ಸೋಮವಾರ, ಮೇ 17, 2021
21 °C

ಫುಟ್‌ಬಾಲ್ ಕ್ಲಬ್‌ಗಳಿಗೆ ಲೈಸೆನ್ಸ್ ಬೇಕಾದರೆ ಮಹಿಳಾ ತಂಡ ಇರಲೇಬೇಕು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಯಾವುದೇ ಫುಟ್‌ಬಾಲ್ ಕ್ಲಬ್‌ ಲೈಸೆನ್ಸ್‌ ಪಡೆಯಬೇಕಾದರೆ ಮಹಿಳಾ ತಂಡವನ್ನು ಹೊಂದಿರಲೇಬೇಕು ಎಂಬುದನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ಕಡ್ಡಾಯ ಮಾಡಿದೆ. ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಶನಿವಾರ ಈ ವಿಷಯ ತಿಳಿಸಿದ್ದಾರೆ.

’ಮಹಿಳಾ ತಂಡ ಹೊಂದಿರಬೇಕು ಎಂಬುದನ್ನು ಲೈಸೆನ್ಸ್ ನೀಡುವ ಪ್ರಕ್ರಿಯೆಯ ನಿಯಮದಲ್ಲಿ ಸೇರ್ಪಡೆಗೊಳಿಸಲಾಗಿದೆ. ’ಎ‘ ಅಥವಾ ‘ಬಿ’ ಡಿವಿಷನ್ ಹಂತದ ತಂಡ ಇರಬೇಕು ಎಂದೇನೂ ಇಲ್ಲ. ಆರಂಭಿಕ ಹಂತದ ತಂಡವಾಗಿದ್ದರೂ ಸಾಕು‘ ಎಂದು ಅವರು ವಿವರಿಸಿದ್ದಾರೆ.

’ಯುವ ಅಭಿವೃದ್ಧಿ ಕಾರ್ಯಕ್ರಮವನ್ನು ಎಐಎಫ್ಎಫ್ ಕಡ್ಡಾಯಗೊಳಿಸಿದೆ. ಕ್ಲಬ್‌ಗಳು ಮಹಿಳಾ ತಂಡ ಹೊಂದಿರಬೇಕು ಎಂಬ ವಿಷಯದಲ್ಲೂ ಅದೇ ರೀತಿಯ ತೀರ್ಮಾನ ಕೈಗೊಂಡಿದೆ. ಇದು, ಇಂಡಿಯನ್ ವಿಮೆನ್ಸ್ ಲೀಗ್‌ನಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳುವಂತೆ ಮಾಡಲು ನೆರವಾಗಲಿದೆ‘ ಎಂದು ದಾಸ್ ಅಭಿಪ್ರಾಯಪಟ್ಟರು.

’ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಇತ್ತೀಚೆಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂದಿನ ವರ್ಷ ದೇಶವು 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. 2022ರಲ್ಲಿ ಎಎಫ್‌ಸಿ ಏಷ್ಯಾಕಪ್ ಟೂರ್ನಿಯೂ ಭಾರತದಲ್ಲಿ ಆಯೋಜನೆಯಾಗಲಿದೆ. ಇಂಡಿಯನ್ ವಿಮೆನ್ಸ್ ಲಿಗ್ ಇದೀಗ ನಾಲ್ಕು ಆವೃತ್ತಿಗಳನ್ನು ಪೂರೈಸಿದೆ. 2019–20ನೇ ಸಾಲಿನ ಟೂರ್ನಿ ಬೆಂಗಳೂರಿನಲ್ಲಿ ನಡೆದಿದ್ದು 12 ತಂಡಗಳು ಪಾಲ್ಗೊಂಡಿದ್ದವು.

’ಮಹಿಳಾ ಫುಟ್‌ಬಾಲ್‌ಗೂ ಮಹತ್ವ ಇದೆ ಎಂಬುದನ್ನು ಕ್ಲಬ್‌ಗಳು ತಿಳಿದಿರಬೇಕು. ಮಹಿಳಾ ವಿಭಾಗಕ್ಕೆ ಫೆಡರೇಷನ್‌ ಆದ್ಯತೆ ನೀಡುತ್ತಿದ್ದು ಅದೇ ವಿಧಾನವನ್ನು ಕ್ಲಬ್‌ಗಳು ಕೂಡ ಪಾಲಿಸಬೇಕು‘ ಎಂದು ಕುಶಾಲ್ ದಾಸ್ ಹೇಳಿದರು.

ಎಸಿಎಲ್‌ ಟೂರ್ನಿ: ಅವಕಾಶ ಲಭಿಸಿದ್ದು ಖುಷಿ

’ಏಷ್ಯನ್ ಚಾಂಪಿಯನ್ಸ್ ಲೀಗ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಅವಕಾಶ ಲಭಿಸಿದ್ದು ಖುಷಿಯ ಸಂಗತಿ. ಭಾರತದ ಕ್ಲಬ್‌ ಅಂತಿಮ ನಾಲ್ಕರ ಘಟ್ಟದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಎಎಫ್‌ಸಿ ಕಪ್ ಟೂರ್ನಿಯಲ್ಲಿ ಭಾರತ ಉತ್ತಮ ಸಾಮರ್ಥ್ಯ ತೋರಿದ್ದು ಏಷ್ಯನ್ ಕ್ಲಬ್‌ ಲೀಗ್‌ನಲ್ಲಿ ಗುಂಪು ಹಂತವನ್ನು ದಾಟಿ ಮುಂದೆ ಸಾಗುವುದು ನಮ್ಮ ಉದ್ದೇಶ‘ ಎಂದು ಅವರು ತಿಳಿಸಿದರು.

’ಭಾರತದ ಫುಟ್‌ಬಾಲ್‌ಗೆ ಹೊಸ ರೂಪ ನೀಡುವ ಕಾರ್ಯ ಆರಂಭಗೊಂಡಿದೆ. ಈ ಹಂತದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಇದಕ್ಕಾಗಿ ಕ್ಲಬ್‌ಗಳ ಸಹಕಾರ ಮುಖ್ಯ. ಯುವ ಲೀಗ್‌ಗಳನ್ನು ಆಯೋಜಿಸುವುದು ಮತ್ತು ಅದಕ್ಕಾಗಿ ಹಣ ಹೂಡುವುದು ಕ್ಲಬ್‌ಗಳ ಆದ್ಯತೆಯಾಗಬೇಕು. ಗೋಲ್ಡನ್ ಬೇಬಿ ಲೀಗ್‌, ಸಬ್‌ ಜೂನಿಯರ್, ಜೂನಿಯರ್ ಮತ್ತು ಎಲೈಟ್ ಲೀಗ್‌ಗಳನ್ನು ಈಗಾಗಲೇ ಸಮರ್ಪಕವಾಗಿ ಆಯೋಜಿಸಲಾಗುತ್ತಿದೆ‘ ಎಂದು ದಾಸ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು