ಭಾನುವಾರ, ಜುಲೈ 25, 2021
22 °C

ರೊನಾಲ್ಡೊ ಗೋಲು‌‌: ಯುವೆಂಟಸ್ ಜಯಭೇರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ರೋಮ್‌: ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಣ್ಮನ ಸೆಳೆದ ರಾಕೆಟ್‌ ವೇಗದ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಜೆನೊವಾ ತಂಡದ ಎದುರು 3–1ರಿಂದ ಜಯಿಸಿತು.

ಈ ಗೆಲುವಿನೊಂದಿಗೆ ಸೀರಿ ‘ಎ’ ಫುಟ್‌ಬಾಲ್‌ ಟ್ರೋಫಿಯನ್ನು ದಾಖಲೆಯ ಒಂಬತ್ತನೇ ಬಾರಿ ತನ್ನದಾಗಿಸಿಕೊಳ್ಳುವ ಯುವೆಂಟಸ್‌ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಕ್ಕಿತು. ಸದ್ಯ ಯುವೆಂಟಸ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಾಜಿಯೊ ತಂಡಕ್ಕಿಂತ ನಾಲ್ಕು ಪಾಯಿಂಟ್ಸ್‌ ಮುಂದಿದೆ. ಮಂಗಳವಾರ ಬೆಳಿಗ್ಗೆ ಲಾಜಿಯೊ ತಂಡವು ಟೊರಿನೊ ತಂಡವನ್ನು 2–1ರಿಂದ ಸೋಲಿಸಿತ್ತು.

ಪಂದ್ಯದ 50ನೇ ನಿಮಿಷದಲ್ಲಿ ಯುವೆಂಟಸ್‌ ತಂಡವು ಪಾಲೊ ಡಿಬಾಲ ಮೂಲಕ ಗೋಲಿನ ಖಾತೆ ತೆರೆಯಿತು. ಮೂವರು ಎದುರಾಳಿ ಡಿಫೆಂಡರ್‌ಗಳನ್ನು ವಂಚಿಸಿದ ಅವರು ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಏಳು ನಿಮಿಷದ ಬಳಿಕ ರೊನಾಲ್ಡೊ ಮೋಡಿ ಮಾಡಿದರು. 22 ಯಾರ್ಡ್‌ನಿಂದ ಅವರು ಜೋರಾಗಿ ಒದ್ದ ಚೆಂಡನ್ನು ಗೋಲ್‌ಕೀಪರ್‌ ಮೆಟ್ಟಿಯಾ ಪೆರಿನ್‌ ಅವರಿಗೆ ತಡೆಯಲು ಸಾಧ್ಯವಾಗಲಿಲ್ಲ.

ಹೋದ ಎರಡು ಪಂದ್ಯಗಳಲ್ಲಿ ಪೆನಾಲ್ಟಿ ಅವಕಾಶದಲ್ಲಿ ಮಾತ್ರ ಗೋಲು ದಾಖಲಿಸಿದ್ದ ರೊನಾಲ್ಡೊ ಅವರಿಗೆ ಈ ಪಂದ್ಯದಲ್ಲಿ ಫೀಲ್ಡ್‌ ಗೋಲು ಹೊಡೆಯಲು ಸಾಧ್ಯವಾಯಿತು. ಈ ಋತುವಿನ ಸೀರಿ ‘ಎ’ ಲೀಗ್‌ನಲ್ಲಿ ಅವರ 25ನೇ ಗೋಲು ಇದು.

ಬದಲಿ ಆಟಗಾರ ಡಗ್ಲಾಸ್‌ ಕೋಸ್ಟಾ ಅವರು ಯುವೆಂಟಸ್‌ ಪರ 73ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಜೆನೊವಾ ಪರ ಆ್ಯಂಡ್ರಿಯಾ ಪಿನಾಮೊಂಟಿ ಗೋಲು (76ನೇ ನಿಮಿಷ) ದಾಖಲಿಸಿ ತಂಡದ ಸೋಲಿನ ಅಂತರ ತಗ್ಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು