ಭಾನುವಾರ, ಜೂನ್ 26, 2022
21 °C

ವಿಶ್ವಕಪ್ ಅರ್ಹತಾ ಟೂರ್ನಿ: ಕತಾರ್ ಎದುರಿನ ಸೋಲಿನಿಂದ ನಿರಾಸೆಯಾಗಿದೆ -ಗುರುಪ್ರೀತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹಾ: ಬಲಿಷ್ಠ ಎದುರಾಳಿಗಳ ವಿರುದ್ಧ ಸೆಣಸುವಾಗ ನಮ್ಮ ಆಟಗಾರರು ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಭಾರತ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಹೇಳಿದ್ದಾರೆ.

ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡವು ಕತಾರ್ ಎದುರು 0–1ರಿಂದ ಸೋತಿತ್ತು. ಗುರುಪ್ರೀತ್ ಉತ್ತಮ ಸಾಮರ್ಥ್ಯ ತೋರಿದ್ದರೂ ತಂಡಕ್ಕೆ ನಿರಾಸೆ ಕಾಡಿತ್ತು.

2022ರ ವಿಶ್ವಕಪ್‌ ಹಾಗೂ 2023ರ ಏಷ್ಯಾಕಪ್ ಟೂರ್ನಿಗಳ ಜಂಟಿ ಅರ್ಹತೆಯಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ. ವಿಶ್ವಕಪ್‌ ಅರ್ಹತೆಯಿಂದ ಭಾರತ ಈಗಾಗಲೇ ಹೊರಬಿದ್ದಿದೆ. ಆದತೆ ಏಷ್ಯಾಕಪ್‌ ಟೂರ್ನಿಗೆ ಸ್ಥಾನ ಪಡೆಯಲು ಹೋರಾಟ ನಡೆಸುತ್ತಿದೆ.

ಅಬ್ದೆಲ್ ಅಜೀಜ್‌ 33ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಕತಾರ್ ಗೆಲುವು ಸಾಧಿಸಿತ್ತು. ರಾಹುಲ್ ಭೆಕೆ ಅವರು ಎರಡು ಬಾರಿ ಹಳದಿ ಕಾರ್ಡ್ ಪಡೆದು ಹೊರನಡೆದಿದ್ದರಿಂದ ಭಾರತ ತಂಡವು 10 ಆಟಗಾರರೊಂದಿಗೆ ಪಂದ್ಯ ಆಡಿತ್ತು. ಪಂದ್ಯ ಮುಕ್ತಾಯದವರೆಗೆ ಭಾರಿ ಹೋರಾಟ ನಡೆಸಿದ್ದ ತಂಡವು ದೊಡ್ಡ ಅಂತರದ ಸೋಲಿನಿಂದ ತಪ್ಪಿಸಿಕೊಂಡಿತ್ತು.

‘ಈ ಫಲಿತಾಂಶ ದುರದೃಷ್ಟಕರ. ಪ್ರತಿಯೊಬ್ಬರು ಉತ್ತಮ ಆಟವಾಡಿದರು. ಆದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ; ನಿರಾಸೆಯಾಗಿದೆ‘ ಎಂದು ಅಖಿಲ ಭಾರತ ಫುಟ್‌ಭಾಲ್ ಫೆಡರೇಷನ್‌ (ಎಐಎಫ್‌ಎಫ್‌) ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಗುರುಪ್ರೀತ್ ಹೇಳಿದ್ದಾರೆ.

ಗುರುಪ್ರೀತ್ ಈ ಪಂದ್ಯದಲ್ಲಿ ಎದುರಾಳಿಗಳು ನಡೆಸಿದ ಒಂಬತ್ತು ಪ್ರಯತ್ನಗಳನ್ನು ವಿಫಲಗೊಳಿಸಿದ್ದರು.

ಭಾರತ ತಂಡವು ಸೋಮವಾರ ಬಾಂಗ್ಲಾ ಎದುರು ಸೆಣಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು