಿಷದವರೆಗೂ 2–1 ರಿಂದ ಮುನ್ನಡೆ ಸಾಧಿಸಿತ್ತು.

ಈ ವೇಳೆ ಇರಾಕ್‌ಗೆ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ಭಾರತದ ಇಬ್ಬರು ಡಿಫೆಂಡರ್‌ಗಳು, ಎದುರಾಳಿ ಸ್ಟ್ರೈಕರ್‌ ಐಮನ್‌ ಗದ್ಬಾನ್‌ ಅವರನ್ನು ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ನೀಡಿದರು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಐಮನ್ ಪಂದ್ಯವನ್ನು ಸಮಸ್ಥಿತಿಗೆ ತಂದರು.

ಈ ಟೂರ್ನಿಯ ನಿಯಮದಂತೆ 90 ನಿಮಿಷಗಳ ಆಟ ಸಮಬಲದಲ್ಲಿ ಕೊನೆಗೊಂಡರೆ, ಹೆಚ್ಚುವರಿ 30 ನಿಮಿಷಗಳ ಆಟ ಆಡಿಸುವ ಬದಲು ನೇರವಾಗಿ ಪೆನಾಲ್ಟಿ ಶೂಟೌಟ್‌ನ ಮೊರೆಹೋಗಲಾಯಿತು. ರೋಚಕ ಸೆಣಸಾಟ ನಡೆದ ಶೂಟೌಟ್‌ನಲ್ಲಿ ಗೆದ್ದ ಇರಾಕ್‌ ಫೈನಲ್‌ ಪ್ರವೇಶಿಸಿತು.

ಭಾರತ ತಂಡವು ಮೂರನೇ ಸ್ಥಾನವನ್ನು ನಿರ್ಧರಿಸಲು ಆ.10 ರಂದು ನಡೆಯುವ ಪಂದ್ಯದಲ್ಲಿ ಥಾಯ್ಲೆಂಡ್‌ ಅಥವಾ ಲೆಬನಾನ್‌ ತಂಡವನ್ನು ಎದುರಿಸಲಿದೆ.

ಫಿಫಾ ರ್‍ಯಾಂಕಿಂಗ್‌ನಲ್ಲಿ 99ನೇ ಸ್ಥಾನದಲ್ಲಿರುವ ಭಾರತ ತಂಡ, ಚೆಟ್ರಿ ಅವರ ಅನುಪಸ್ಥಿತಿಯಲ್ಲೂ 70ನೇ ರ್‍ಯಾಂಕ್‌ನ ತಂಡಕ್ಕೆ ತಕ್ಕ ಪೈಪೋಟಿ ನೀಡಿತು.

ಮಹೇಶ್‌ ನೊರೇಮ್‌ ಅವರು 16ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದಿತ್ತರು. ಮರುಹೋರಾಟ ನಡೆಸಿದ ಇರಾಕ್‌ ತಂಡಕ್ಕೆ ಕರೀಂ ಅಲಿ 28ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿದರು.

ಎರಡನೇ ಅವಧಿಯ ಆರಂಭದಲ್ಲೇ (51ನೇ ನಿ.) ಭಾರತ ಮತ್ತೆ ಮುನ್ನಡೆ ಸಾಧಿಸಿತು. ಇರಾಕ್‌ ತಂಡದ ನಾಯಕ ಮತ್ತು ಗೋಲ್‌ಕೀಪರ್‌ ಜಲಾಲ್‌ ಹಸನ್‌ ಅವರು ‘ಉಡುಗೊರೆ ಗೋಲು’ ನೀಡಿದರು. ಆದರೆ 79ನೇ ನಿಮಿಷದಲ್ಲಿ ಇರಾಕ್‌ಗೆ ಲಭಿಸಿದ ಪೆನಾಲ್ಟಿ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

ಇಂಜುರಿ ಅವಧಿಯಲ್ಲಿ ಇರಾಕ್‌ ತಂಡದ ಜಿದಾನ್‌ ಇಕ್ಬಾಲ್‌ ಅವರು ರೆಡ್‌ ಕಾರ್ಡ್‌ ಪಡೆದು ಹೊರನಡೆದರೂ, ಅದರ ಲಾಭ ತನ್ನದಾಗಿಸಿಕೊಳ್ಳಲು ಭಾರತಕ್ಕೆ ಆಗಲಿಲ್ಲ.

ಈ ಸೋಲಿನೊಂದಿಗೆ 2023ರ ಋತುವಿನಲ್ಲಿ ಭಾರತ ತಂಡದ 11 ಪಂದ್ಯಗಳ ಅಜೇಯ ಓಟಕ್ಕೆ ತೆರೆಬಿತ್ತು. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಏಳು ಸಲ ಪರಸ್ಪರ ಪೈಪೋಟಿ ನಡೆಸಿದ್ದವು. ಆರರಲ್ಲಿ ಇರಾಕ್‌ ಗೆದ್ದಿದ್ದರೆ, ಒಂದು ಪಂದ್ಯ ಡ್ರಾ ಆಗಿತ್ತು. 2010ರ ನವೆಂಬರ್‌ನಲ್ಲಿ ಕೊನೆಯದಾಗಿ ಆಡಿದ್ದಾಗ ಇರಾಕ್‌ 2–0 ಯಿಂದ ಗೆದ್ದಿತ್ತು.

‘ಫರ್ಫಾರ್ಮ್ಯಾಕ್ಸ್’ ಪ್ರಾಯೋಜಕತ್ವ

ಮುಂಬೈ: ರಿಲಯನ್ಸ್‌ ರಿಟೇಲ್‌ನ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ ಆಗಿರುವ ‘ಪರ್ಫಾರ್ಮ್ಯಾಕ್ಸ್’ ಭಾರತ ಫುಟ್‌ಬಾಲ್‌ ತಂಡದ ಅಧಿಕೃತ ಕಿಟ್‌ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಈ ಸಂಬಂಧ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಜತೆ ಒಪ್ಪಂದ ಮಾಡಿಕೊಂಡಿದೆ. ಭಾರತ ಸೀನಿಯರ್‌ ಪುರುಷರ ಮತ್ತು ಮಹಿಳಾ ತಂಡಗಳಿಗೆ ಪೋಷಾಕು ಸೇರಿದಂತೆ ಕಿಟ್‌ಅನ್ನು ‘ಪರ್ಫಾರ್ಮ್ಯಾಕ್ಸ್’ ಒದಗಿಸಲಿದೆ. ಕಿಂಗ್ಸ್‌ ಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ಹೊಸ ಪೋಷಾಕು ಧರಿಸಿ ಕಣಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT