ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಆಟಗಾರರಿಗೆ ಸುನಿಲ್‌ ಚೆಟ್ರಿಯೇ ಸ್ಫೂರ್ತಿ : ಇಗರ್ ಸ್ಟಿಮ್ಯಾಕ್‌

ಭಾರತ ಫುಟ್‌ಬಾಲ್ ತಂಡದ ಕೋಚ್‌ ಸ್ಟಿಮ್ಯಾಕ್‌ ಹೇಳಿಕೆ
Last Updated 5 ಜುಲೈ 2020, 13:07 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ಯುವ ಆಟಗಾರರಿಗೆ ಆದರ್ಶವಾಗಿದ್ದಾರೆ. ಆಟದ ಬಗ್ಗೆ ಅಪಾರ ಬದ್ಧತೆ ಹೊಂದಿರುವ ಅವರು ಯಾವಾಗಲೂ ಧನಾತ್ಮಕವಾಗಿ ಯೋಚಿಸುತ್ತಾರೆ. ತಮ್ಮನ್ನು ತಾವು ಹುರಿದುಂಬಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗುತ್ತಿದ್ದಾರೆ’ ಎಂದು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗರ್ ಸ್ಟಿಮ್ಯಾಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಎಲ್ಲಾ ಆಟಗಾರರಿಗೂ ಕಾಲಕ್ಕನುಗುಣವಾಗಿ ಹೊಸ ಹೊಸ ತಂತ್ರಗಳನ್ನು ಕಲಿಸಲು ನಾವು ಶ್ರಮಿಸುತ್ತೇವೆ. ತಂಡವನ್ನು ಆಯ್ಕೆಮಾಡುವಾಗ ಉತ್ತಮ ಲಯದಲ್ಲಿರುವ 11 ಅಥವಾ 23 ಮಂದಿ ಆಟಗಾರರಿಗೆ ಮಣೆ ಹಾಕಲು ಪ್ರಯತ್ನಿಸುತ್ತೇವೆ. ಸುನಿಲ್‌ ಚೆಟ್ರಿ ತಂಡದಲ್ಲಿರುವುದು ನಮ್ಮ ಸೌಭಾಗ್ಯ. ಅವರು ಇನ್ನಷ್ಟು ಕಾಲ ಫುಟ್‌ಬಾಲ್‌ ಆಡಲು ಸಮರ್ಥರಿದ್ದಾರೆ. ಅವರಿಗೆ ನಮ್ಮಿಂದಾದ ಎಲ್ಲಾ ಬಗೆಯ ಸಲಹೆ ಮತ್ತು ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು 52 ವರ್ಷ ವಯಸ್ಸಿನ ಸ್ಟಿಮ್ಯಾಕ್‌ ತಿಳಿಸಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಮತ್ತು ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯವೊಂದರಲ್ಲಿ ಆಡುವ ವಿದೇಶಿ ಆಟಗಾರರ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ಸ್ಟಿಮ್ಯಾಕ್‌ ‘ಇದು ಉತ್ತಮ ನಿರ್ಧಾರ. ಇದನ್ನು ನಾನು ಸ್ವಾಗತಿಸುತ್ತೇನೆ. ಈ ನಿಯಮದಿಂದಾಗಿ ಭಾರತದ ಆಟಗಾರರಿಗೆ ಹೆಚ್ಚಿನ ಲಾಭವಾಗಲಿದೆ. ಫುಟ್‌ಬಾಲ್‌ ಕ್ರೀಡೆಯ ಬೆಳವಣಿಗೆಗೂ ಇದು ಸಹಕಾರಿ’ ಎಂದಿದ್ದಾರೆ.

‘ಏಷ್ಯಾದ ಇತರ ಬಲಿಷ್ಠ ತಂಡಗಳ ಜೊತೆ ಸ್ಪರ್ಧೆ ನಡೆಸಬೇಕಾದರೆ ನಮ್ಮ ತಂಡವೂ ಅವರಷ್ಟೇ ಶಕ್ತಿಶಾಲಿಯಾಗಿರಬೇಕು. ಹೀಗಾಗಿಯೇ ಹೆಚ್ಚೆಚ್ಚು ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುತ್ತಿದ್ದೇವೆ. ನಮ್ಮ ಈ ಯೋಜನೆಗೆ ಮುಂದೆ ಖಂಡಿತವಾಗಿಯೂ ಯಶಸ್ಸು ಲಭಿಸುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

‘ಐಎಸ್‌ಎಲ್‌ ಮತ್ತು ಐ ಲೀಗ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ನಮ್ಮ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರಿದಾಗಲೆಲ್ಲಾ ತುಂಬಾ ಖುಷಿಯಾಗುತ್ತದೆ. ಈ ಲೀಗ್‌ಗಳಲ್ಲಿ ಆಡುವುದರಿಂದ ಅವರು ಹೊಸ ಹೊಸ ವಿಷಯಗಳನ್ನು ಕಲಿಯುತ್ತಾರೆ. ಅವರ ಮನೋಬಲವೂ ಹೆಚ್ಚುತ್ತದೆ’ ಎಂದೂ ನುಡಿದಿದ್ದಾರೆ.

1998ರ ಫಿಫಾ ವಿಶ್ವಕಪ್‌ನಲ್ಲಿ ಕ್ರೊವೇಷ್ಯಾ ತಂಡವು ಕಂಚಿನ ಪದಕ ಗೆದ್ದಿತ್ತು. ಆಗ ಸ್ಟಿಮ್ಯಾಕ್‌ ಅವರು ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT