ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: ಚೆಟ್ರಿಗೆ ಉಡುಗೊರೆ ನೀಡುವುದೇ ಭಾರತ?

ಕುವೈತ್ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ ಇಂದು
Published 5 ಜೂನ್ 2024, 23:36 IST
Last Updated 5 ಜೂನ್ 2024, 23:36 IST
ಅಕ್ಷರ ಗಾತ್ರ

ಕೋಲ್ಕತ್ತ : ಭಾರತದ ಫುಟ್‌ಬಾಲ್‌ ಕ್ರೀಡೆಯಲ್ಲಿ 19 ವರ್ಷಗಳ ಕಾಲ ಮೆರೆದ ತಾರೆ ಸುನಿಲ್‌ ಚೆಟ್ರಿ ಅವರಿಗೆ ಗುರುವಾರ ಭಾವನಾತ್ಮಕ ಕ್ಷಣ ಎದುರಾಗಲಿದೆ. ಕುವೈತ್‌ ವಿರುದ್ಧ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಈ ದಿಗ್ಗಜ ಆಟಗಾರ ಮತ್ತು ಹಾಲಿ ನಾಯಕನಿಗೆ ‘ವಿದಾಯದ ಉಡುಗೊರೆ’ ನೀಡುವ ವಿಶ್ವಾಸದಲ್ಲಿ ಭಾರತ ತಂಡ ಇದೆ.

ಕಳೆದ ತಿಂಗಳು ನಿವೃತ್ತಿ ಪ್ರಕಟಿಸಿರುವ 39 ವರ್ಷ ವಯಸ್ಸಿನ ಚೆಟ್ರಿ ಅವರು ಕುವೈತ್ ವಿರುದ್ಧದ ಪಂದ್ಯ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ಪ್ರಕಟಿಸಿದ್ದರು. ಇದೇ ಕ್ರೀಡಾಂಗಣದಲ್ಲಿ ಚೆಟ್ರಿ ಅವರು ಎರಡು ದಶಕಗಳ ಹಿಂದೆ ಮೋಹನ್ ಬಾಗನ್ ಪರ ವೃತ್ತಿಪರ ಫುಟ್‌ಬಾಲ್‌ ಜೀವನದ ಆರಂಭ ಮಾಡಿದ್ದರು.

ಗುರುವಾರದ ಪಂದ್ಯ ಗೆದ್ದಲ್ಲಿ ಮೊತ್ತಮೊದಲ ಬಾರಿ ಅರ್ಹತಾ ಸುತ್ತಿನ ಅಂತಿಮ 18ರ ತಂಡಗಳಲ್ಲಿ ಸ್ಥಾನ ಪಡೆಯುವ ಅವಕಾಶ ಭಾರತಕ್ಕೆ ಇದೆ. ತಲಾ ನಾಲ್ಕು ತಂಡಗಳು ಇರುವ 9 ಗುಂಪುಗಳಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮೂರನೇ ಹಂತಕ್ಕೆ ಅರ್ಹತೆ ಪಡೆಯಲಿವೆ. ಈ ಹಂತದಲ್ಲಿ ಏಷ್ಯಾಕ್ಕೆ ಫೀಫಾ ಹೆಚ್ಚುವರಿಯಾಗಿ ನಿಗದಿಗೊಳಿಸಿರುವ ಎಂಟು ಸ್ಥಾನಗಳ ನಿರ್ಧಾರವಾಗಲಿದೆ. ಕುವೈತ್‌ ವಿರುದ್ಧ ಗೆಲುವು ಇಂಥ ಚಾರಿತ್ರಿಕ ಸಾಧನೆಗೆ ದಾರಿ ಮಾಡಿಕೊಡಲಿದೆ. ಏಷ್ಯಾದ ಅಗ್ರ ತಂಡಗಳ ಜೊತೆ ಸೆಣಸಾಡುವ ಅವಕಾಶ ಭಾರತಕ್ಕೆ ಒದಗಲಿದೆ.

ಮುಂದಿನ ವಿಶ್ವಕಪ್ ಪಂದ್ಯಾವಳಿ 2026ರಲ್ಲಿ ಅಮೆರಿಕ, ಕೆನಡ, ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ ನಿಗದಿಯಾಗಿದೆ.

ಭಾರತ ಅರ್ಹತಾ ಸುತ್ತಿನ ‘ಎ’ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಕತಾರ್‌ (12 ಪಾಯಿಂಟ್‌) ಅಗ್ರಸ್ಥಾನದಲ್ಲಿದ್ದು, ಭಾರತ ನಾಲ್ಕು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನದಲ್ಲಿದೆ. ಅಫ್ಗಾನಿಸ್ಥಾನವೂ ಇಷ್ಟೇ ಅಂಕ ಗಳಿಸಿದೆ. ಕುವೈತ್‌ ಈಗ ಕೊನೆಯ ಸ್ಥಾನದಲ್ಲಿದ್ದು ಮೂರು ಪಾಯಿಂಟ್ಸ್‌ ಹೊಂದಿದೆ. ಆದರೆ ಭಾರತದ ಗೋಲು ವ್ಯತ್ಯಾಸ ಅಫ್ಗಾನಿಸ್ತಾನಕ್ಕಿಂತ ಸಾಕಷ್ಟು ಉತ್ತಮವಾಗಿದೆ.

ಗೆದ್ದಲ್ಲಿ ಭಾರತ ಅಫ್ಗಾನಿಸ್ತಾನಕ್ಕಿಂತ ಸಾಕಷ್ಟು ಮುಂದೆ ಹೋಗಲಿದೆ. ಅಫ್ಗಾನಿಸ್ತಾನ ಗುರುವಾರ ತನ್ನ ಕೊನೆಯ ಪಂದ್ಯದಲ್ಲಿ ಪ್ರಬಲ ಕತಾರ್ ವಿರುದ್ಧ ಆಡಬೇಕಾಗಿದೆ.

19 ವರ್ಷಗಳ ದೀರ್ಘ ಅವಧಿಯಲ್ಲಿ ಚೆಟ್ರಿ ಅವರು ಭಾರತ ತಂಡದ ಪರ 150 ಪಂದ್ಯಗಳನ್ನು ಆಡಿದ್ದು 94 ಗೋಲುಗಳನ್ನು ಹೊಡೆದಿದ್ದಾರೆ. ಚೆಟ್ರಿ ಅವರ ಕೊನೆಯ ಪಂದ್ಯ ನೋಡಲು ಪ್ರೇಕ್ಷಕರೂ ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.

ಐಲೀಗ್‌ನಲ್ಲಿ ಮಿಂಚಿದ ಫಾರ್ವರ್ಡ್‌ಗಳಾದ ಎಡ್ಮಂಡ್‌ ಲಾಲ್ರಿಂಡಿಕಾ ಮತ್ತು ಡೇವಿಡ್‌ ಲಲ್ಹನ್ಸಂಘ ಅವರು ಐದು ವರ್ಷಗಳಲ್ಲಿ ಮೊದಲ ಪದಾರ್ಪಣೆಗೆ ಸಜ್ಜಾಗಿದ್ದಾರೆ. ಗಾಯಾಳಾಗಿರುವ ಅನುಭವಿ ಆಟಗಾರ ಸಂದೇಶ್ ಜಿಂಗಾನ್ ಅನುಪಸ್ಥಿತಿಯಲ್ಲಿ ರಕ್ಷಣಾ ವಿಭಾಗವು ಕಾರ್ಯನಿರ್ವಹಣೆ ಮಾಡಬೇಕಾಗಿದೆ. ಸಂದೇಶ್‌ ಜನವರಿಯಿಂದೀಚೆ ಆಡಿಲ್ಲ.

ಕುವೈತ್ ತನ್ನ ಹಿಂದಿನ ಪಂದ್ಯದಲ್ಲಿ 4–0 ಗೋಲುಗಳಿಂದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿ ಉತ್ಸಾಹದಿಂದ ಇದೆ. ಹಸನ್ ಅಲ್‌ ಎನೇಝಿ ಅವರು ಆ ತಂಡದ ರಕ್ಷಣಾ ವಿಭಾಗದ ಶಕ್ತಿ. ಮೊಹ್ಸೆನ್ ಘರೀಬ್ ಅವರೂ ಉತ್ತಮ ಆಟಗಾರ.

ಪಂದ್ಯ ಆರಂಭ: ರಾತ್ರಿ 7.00‌

‘ಆಟದ ಕಡೆಗಷ್ಟೇ ಗಮನಹರಿಸಬೇಕಿದೆ’

ಕೋಲ್ಕತ್ತ (ಪಿಟಿಐ): ‘ಇದು ನನ್ನ ಕೊನೆಯ ಪಂದ್ಯದ ಮಾತಲ್ಲ. ಪದೇ ಪದೇ ಈ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ನಾವು ಈ ಪಂದ್ಯ ಗೆಲ್ಲಲೇಬೇಕಿದೆ. ಅದು ಅಷ್ಟು ಸುಲಭದ ಮಾತಲ್ಲ. ಆದರೆ ನಾವಂತೂ ಸಜ್ಜಾಗಿದ್ದೇವೆ. ನಮಗೆ ಭಾರಿ ಬೆಂಬಲ ಸಿಗಲಿದೆ’ ಎಂದು ವಿದಾಯದ ಪಂದ್ಯ ಆಡಲಿರುವ ದಿಗ್ಗಜ ಆಟಗಾರ ಸುನಿಲ್‌ ಚೆಟ್ರಿ ಬುಧವಾರ ಇಲ್ಲಿ ಹೇಳಿದರು.

ಕುವೈತ್ ವಿರುದ್ಧ ಗುರುವಾರ ನಡೆಯಲಿರುವ ಎರಡನೇ ಸುತ್ತಿನ ಪಂದ್ಯಕ್ಕೆ ಪೂರ್ವಭಾವಿಯಾಗಿ ಮಾತನಾಡಿದರು. ಈ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ ಚೆಟ್ರಿ ಅವರಿಗೆ ಅಂತಿಮ ಅಂತರರಾಷ್ಟ್ರೀಯ ಪಂದ್ಯವಾಗಿರುವ ಕಾರಣ ಸಾಕಷ್ಟು ಪ್ರಚಾರ ಪಡೆದಿದೆ. 

‘ನಾವು ನಾಳಿನ ಪಂದ್ಯ ಗೆದ್ದರೆ, ಮೂರನೇ ಸುತ್ತಿಗೆ ಅರ್ಹತೆ ಪಡೆಯುತ್ತೇವೆ. ಮುಂದೆ ದೇಶದಲ್ಲಿ ಮತ್ತು ಹೊರಗೆ ಐದು ಉತ್ತಮ ತಂಡಗಳ ವಿರುದ್ಧ ಆಡಬೇಕಾಗುತ್ತದೆ. ಅದಕ್ಕೆ ಒಳ್ಳೆಯ ಸೂಟುಗಳನ್ನು ಧರಿಸಿ, ತಂಡ ಪ್ರಯಾಣಿಸುವ ಕಡೆಗೆಲ್ಲಾ ಹೋಗಿ ಖುದ್ದಾಗಿ ಪಂದ್ಯಗಳನ್ನು ನೋಡುತ್ತೇನೆ’ ಎಂದು ಹೇಳಿದರು.

‘ಪ್ರತಿ ದಿನ ನಾನು ಈ ಹುಡುಗರ ಜೊತೆ ಮಾತನಾಡುತ್ತೇನೆ. ಅವರಿಗೆ ಈ ಕನಸಿನ ಬಗ್ಗೆ ಹೇಳುತ್ತಿರುತ್ತೇನೆ. ದೀರ್ಘ ಶಿಬಿರಗಳು ತಂಡಕ್ಕೆ ನೆರವಾಗುತ್ತವೆ. ನಾವೆಲ್ಲರೂ ಬೇರೆ ಬೇರೆ ಮನಃಸ್ಥಿತಿಯವರು. ಕಾರ್ಯಯೋಜನೆ ರೂಪಿಸಲೂ ಇದು ಸಾಕಷ್ಟು ಸಮಯ ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎದುರಾಳಿಗಳ ಬಗ್ಗೆ ಮಾತನಾಡಿದ ಕೋಚ್‌ ಇಗೊರ್ ಸ್ಟಿಮಾಚ್ ಅವರು ‘ಅವರ ಆಟಗಾರರ ಕಡೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅವರು ಪ್ರಮುಖ ಮುಂಚೂಣಿ ಆಟಗಾರನ ಅನುಪಸ್ಥಿತಿಯಲ್ಲಿ ಆಡುತ್ತಿದ್ದಾರೆ. ನಾವು ಕೂಡ ಸಂದೇಶ್ (ಜಿಂಗಾನ್‌) ಅವರಿಲ್ಲದೇ ಕಣಕ್ಕಿಳಿಯುತ್ತಿದ್ದೇವೆ. ಕತಾರ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಎದುರಾಳಿ ತಂಡ ಆಡಿದ ಆಟದಿಂದ ಪ್ರಭಾವಿತನಾಗಿದ್ದೇನೆ. ಅವರು ಆಟದ ಮಟ್ಟ ಎತ್ತರಿಸಿದರು’ ಎಂದು ಹೇಳಿದರು.

‘ಆದರೆ ನಾವು ನಡೆಸಿದ ತಯಾರಿಯ ಬಗ್ಗೆ ಸಮಾಧಾನವಿದೆ. ಇದು ಫುಟ್‌ಬಾಲ್‌ ಆಟವಷ್ಟೇ. ಇದನ್ನು ಆಸ್ವಾದಿಸಬೇಕು. ಫಲಿತಾಂಶ ದೇವರ ಕೈಲಿದೆ’ ಎಂದು ಸ್ಟಿಮಾಚ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT