ಶನಿವಾರ, ಏಪ್ರಿಲ್ 1, 2023
23 °C
ರೋಮ್‌ನಲ್ಲಿ ಕೋವಿಡ್ ನಿರ್ಬಂಧ

ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಇಂಗ್ಲೆಂಡ್‌ಗೆ ಉಕ್ರೇನ್ ‘ಗೋಡೆ’ ಸವಾಲು

ಎಪಿ Updated:

ಅಕ್ಷರ ಗಾತ್ರ : | |

Prajavani

ರೋಮ್: ಬಲಿಷ್ಠ ಜರ್ಮನಿಯನ್ನು ಮಣಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ತಂಡ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಹಂತಕ್ಕೇರುವ ಕನಸಿನೊಂದಿಗೆ ಶನಿವಾರ ಕಣಕ್ಕೆ ಇಳಿಯಲಿದೆ. ಸ್ಟೇಡಿಯೊ ಒಲಿಂಪಿಕೊ ಕ್ರೀಡಾಂಗಣದಲ್ಲಿ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಹ್ಯಾರಿ ಕೇನ್ ಬಳಗ ಉಕ್ರೇನ್ ವಿರುದ್ಧ ಸೆಣಸಲಿದೆ.

ಲಂಡನ್‌ನಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ಇಂಗ್ಲೆಂಡ್ ಏಕಪಕ್ಷೀಯ ಎರಡು ಗೋಲುಗಳಿಂದ ಜರ್ಮನಿಯನ್ನು ಸೋಲಿಸಿತ್ತು. ಇದರಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲಾಗಿದೆ. ತವರಿನಾಚೆ ಈ ಬಾರಿ ಇಂಗ್ಲೆಂಡ್ ಆಡುವ ಮೊದಲ ಪಂದ್ಯ ಇದಾಗಿರುವುದರಿಂದ ಸ್ವಲ್ಪ ಆತಂಕ ಕಾಡುವ ಸಾಧ್ಯತೆಯನ್ನೂ ನಿರಾಕರಿಸುವಂತಿಲ್ಲ. ಈ ವರೆಗೆ ತಂಡದ ಎಲ್ಲ ಪಂದ್ಯಗಳಿಗೂ ವೆಂಬ್ಲಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. 

ರೋಮ್‌ನಲ್ಲಿ ಕೋವಿಡ್‌ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ನಿರ್ಬಂಧಗಳನ್ನು ಹೇರಲಾಗಿದೆ. ಇಂಗ್ಲೆಂಡ್‌ನ ಫುಟ್‌ಬಾಲ್ ಪ್ರಿಯರು ಕ್ರೀಡಾಂಗಣ ಪ್ರವೇಶಿಸಬೇಕಾದರೆ ಐದು ದಿನ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿರಬೇಕು ಎಂದು ಇಟಲಿ ಸರ್ಕಾರ ಸೂಚಿಸಿದೆ. ಹೀಗಾಗಿ ‘ತವರಿನ’ ಪ್ರೇಕ್ಷಕರ ಬೆಂಬಲವೂ ಇಂಗ್ಲೆಂಡ್ ತಂಡಕ್ಕೆ ಇಲ್ಲದಂತಾಗಲಿದೆ. 

‘ಈ ವರೆಗೆ ಅಭಿಮಾನಿಗಳಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ. ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ತಂಡದ ಬೆಂಬಲಿಗರು ಎಷ್ಟು ಮಂದಿ ಬರುತ್ತಾರೆಂದು ಗೊತ್ತಿಲ್ಲ. ಆದರೂ ನಮಗೆ ಅನುಕೂಲ ಆಗುವಂತೆ ನಾವೇ ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅದು ಫಲ ನೀಡುವ ನಿರೀಕ್ಷೆ ಇದೆ’ ಎಂದು ಇಂಗ್ಲೆಂಡ್ ಗೋಲ್‌ಕೀಪರ್ ಜೋರ್ಡಾನ್ ಪಿಕ್‌ಫಾರ್ಡ್ ಅಭಿಪ್ರಾಯಪಟ್ಟರು. ಅವರು ಈ ವರೆಗೆ ಟೂರ್ನಿಯಲ್ಲಿ ನಾಲ್ಕು ಕ್ಲೀನ್ ಶೀಟ್‌ ಹೊಂದಿದ್ದಾರೆ.

ಉಕ್ರೇನ್‌ಗೆ ‘ತವರಿನ’ ವಾತಾವರಣ
ಉಕ್ರೇನ್‌ಗೆ ಇಟಲಿ ತವರಿನ ವಾತಾವರಣ ಸೃಷ್ಟಿಸಲಿದೆ. ಮುಖ್ಯ ಕೋಚ್ ಆ್ಯಂಡ್ರಿ ಶೆವ್‌ಚೆಂಕೊ ಇಲ್ಲಿ ಸೀರಿ ‘ಎ’ ಟೂರ್ನಿಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಎಸಿ ಮಿಲನ್ ತಂಡಕ್ಕಾಗಿ ಹೆಚ್ಚು ಗೋಲು ಗಳಿಸುತ್ತಿದ್ದ ಆಟಗಾರ ಆಗಿದ್ದರು. ಸಹಾಯಕ ಕೋಚ್‌ ಮೌರೊ ಟಸೊಟ್ಟಿ ರೋಮ್‌ನವರೇ ಆಗಿದ್ದು ವೃತ್ತಿಜೀವನದ ಆರಂಭದಲ್ಲಿ ಸ್ಟೇಡಿಯೊ ಒಲಿಂಪಿಕೊದಲ್ಲೇ ಆಡುತ್ತಿದ್ದರು.

ಲಾಕ್ ಡೌನ್ ಡಿಫೆನ್ಸ್‌ ಎಂದೇ ಬಣ್ಣಿಸಲಾಗುವ ಅತ್ಯುತ್ಕೃಷ್ಟ ರಕ್ಷಣಾತ್ಮಕ ಆಟಕ್ಕೆ ಹೆಸರಾಗಿರುವ ಉಕ್ರೇನ್ ಪ್ರತಿ ದಾಳಿ ನಡೆಸುವುದರಲ್ಲೂ ಸಮರ್ಥ ತಂಡವಾಗಿದೆ. ಹೀಗಾಗಿ ಸ್ಟ್ರೈಕರ್‌ಗಳಾದ್ ರಹೀಮ್ ಸ್ಟರ್ಲಿಂಗ್ ಮತ್ತು ಹ್ಯಾರಿ ಕೇನ್ ಅವರಿಗೆ ಈ ಪಂದ್ಯ ಸವಾಲಿನದ್ದಾಗಲಿದೆ. ಉಕ್ರೇನ್‌ ತಂಡ ಫಾರ್ವರ್ಡ್ ಆಟಗಾರ ಆ್ಯಂಡ್ರಿ ಯರ್ಮಲೆಂಕೊ ಮತ್ತು ಅಲೆಕ್ಸಾಂಡರ್ ಜಿಂಚೆಂಕೊ ಮೇಲೆ ಭರವಸೆ ಇರಿಸಿಕೊಂಡಿದೆ.

ಇಂದಿನ ಪಂದ್ಯಗಳು

ಡೆನ್ಮಾರ್ಕ್‌–ಜೆಕ್ ಗಣರಾಜ್ಯ

ಸ್ಥಳ: ಒಲಿಂಪಿಕ್ ಕ್ರೀಡಾಂಗಣ, ಬಾಕು

ಆರಂಭ: ರಾತ್ರಿ 9.30

ಇಂಗ್ಲೆಂಡ್‌–ಉಕ್ರೇನ್‌

ಸ್ಥಳ: ಸ್ಟೇಡಿಯೊ ಒಲಿಂಪಿಕೊ, ರೋಮ್

ಆರಂಭ: ರಾತ್ರಿ 12.30

ನೇರ ಪ್ರಸಾರ: ಸೋನಿ ಸಿಕ್ಸ್‌

(ಸಮಯ:ಭಾರತೀಯ ಕಾಲಮಾನ)

ಮುಖಾಮುಖಿ ಫಲಿತಾಂಶ

ಪಂದ್ಯಗಳು: 7

ಇಂಗ್ಲೆಂಡ್ ಜಯ: 4

ಉಕ್ರೇನ್ ಗೆಲುವು: 1

ಡ್ರಾ: 2

ಹಿಂದಿನ 5 ಪಂದ್ಯಗಳಲ್ಲಿ ಸಾಧನೆ

ಇಂಗ್ಲೆಂಡ್‌: 4 ಜಯ; 1 ಡ್ರಾ

ಉಕ್ರೇನ್‌: 3 ಜಯ; 2 ಸೋಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು