ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ

ಹಾಲಿ ಚಾಂಪಿಯನ್‌ ತಂಡದ ಜಯಭೇರಿ; ಎಂಬಾಪೆ ಗೋಲು
Last Updated 23 ನವೆಂಬರ್ 2022, 6:00 IST
ಅಕ್ಷರ ಗಾತ್ರ

ಅಲ್ ವಕರಾ, ಕತಾರ್ (ಎಎಫ್‌ಪಿ): ಒಲಿವಿಯರ್ ಜಿರೊದ್ ಗಳಿಸಿದ ಎರಡು ಗೋಲುಗಳಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮಂಗಳವಾರ ತಡರಾತ್ರಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡವು 4–1ರಿಂದ ಆಸ್ಟ್ರೇಲಿಯಾ ಎದುರು ಜಯಿಸಿತು. 2018ರ ಚಾಂಪಿಯನ್ ಫ್ರಾನ್ಸ್ ತಂಡವು ಈ ಬಾರಿ ತನ್ನ ಮೊದಲ ಪಂದ್ಯದಲ್ಲಿಯೇ ಜಯಿಸಿದ್ದು ದಾಖಲೆಯಾಗಿದೆ. 2006ರಲ್ಲಿ ಬ್ರೆಜಿಲ್ ಈ ಸಾಧನೆ ಮಾಡಿತ್ತು. ಅದರ ನಂತರ ಬೇರೆ ಚಾಂಪಿಯನ್ ತಂಡಗಳು ಈ ದಾಖಲೆ ಮಾಡಿರಲಿಲ್ಲ.

ಅಲ್ ಜನಾಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಫ್ರಾನ್ಸ್‌ ಕಣಕ್ಕಿಳಿದಿತ್ತು. ಆದರೆ, 9ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಕ್ರೇಗ್ ಗುಡ್ವಿನ್ ಆಘಾತ ನೀಡಿದರು. ರೈಟ್‌ ವಿಂಗರ್ ಕ್ರೇಗ್ ಗೋಲ್‌ಪೋಸ್ಟ್ ಬಳಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಆಸ್ಟ್ರೇಲಿಯಾ ತಂಡದ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು. ಆದರೆ, ಈ ಸಂತಸ 16 ನಿಮಿಷಗಳ ಕಾಲ ಮಾತ್ರ ಇತ್ತು. ನಂತರ ಏನಿದ್ದರೂ ಫ್ರೆಂಚ್ ಪಡೆಯದ್ದೇ ಕಾರುಬಾರು.

27ನೇ ನಿಮಿಷದಲ್ಲಿ ಫ್ರಾನ್ಸ್‌ನ ಎಡ್ರಿನ್ ರಾಬಿಯೊಟ್ ಮಿಂಚಿನ ವೇಗದಲ್ಲಿ ಗಳಿಸಿದ ಗೋಲಿನಿಂದ ಸಮಬಲವಾಯಿತು. 32ನೇ ನಿಮಿಷದಲ್ಲಿ ಸ್ಟ್ರೈಕರ್ ಒಲಿವಿಯರ್ ತಮ್ಮ ಕಾಲ್ಚಳಕ ಮೆರೆದರು. ಇದರಿಂದಾಗಿ ಅರ್ಧವಿರಾಮಕ್ಕೆ ಫ್ರಾನ್ಸ್‌ 2–1ರ ಮುನ್ನಡೆ ಸಾಧಿಸಿತು.

ನಂತರದ ಅವಧಿಯಲ್ಲಿ ಆಸ್ಟ್ರೇಲಿಯಾದ ಸ್ಟ್ರೈಕರ್‌ಗಳ ಗೋಲು ಗಳಿಕೆಯ ಪ್ರಯತ್ನಕ್ಕೆ ಫ್ರೆಂಚ್ ರಕ್ಷಣಾ ಪಡೆ ಅವಕಾಶ ನೀಡಲಿಲ್ಲ.

ಇದರಿಂದಾಗಿ ಒತ್ತಡಕ್ಕೊಳಗಾದ ಆಸ್ಟ್ರೇಲಿಯಾಕ್ಕೆ ಫ್ರಾನ್ಸ್‌ನ ’ತಾರೆ‘ ಕೈಲಿಯನ್ ಎಂಬಾಪೆ ಮತ್ತೊಂದು ಪೆಟ್ಟು ಕೊಟ್ಟರು. 68ನೇ ನಿಮಿಷದಲ್ಲಿ ಅವರು ಗಳಿಸಿದ ಸುಂದರ ಗೋಲ್‌ನಿಂದಾಗಿ ಫ್ರಾನ್ಸ್‌ ಮಹತ್ವದ ಮುನ್ನಡೆ ಗಳಿಸಿತು. ಎರಡು ನಿಮಿಷಗಳ ನಂತರ ಮತ್ತೆ ಮಿಂಚಿದ ಒಲಿವಿಯರ್ ಗೋಲು ಗಳಿಸಿದರು.

ಈ ಹೋರಾಟದಲ್ಲಿ ಫ್ರಾನ್ಸ್ ತಂಡದ ಮ್ಯಾನೇಜರ್ ಡಿ. ದೆಸ್‌ಚಾಂಪ್ಸ್‌ ಮಾಡಿದ ಯೋಜನೆಯು ಫಲಪ್ರದವಾಯಿತು. ಫ್ರೆಂಚ್ ಆಟಗಾರರು ಚುಟುಕು ಪಾಸ್‌ಗಳಿಗೆ ಆದ್ಯತೆ ನೀಡಿದ್ದುಸಫಲವಾಯಿತು. ಫ್ರಾನ್ಸ್ ತಂಡವು ಒಟ್ಟು 723 ಪಾಸ್‌ಗಳನ್ನು ಮಾಡಿತು. ಅದರಲ್ಲಿ ಶೇ 89ರಷ್ಟು ಯಶಸ್ಸು ಸಾಧಿಸಿತು. ಆಸ್ಟ್ರೇಲಿಯಾ 443 ಪಾಸ್‌ಗಳನ್ನು ಮಾಡಿತು.

ಆಸ್ಟ್ರೇಲಿಯಾದ ಮೂವರು ಆಟಗಾರರು ಹಳದಿ ಕಾರ್ಡ್ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT