ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ ತಂಡಕ್ಕೆ ನಿರಾಸೆ: ಕ್ರಿಸ್ಟಿಯಾನೊ ರೊನಾಲ್ಡೊ ಕನಸು ಭಗ್ನ

Last Updated 10 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ದೋಹಾ (ಎಎಫ್‌ಪಿ/ ರಾಯಿಟರ್ಸ್‌): ವಿಶ್ವಕಪ್‌ ಫುಟ್‌ಬಾಲ್‌ ಟ್ರೋಫಿ ಎತ್ತಿಹಿಡಿಯಬೇಕೆಂಬ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ದೋಹಾದ ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಭಗ್ನಗೊಂಡಿತು.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಏಕೈಕ ಗೋಲಿನಿಂದ ಪೋರ್ಚುಗಲ್‌ ತಂಡವನ್ನು ಮಣಿಸಿದ ಮೊರೊಕ್ಕೊ, ಚಾರಿತ್ರಿಕ ಸಾಧನೆಯೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. 42ನೇ ನಿಮಿಷದಲ್ಲಿ ಗೋಲು ಗಳಿಸಿದ ಯೂಸೆಫ್‌ ಎನ್‌ ನೆಸ್ರಿ ಅವರು ಮೊರೊಕ್ಕೊ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ ಆಫ್ರಿಕಾ ಖಂಡದ ಹಾಗೂ ಅರಬ್‌ ನಾಡಿನ ಮೊದಲ ತಂಡ ಎಂಬ ಗೌರವ ಮೊರೊಕ್ಕೊಗೆ ಒಲಿಯಿತು. 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದು ಈ ತಂಡದ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿತ್ತು.

ಜಿದ್ದಾಜಿದ್ದಿನ ಸೆಣಸಾಟದ ಬಳಿಕ ಮೊದಲ ಅವಧಿ ಕೊನೆಗೊಳ್ಳಲು ಮೂರು ನಿಮಿಷಗಳು ಇರುವಾಗ ಮೊರೊಕ್ಕೊ ಮುನ್ನಡೆ ಗಳಿಸಿತು.

ಯಹ್ಯಾ ಅತಿಯತಲ್ಲಾ ಅವರ ಕ್ರಾಸ್‌ನಲ್ಲಿ ಬಂದ ಚೆಂಡನ್ನು ಹೆಡ್‌ ಮಾಡುವ ಮೂಲಕ ನೆಸ್ರಿ ಗುರಿ ಸೇರಿಸಿದರು. ಪೋರ್ಚುಗಲ್‌ ಗೋಲ್‌ ಕೀಪರ್‌ ಡಿಯಾಗೊ ಕೊಸ್ಟಾ ಅವರು ಚೆಂಡಿನ ಗತಿಯನ್ನು ಅಂದಾಜಿಸಲು ವಿಫಲರಾದದ್ದು ತಂಡಕ್ಕೆ ಮುಳುವಾಗಿ ಪರಿಣಮಿಸಿತು.

ಮೊದಲ ಇವೆಲೆನ್‌ನಲ್ಲಿ ಕಣಕ್ಕಿಳಿಯದ ರೊನಾಲ್ಡೊ 51ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಆಡಲಿಳಿದರು. ಆದರೆ ಗೋಲು ಗಳಿಸಲು ಅಥವಾ ಸಹ ಆಟಗಾರರ ಗೋಲಿಗೆ ನೆರವಾಗಲು ಅವರಿಗೆ ಸಾಧ್ಯವಾಗಲಿಲ್ಲ. ಪಂದ್ಯದ ಬಳಿಕ ನಿರಾಸೆಯೊಂದಿಗೆ ಅಂಗಳ ತೊರೆದರು.

ಎರಡನೇ ಅವಧಿಯಲ್ಲಿ ಆಟದ ವೇಗ ಹೆಚ್ಚಿಸಿದರೂ ಪೋರ್ಚುಗಲ್‌ ತಂಡಕ್ಕೆ ಎದುರಾಳಿ ‘ರಕ್ಷಣಾ ಗೋಡೆ’ಯನ್ನು ದಾಟಲು ಅಗಲಿಲ್ಲ. ಮೊದಲ ಆಯ್ಕೆಯ ಮೂವರು ಡಿಫೆಂಡರ್‌ಗಳು ಗಾಯದ ಕಾರಣ ಆಡಲಿಳಿಯದಿದ್ದರೂ, ಮೊರೊಕ್ಕೊ ತಂಡದವರು ಎದುರಾಳಿ ಸ್ಟ್ರೈಕರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಬೆಲ್ಜಿಯಂ ಮತ್ತು ಸ್ಪೇನ್‌ ತಂಡಗಳನ್ನು ಮಣಿಸಿದ್ದ ತಂಡ, ತನ್ನ ಅಚ್ಚರಿಯ ಓಟವನ್ನು ಇನ್ನೊಂದು ಪಂದ್ಯಕ್ಕೆ ಮುಂದುವರಿಸಿತು.

ಮೊರೊಕ್ಕೊ ತಂಡದ ವಾಲಿದ್‌ ಚೆದಿರಾ ಅವರು ಇಂಜುರಿ ಅವಧಿಯಲ್ಲಿ ಎರಡನೇ ಹಳದಿ ಕಾರ್ಡ್‌ ಪಡೆದು ಅಂಗಳದಿಂದ ಹೊರನಡೆದರು. ಸೆಮಿಯಲ್ಲಿ ಆಡುವ ಅವಕಾಶವನ್ನು ಅವರು ಕಳೆದುಕೊಂಡರು.

ಹಾಲಿ ಚಾಂಪಿಯನ್‌ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ತಂಡಗಳ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ವಿಜೇತರನ್ನು, ಸೆಮಿಫೈನಲ್‌ನಲ್ಲಿ ಮೊರೊಕ್ಕೊ ಎದುರಿಸಲಿದೆ.

ದಾಖಲೆ ಸರಿಗಟ್ಟಿದ ರೊನಾಲ್ಡೊ: ರೊನಾಲ್ಡೊ ಅವರಿಗೆ ಇದು 196ನೇ ಅಂತರರಾಷ್ಟ್ರೀಯ ಪಂದ್ಯ ಆಗಿತ್ತು. ಈ ಮೂಲಕ ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಕುವೈತ್‌ನ ಬದೆರ್‌ ಅಲ್‌ ಮುತಾವ ಅವರ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT