ಮಂಗಳವಾರ, ಜನವರಿ 28, 2020
29 °C
ಐಎಸ್‌ಎಲ್‌: ದ್ವಿತೀಯಾರ್ಧದಲ್ಲಿ ಗೋಲು ಗಳಿಸಿದ ಚೆಟ್ರಿ, ಸೆರಾನ್; ಎನ್‌ಇಯುಗೆ ಸೋಲು

ಅಗ್ರ ಪಟ್ಟ ಅಲಂಕರಿಸಿದ ಬಿಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಕಳೆದ ಪಂದ್ಯದಲ್ಲಿ ತವರಿನಲ್ಲೇ ಸೋಲುಂಡಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಬುಧವಾರ ಇಲ್ಲಿ ನಡೆದ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡದ ಎದುರಿನ ಪಂದ್ಯದಲ್ಲಿ ಜಯ ಗಳಿಸಿ ಸಂಭ್ರಮಿಸಿತು.

ಸಿಎಬಿಗೆ ಸಂಬಂಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ನಿಗದಿಗಿಂತ ಒಂದೂವರೆ ತಾಸು ಮೊದಲು ಪಂದ್ಯವನ್ನು ಆರಂಭಿಸಲಾಗಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ತಂಡ ಎದುರಾಳಿಗಳಿಗೆ ಪೆಟ್ಟು ನೀಡಿತು. 2–0 ಗೋಲುಗಳಿಂದ ಗೆದ್ದ ತಂಡ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು. ನಾರ್ತ್ ಈಸ್ಟ್ ಯುನೈಟೆಡ್‌ಗೆ ತವರಿನಲ್ಲಿ ಇದು ಸತತ ಎರಡನೇ ಸೋಲು.

ಮೊದಲಾರ್ಧದಲ್ಲಿ ಎರಡೂ ತಂಡಗಳು ಆಕ್ರಮಣಕ್ಕೆ ಒತ್ತು ನೀಡಿದ್ದವು. ಆರಂಭದಲ್ಲಿ ಬಿಎಫ್‌ಸಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿತ್ತು. ಆದರೆ ಗೋಲು ಗಳಿಸಲು ನಾರ್ತ್ ಈಸ್ಟ್ ಅವಕಾಶ ನೀಡಲಿಲ್ಲ. ಎರಡೂ ತುದಿಗಳಲ್ಲಿ ಗೋಲ್‌ಕೀಪರ್‌ಗಳು ಮಿಂಚಿನ ‘ಸೇವ್‌’ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ದ್ವಿತೀಯಾರ್ಧದಲ್ಲಿ ಪಂದ್ಯ ಇನ್ನಷ್ಟು ರೋಚಕವಾಯಿತು. 68ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ನಾಯಕ ಸುನಿಲ್ ಚೆಟ್ರಿ ಬಿಎಫ್‌ಸಿಗೆ ಮುನ್ನಡೆ ದೊರಕಿಸಿಕೊಟ್ಟರು. 68ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಎಡಭಾಗದಿಂದ ಚೆಟ್ರಿ ಸುಲಭವಾಗಿ ಒದ್ದ ಚೆಂಡನ್ನು ತಡೆಯಲು ಎದುರಾಳಿ ಗೋಲ್ ಕೀಪರ್ ಸುಭಾಷಿಷ್‌ ರಾಯ್ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಮುನ್ನಡೆ ಗಳಿಸಿದ ನಂತರ ಇನ್ನಷ್ಟು ಭರವಸೆಯಿಂದ ಆಕ್ರಮಣ ನಡೆಸಿದ ಬಿಎಫ್‌ಸಿಗೆ 81ನೇ ನಿಮಿಷದಲ್ಲಿ ಆಲ್ಪರ್ಟ್ ಸೆರಾನ್ ಮತ್ತೊಂದು ಗೋಲು ತಂದುಕೊಟ್ಟರು. ಇದು ಐಎಸ್‌ಎಲ್‌ನಲ್ಲಿ ಅವರ ಮೊದಲ ಗೋಲಾಗಿತ್ತು.

ಜೆಎಫ್‌ಸಿಗೆ ಮುಂಬೈ ಸವಾಲು: ಜೆಮ್‌ಶೆಡ್‌ಪುರದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ. ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಪಂದ್ಯ ನಡೆಯಲಿದೆ.

ಆ್ಯಂಟೊನಿಯೊ ಇರಿಯೊನ್ದೊ ಅವರ ಗರಡಿಯಲ್ಲಿ ಪಳಗಿರುವ ಜೆಎಫ್‌ಸಿ ಬಳಗ ಈ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡಿತ್ತು. ಮೊದಲ ಎರಡು ಪಂದ್ಯಗಳಲ್ಲೂ ಗೆದ್ದು ಬೀಗಿತ್ತು. ಸ್ಪೇನ್‌ನ ಸರ್ಗಿಯೊ ಕ್ಯಾಸಲ್ ಮತ್ತು ಫ್ರಾನ್ಸಿಸ್ಕೊ ಲೂನಾ (ಪಿಟಿ ) ತಂಡದ ಭರವಸೆ ಎನಿಸಿದ್ದಾರೆ. ಫಾರೂಕ್ ಚೌಧರಿ ಮತ್ತು ಅನಿಕೇತ್ ಜಾಧವ್ ಅವರ ಬಲವೂ ತಂಡಕ್ಕೆ ಇದೆ. ಗೋಲ್‌ಕೀಪರ್ ಸುಬ್ರತಾ ಪಾಲ್ ಆರಂಭದ ಪಂದ್ಯಗಳಲ್ಲಿ ಎದುರಾಳಿಗಳನ್ನು ನಿರಾಸೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಚೆಗಿನ ಕೆಲವು ಪಂದ್ಯಗಳಲ್ಲಿ ಮಿಂಚುಲು ಆಗಲಿಲ್ಲ. ಕಳೆದ ಮೂರು ಪಂದ್ಯಗಳು ಡ್ರಾ ಆಗಿರುವುದು ಕೋಚ್ ಆ್ಯಂಟೊನಿಯೊ ಅವರನ್ನು ಚಿಂತೆಗೆ ಈಡುಮಾಡಿದೆ. ಜೆಎಫ್‌ಸಿ ತಂಡ ಪಂದ್ಯದ ಕೊನೆಯ ಕ್ಷಣಗಳಲ್ಲಿ ಎಡವುತ್ತಿದೆ. ಇದಕ್ಕೆ ಪರಿಹಾರ ಪರಿಹಾರ ಕಂಡುಕೊಳ್ಳಲು ತಂಡ ಶ್ರಮಿಸಲಿದೆ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯರನ್ನು 3–2ರಲ್ಲಿ ಜಯ ಗಳಿಸಿರುವ ಮುಂಬೈ ಸಿಟಿ ಎಫ್‌ಸಿ ಆತ್ಮವಿಶ್ವಾಸದೊಂದಿಗೆ ಇಲ್ಲಿಗೆ ಬಂದಿದೆ.

’ಬಿಎಫ್‌ಸಿಯನ್ನು ಮಣಿಸಿದ ನಂತರ ತಂಡದ ಭರವಸೆ ಹೆಚ್ಚಿರುವುದು ನಿಜ. ಆ ಪಂದ್ಯದ ಗೆಲುವಿನ ನಂತರ ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಿರುವುದು ಖುಷಿ ತಂದಿದೆ. ತಂಡ ಈಗ ಉತ್ತಮ ಸಾಮರ್ಥ್ಯ ತೋರುತ್ತಿದ್ದು ಇಲ್ಲಿ ಕೂಡ ಮೂರು ಪಾಯಿಂಟ್ ಗಳಿಸುವ ನಿರೀಕ್ಷೆ ಇದೆ’ ಎಂದು ಮುಂಬೈ ತಂಡದ ಜಾರ್ಜ್ ಕೋಸ್ಟಾ ಹೇಳಿದರು.

‘ಕೊನೆಯ ಕ್ಷಣಗಳಲ್ಲಿ ಗೋಲು ನೀಡುವುದಕ್ಕೆ ಒತ್ತಡವೇ ಕಾರಣ ಎಂದೆನಿಸುತ್ತದೆ. ಈ ದೌರ್ಬಲ್ಯದಿಂದ ಹೊರಬೇಕಾಗಿದೆ. ಈಗ ತಂಡದ ಆಟಗಾರರು ಒತ್ತಡವನ್ನು ನಿಭಾಯಿಸಲು ಕಲಿತಿದ್ದಾರೆ’ ಎಂದು ಆ್ಯಂಟೊನಿಯೊ ಇರಿಯೊನ್ದೊ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು