ಶನಿವಾರ, ಜುಲೈ 24, 2021
22 °C

ಎಫ್‌ಎ ಕಪ್ ಫುಟ್‌ಬಾಲ್‌: ಫೈನಲ್‌ನಲ್ಲಿ ಆರ್ಸೆನಲ್‌ಗೆ ಚೆಲ್ಸಿ ಎದುರಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ವೆಂಬ್ಲಿ ಕ್ರೀಡಾಂಗಣದಲ್ಲಿ ಎದುರಾಳಿಗಳಿಗೆ ಮೂರು ಗೋಲುಗಳನ್ನು ಬಿಟ್ಟುಕೊಟ್ಟ ಡೇವಿಡ್ ಡೀ ಗೀ ಅವರು ಮ್ಯಾಂಚೆಸ್ಟರ್ ಯುನೈಟೆಡ್‌ನ ಕನಸನ್ನು ನುಚ್ಚುನೂರು ಮಾಡಿದರು. ಎಫ್‌ಎ ಕಪ್ ಫೈನಲ್ ಪ್ರವೇಶದ ಆಸೆಯೊಂದಿಗೆ ಭಾನುವಾರ ರಾತ್ರಿ ಕಣಕ್ಕೆ ಇಳಿದ ಮ್ಯಾಂಚೆಸ್ಟರ್‌ ತಂಡವನ್ನು ಚೆಲ್ಸಿ 3–1ಗೋಲುಗಳಿಂದ ಮಣಿಸಿತು. ಆಗಸ್ಟ್ ಒಂದರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಆರ್ಸೆನಲ್ ವಿರುದ್ಧ ಸೆಣಸಲು ಸಜ್ಜಾಯಿತು.

ಸ್ಪೇನ್‌ನ ಡೇವಿಡ್ ಡೀ ಗೀ ಈ ಆವೃತ್ತಿಯಲ್ಲಿ ಸತತ ತಪ್ಪುಗಳನ್ನು ಎಸಗುತ್ತ ಬಂದಿದ್ದಾರೆ. ಭಾನುವಾರ ರಾತ್ರಿ ನಿರ್ಣಾಯಕ ಪಂದ್ಯದಲ್ಲೂ ಲೋಪಗಳು ಮುಂದುವರಿದವು. ಹ್ಯಾರಿ ಮಗ್ಯರ್‌ ಕೊನೆಯ ಹಂತದಲ್ಲಿ ಉಡುಗೊರೆ ಗೋಲು ನೀಡಿ ಎದುರಾಳಿಗಳಲ್ಲಿ ’ಸಂಭ್ರಮ‘ ಉಕ್ಕುವಂತೆ ಮಾಡಿದರು.

ಒಲಿವಿಯರ್ ಗಿರೌಂಡ್ (45ನೇ ನಿಮಿಷ) ಹಾಗೂ ಮ್ಯಾಸನ್ ಮೌಂಟ್ (46ನೇ ನಿಮಿಷ) ಗಳಿಸಿದ ಗೋಲಿನೊಂದಿಗೆ 2–0 ಮುನ್ನಡೆ ಗಳಿಸಿದ್ದ ಚೆಲ್ಸಿ ತಂಡ 74ನೇ ನಿಮಿಷದಲ್ಲಿ ಹ್ಯಾರಿ ಮಗ್ಯರ್‌ ಅವರ ಗೊಲಿನೊಂದಿಗೆ ಮತ್ತಷ್ಟು ಖುಷಿಪಟ್ಟಿತು. 85ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿಮುಟ್ಟಿಸಿದ ಬ್ರೂನೊ ಫರ್ನಾಂಡಸ್, ಮ್ಯಾಂಚೆಸ್ಟರ್ ಸಿಟಿಯ ಸೋಲಿನ ಅಂತರ ಕಡಿಮೆ ಮಾಡಿದರು. ಇತ್ತೀಚಿನ 20 ಪಂದ್ಯಗಳಲ್ಲಿ ಯುನೈಟೆಡ್‌ನ ಮೊದಲ ಸೋಲು ಇದಾಗಿದೆ. 2018ರ ನಂತರ ಎಫ್‌ಎ ಕಪ್‌ನಲ್ಲಿ ಚೆಲ್ಸಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ.

ಈ ಋತುವಿನ ವಿವಿಧ ಟೂರ್ನಿಗಳಲ್ಲಿ ಚೆಲ್ಸಿಯನ್ನು ಯುನೈಟೆಡ್ ತಂಡ ಮೂರು ಬಾರಿ ಮಣಿಸಿದೆ. ಹೀಗಾಗಿ ಭರವಸೆಯಲ್ಲೇ ಕಣಕ್ಕೆ ಇಳಿದಿತ್ತು. ಪೌಲ್ ಪೊಗ್ಬಾ ಮತ್ತು ಆ್ಯಂಟನಿ ಮಾರ್ಷಲ್‌ಗೆ ವಿಶ್ರಾಂತಿ ನೀಡಿದ ಯುನೈಟೆಡ್ ರಕ್ಷಣಾ ವಿಭಾಗದಲ್ಲಿ ಮೂವರಿಗೆ ಅವಕಾಶ ನೀಡಿತ್ತು. ಆದರೆ ಚೆಲ್ಸಿಯ ಆಕ್ರಮಣವನ್ನು ತಡೆಯಲು ಈ ತಂತ್ರ ಸಾಲಲಿಲ್ಲ. ಮೊದಲಾರ್ಧದ ಕೊನೆಯಲ್ಲಿ ಟೂರ್ನಿಯಲ್ಲಿ ವೈಯಕ್ತಿಕ ನಾಲ್ಕನೇ ಗೋಲು ಗಳಿಸಿದ ಗಿರೌಡ್ ಅವರು ಚೆಲ್ಸಿಗೆ ಮುನ್ನಡೆ ಗಳಿಸಿಕೊಟ್ಟರು. ಅಜ್ಪಿಲಿಕ್ವೆಟಾಸ್ ಅವರ ನಿಖರ ಕ್ರಾಸ್ ಈ ಗೋಲಿಗೆ ನೆರವಾಯಿತು.

ವಿರಾಮದ ನಂತರ ಪ್ರಬಲ ಆಕ್ರಮಣಕ್ಕೆ ಯುನೈಟೆಡ್ ಕಕ್ಕಾಬಿಕ್ಕಿಯಾಯಿತು. ಮಿಡ್‌ಫೀಲ್ಡ್‌ನಲ್ಲಿ ಬ್ರೆಂಡನ್ ವಿಲಿಯಮ್ಸ್ ಎಸಗಿದ ತಪ್ಪು ಮ್ಯಾಸನ್ ಮೌಂಟ್‌ಗೆ ಉತ್ತಮ ಅವಕಾಶ ಒದಗಿಸಿತು. ಅವರು ಚೆಂಡನ್ನು ಸೊಗಸಾಗಿ ಡ್ರಿಬಲ್ ಮಾಡಿ ಸೂಕ್ತ ಸಮಯದಲ್ಲಿ ಗುರಿಯತ್ತ ಒದ್ದರು. ಈ ಚೆಂಡನ್ನು ತಡೆಯಲು ಡೀ ಗೀಗೆ ಸಾಕಷ್ಟು ಅವಕಾಶವಿದ್ದರೂ ವೈಫಲ್ಯ ಅನುಭವಿಸಿದರು.

ಮ್ಯಾಂಚೆಸ್ಟರ್ ಸಿಟಿಗೆ ಸೋಲುಣಿಸಿದ ಆರ್ಸೆನಲ್

ಶನಿವಾರ ರಾತ್ರಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡವನ್ನು 2–0ಯಿಂದ ಆರ್ಸೆನಲ್ ಸೋಲಿಸಿತ್ತು. ಪೀರಿ ಎಮೆರಿಕ್ ಔಬಮೆಯಾಂಗ್ ಮೊದಲಾರ್ಧದ ಆರಂಭದಲ್ಲೂ ದ್ವಿತೀಯಾರ್ಧದ ಕೊನೆಯಲ್ಲೂ ಗಳಿಸಿದ ಎರಡು ಮೋಹಕ ಗೋಲುಗಳ ಆರ್ಸೆನಲ್‌ಗೆ ನೆರವಾದವು.

ಪ್ರೀಮಿಯರ್ ಲೀಗ್ ಚಾಂಪಿಯನ್‌ ಲಿವರ್‌ಪೂಲ್ ತಂಡವನ್ನು ಕೆಲವು ದಿನಗಳ ಹಿಂದೆ ಮಣಿಸಿದ್ದ ಆರ್ಸೆನಲ್ ಈ ಹಿಂದಿನ ಏಳು ಪಂದ್ಯಗಳಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡಕ್ಕೆ ಮಣಿದಿತ್ತು. ದೇಶಿ ಟೂರ್ನಿಯ ಕಳೆದ 22 ಪಂದ್ಯಗಳಲ್ಲಿ ಸೋಲರಿಯದೇ ಮುನ್ನುಗ್ಗಿದ್ದ ಮ್ಯಾಂಚೆಸ್ಟರ್ ಸಿಟಿ ಇಲ್ಲಿ ಮುಗ್ಗರಿಸಿತು.

19ನೇ ನಿಮಿಷದಲ್ಲಿ ಔಬಮೆಯಾಂಗ್ ಮೊದಲ ಗೋಲು ಗಳಿಸಿದರು. 71ನೇ ನಿಮಿಷದಲ್ಲಿ ಅವರು ಮತ್ತೊಂದು ಆಘಾತ ನೀಡಿದರು. ಎದುರಾಳಿ ತಂಡದ ಆಕ್ರಮಣ ವಿಭಾಗದವರು ಸ್ವಲ್ಪ ಹಿನ್ನಡೆ ಅನುಭವಿಸಿದ್ದನ್ನು ಗಮನಿಸಿದ ಔಬಮೆಯಾಂಗ್ ಅವರು ಕೀರನ್ ಟೆರ್ನಿ ಅವರ ನಿಖರ ಪಾಸ್‌ನಿಂದ ಚೆಂಡನ್ನು ಗುರಿ ಮುಟ್ಟಿಸಿದರು. ಕೋಚ್‌ ಆರ್ಟೆರಾ, ಆರು 2014 ಮತ್ತು 2017ರಲ್ಲಿ ಆರ್ಸೆನಲ್ ತಂಡ ಎಫ್‌ಎ ಕಪ್ ಗೆದ್ದಾಗ ನಾಯಕರಾಗಿದ್ದರು. ಈಗ ಕೋಚ್ ಆಗಿ ತಂಡದ ಮತ್ತೊಂದು ಪ್ರಶಸ್ತಿ ಕನಸು ನನಸಾಗಿಸುವ ಭರವಸೆಯಲ್ಲಿದ್ದಾರೆ.

’ಅತ್ಯುತ್ತಮ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸುವುದು ಸುಲಭದ ಮಾತಲ್ಲ. ಅವಕಾಶಗಳನ್ನು ಸೃಷ್ಟಿಸಲು ಮತ್ತು ಸಿಕ್ಕಿದ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ನಿಖರ ಯೋಜನೆಗಳು ಬೇಕಾಗುತ್ತವೆ. ಎದುರಾಳಿಗಳ ಆಕ್ರಮಣವನ್ನು ತಡೆಯುವಾಗಲೂ ತುಂಬ ಎಚ್ಚರಿಕೆಯಿಂದ ಇರಬೇಕು. ಈ ಪಂದ್ಯದಲ್ಲಿ ನಮ್ಮ ಆಟಗಾರರು ಇಂಥ ಯೋಜನೆಗಳನ್ನೆಲ್ಲ ನಿಖರವಾಗಿ ಜಾರಿಗೆ ತಂದರು. ಆಟಗಾರರು ಇಲ್ಲಿ ತೋರಿದ ಸಾಮರ್ಥ್ಯ ನನಗೆ ತುಂಬ ಖುಷಿ ನೀಡಿದೆ‘ ಎಂದು ಆರ್ಟೆರಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು