ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಚೆಂಡಿನಾಟದಲ್ಲಿ ಗುಸುಗುಸು ಗಮ್ಮತ್ತು

Last Updated 28 ಜೂನ್ 2020, 14:07 IST
ಅಕ್ಷರ ಗಾತ್ರ

ಇರಾಕ್‌ ರಾಷ್ಟ್ರೀಯ ತಂಡದ ಮಿಡ್‌ಫೀಲ್ಡರ್, ಪ್ರೀಮಿಯರ್ ಲೀಗ್‌ನಲ್ಲಿ ಸಾಂಟಾ ಕ್ಲಾರಾ ತಂಡದ ಪರ ಆಡುತ್ತಿರುವ ಒಸಾಮಾ ರಶೀದ್ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಆಡುತ್ತಾರೆಯೇ..?

ಇತ್ತೀಚೆಗೆ ಫುಟ್‌ಬಾಲ್ ಕ್ಷೇತ್ರದಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳಲ್ಲಿ ಇದೂ ಒಂದು. ಪೋರ್ಚುಗೀಸ್ ಪ್ರಥಮ ಡಿವಿಷನ್ ಟೂರ್ನಿಯಲ್ಲಿ ಆಡುತ್ತಿರುವ ರಶೀದ್‌ ಐಎಸ್‌ಎಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿಯ ಜೊತೆಯಲ್ಲೇ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಿಂದ (ಬಿಎಫ್‌ಸಿ) ಕಳೆದ ಬಾರಿ ದೂರವಾದ ಮಿಕು ಮತ್ತೆ ತಂಡ ಸೇರುವ ಒಲವು ತೋರಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಆದರೆ ಇದ್ಯಾವುದೂ ಖಚಿತವಲ್ಲ. ಆಟಗಾರರಾಗಲಿ ಅವರು ಪ್ರತಿನಿಧಿಸುವ ಕ್ಲಬ್‌ಗಳಾಗಲಿ ಇದನ್ನು ಖಾತರಿಪಡಿಸಿಕೊಂಡಿಲ್ಲ.

ಇಂಥ ಗಾಳಿಸುದ್ದಿಗಳು, ಗುಸುಗುಸುಗಳು ಫುಟ್‌ಬಾಲ್‌ನಲ್ಲಿ ಹೊಸತೇನೂ ಅಲ್ಲ. ಆಟಗಾರರು ಮತ್ತು ಕ್ಲಬ್‌ಗಳಿಗೆ ಸಂಬಂಧಿಸಿದ ‘ರೂಮರ್‌’ಗಳು ಕ್ರೀಡಾ ವೆಬ್‌ಸೈಟ್‌ ಮತ್ತು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಕೊರೊನಾ ಕಾಲದಲ್ಲಿ ಇವುಗಳು ಹೆಚ್ಚು ವಿಜೃಂಭಿಸುತ್ತಿವೆ.

ಕಳೆದ ವರ್ಷವಷ್ಟೇ ಐಎಸ್‌ಎಲ್‌ಗೆ ಪ್ರವೇಶ ಪಡೆದ ಹೈದರಾಬಾದ್ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಈ ಬಾರಿ ತಮ್ಮ ಶಕ್ತಿ ವರ್ಧಿಸುವತ್ತ ಚಿತ್ತ ನೆಟ್ಟಿದ್ದು ವಿದೇಶಿ ಆಟಗಾರರನ್ನು ಸೆಳೆದುಕೊಳ್ಳಲು ಸತತ ಪ್ರಯತ್ನ ನಡೆಸುತ್ತಿವೆ ಎಂಬ ಮಾತು ಕಳೆದ ಎರಡು ತಿಂಗಳಿಂದ ಜೋರಾಗಿ ಕೇಳಿಬರುತ್ತಿವೆ. ಆಸ್ಟ್ರೇಲಿಯಾದ ‘ವಿಂಗರ್’ ಜೊಯೆಲ್ ಚಿಯಾನಿಸ್ ಮೇಲೆ ಹೈದರಾಬಾದ್ ಎಫ್‌ಸಿ ಕಣ್ಣಿಟ್ಟಿದೆ ಎಂಬುದು ಹೆಚ್ಚು ಹರಿದಾಡಿದ ಸುದ್ದಿ.

ಕಾಂಗರೂ ನಾಡಿನ ‘ಎ’ ಲೀಗ್‌ನಲ್ಲಿ ಆಡುವ ಪರ್ಥ್‌ ಗ್ಲೋರಿ ಎಫ್‌ಸಿಯ ಆಟಗಾರನಿಗೆ ನ್ಯೂಜಿಲೆಂಡ್ ಮತ್ತು ಮಲೇಷ್ಯಾದಲ್ಲಿ ಆಡಿದ ಅನುಭವವೂ ಇದೆ. ಎರಡೂ ಬದಿಯಲ್ಲಿ ಆಡುವ ಸಾಮರ್ಥ್ಯವಿರುವ ಅವರು ವೇಗವಾಗಿ ಚೆಂಡನ್ನು ಮುನ್ನುಗ್ಗಿಸಲು ಮತ್ತು ಚಾಕಚಕ್ಯತೆಯಿಂದ ನಿಯಂತ್ರಿಸಿ ನಿಖರ ಪಾಸ್ ನೀಡುವುದರಲ್ಲಿ ನಿಪುಣ. ಕಳೆದ ಋತುವಿನಲ್ಲಿ ಗಳಿಸಿದ ಒಟ್ಟು 22 ಶಾಟ್‌ಗಳ ಪೈಕಿ 11 ಸ್ಪಷ್ಟವಾಗಿ ಗುರಿ ಸೇರಿವೆ. ಹೀಗಾಗಿ ಅವರು ಹೈದರಾಬಾದ್ ತಂಡಕ್ಕೆ ಆಸ್ತಿಯಾಗಲಿದ್ದಾರೆ ಎಂಬುದು ಈ ಸುದ್ದಿಯನ್ನು ಹರಿಬಿಟ್ಟ ವೆಬ್‌ಸೈಟ್ ಅಭಿಪ್ರಾಯ.

ಆಸ್ಟ್ರೇಲಿಯಾದ ಸಿಡ್ನಿ ಎಫ್‌ಸಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ತಾರೆ ಆ್ಯಡಂ ಲೀ ಫಾಂಡ್ರೆ ಮೇಲೆಯೂ ಹೈದರಾಬಾದ್ ಎಫ್‌ಸಿ ಕಣ್ಣು ನೆಟ್ಟಿದೆ ಎಂಬ ಮಾಹಿತಿ ಇದೆ. ಕೊರೊನಾದಿಂದಾಗಿ ‘ಎ’ ಲೀಗ್‌ನ ಆರು ಪಂದ್ಯಗಳನ್ನು ಅಮಾನತಿನಲ್ಲಿಡಲಾಗಿದೆ. ಸಿಡ್ನಿ ಎಫ್‌ಸಿ ಆರ್ಥಿಕವಾಗಿಯೂ ಬಳಲಿದೆ. ಹೀಗಾಗಿ ‘ಎ’ ಲೀಗ್ ಮುಕ್ತಾಯಗೊಂಡ ಕೂಡಲೇ ಆ್ಯಡಂ ಮತ್ತು ಹೈದರಾಬಾದ್ ಎಫ್‌ಸಿ ನಡುವೆ ಮಾತುಕತೆ ನಡೆಯಲಿದೆ ಎಂಬುದು ವೆಬ್‌ಸೈಟ್ ಮಾಡಿರುವ ವಿಶ್ಲೇಷಣೆ.ಇದಕ್ಕೆ ಪೂರಕವೆಂಬಂತೆ ಕ್ಲಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡ್ಯಾನಿ ಟೌನ್‌ಸೆಂಡ್ ಹೇಳಿಕೆಯನ್ನೂ ನೀಡಿದ್ದಾರೆ. ‘ಮುಂದಿನ ಋತುವಿನಲ್ಲಿ ಪರಿಸ್ಥಿತಿ ಕಠಿಣವಾಗಲಿದೆ. ಆದ್ದರಿಂದ ಆಟಗಾರರ ಜೊತೆ ಒಪ್ಪಂದ ಮುಂದುವರಿಸುವುದು ಕಷ್ಟಸಾಧ್ಯ’ ಎಂದು ಅವರು ಹೇಳಿದ್ದಾರೆ.

ಕಿರಿಯರ ತಂಡದ ಆಟಗಾರರಿಗೆ ಎಫ್‌ಸಿ ಗೋವಾ ಅವಕಾಶ?

ಎಫ್‌ಸಿ ಗೋವಾ ತಂಡವು ಕಿರಿಯರ ತಂಡದಲ್ಲಿರುವ ಪ್ರಮುಖ ಆಟಗಾರರಿಗೆ ಸೀನಿಯರ್ ತಂಡದಲ್ಲಿ ಅವಕಾಶ ನೀಡಲು ಮುಂದಾಗಿದೆ ಎಂಬುದು ಕೂಡ ಈಚೆಗೆ ಕುತೂಹಲ ಕೆರಳಿಸಿರುವ ಸುದ್ದಿ. ಈ ಪೈಕಿ ಲಿಯಾಂಡರ್ ಡಿ’ಕುನ್ಹಾ ಹೆಸರು ಮುನ್ನೆಲೆಯಲ್ಲಿದ್ದು ಅವರಿಗೆ ಅವಕಾಶ ನೀಡಿದರೆ ಸತತ ಮೂರು ಆವೃತ್ತಿಗಳಲ್ಲಿ ಕಿರಿಯರ ತಂಡದ ಏಳು ಮಂದಿಯನ್ನು ಐಎಸ್‌ಎಲ್‌ನಲ್ಲಿ ಆಡಲು ಕರೆಸಿಕೊಂಡಂತಾಗುತ್ತದೆ.

ಮೋಹನ್ ಬಾಗನ್ ತಂಡದ ಡಿಫೆಂಡರ್ ಗುರ್ಜಿಂದರ್ ಕುಮಾರ್ ಅವರು ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಸೇರಲು ಸಜ್ಜಾಗಿದ್ದಾರೆ ಎಂಬುದು ಕೂಡ ಈಗ ಫುಟ್‌ಬಾಲ್ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಟಾಟಾ ಫುಟ್‌ಬಾಲ್ ಅಕಾಡೆಮಿಯಲ್ಲಿ ಕಾಲ್ಚೆಂಡಾಟದ ಪಾಠ ಕಲಿತ ಪಂಜಾಬ್‌ನ ಡಿಫೆಂಡರ್ ಗುರ್ಜಿಂದರ್ ಐ–ಲೀಗ್‌ನಲ್ಲಿ ಎಂಟು ಪಂದ್ಯಗಳನ್ನು ಆಡಿದ್ದಾರೆ. 2010ರಿಂದ ನಾಲ್ಕು ವರ್ಷ ಪುಣೆ ಎಫ್‌ಸಿಯಲ್ಲಿ ಆಡಿದ್ದ ಅವರು ನಂತರ ಸಲ್ಗಾಂವ್ಕರ್ ತಂಡವನ್ನು ಸೇರಿಕೊಂಡಿದ್ದರು. ಪಂಜಾಬ್ ಎಫ್‌ಸಿಯನ್ನೂ ಪ್ರತಿನಿಧಿಸಿದ್ದಾರೆ. 2018ರ ಕೋಲ್ಕತ್ತಾ ಫುಟ್‌ಬಾಲ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದ ಮೋಹನ್ ಬಾಗನ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ಲೊವೇನಿಯಾದ ಸ್ಟ್ರೈಕರ್ ಮಟೆಜ್ ಪೊಪ್ಲಾನಿಕ್ ಅವರನ್ನು ಕರೆತರಲು ಕೇರಳ ಬ್ಲಾಸ್ಟರ್ಸ್ ನಡೆಸುತ್ತಿರುವ ಪ್ರಯತ್ನವೂ ಗುಟ್ಟಾಗಿ ಉಳಿಯಲಿಲ್ಲ. ಡಿಫೆಂಡರ್ ಅಬ್ದುಲ್ ಹಾಕು ಅವರೊಂದಿಗಿನ ಒಪ್ಪಂದವನ್ನು ಮುಂದುವರಿಸುವ ಇರಾದೆಯನ್ನು ಕ್ಲಬ್ ಹೊಂದಿದೆ ಎಂಬ ವಿಷಯವೂ ಚರ್ಚೆಯಲ್ಲಿದೆ. ಕಳೆದ ಬಾರಿ ಹಂಗರಿಯ ಕಪೊಸ್ವಾರಿ ರಕೋಸಿ ತಂಡದಲ್ಲಿದ್ದ ಮಟೆಜ್ ಪೊಪ್ಲಾನಿಕ್ ಆರು ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದರು.ಇಂಡಿಯನ್ ಆ್ಯರೋಸ್ ತಂಡದ ಮಿಡ್‌ಫೀಲ್ಡರ್ ಗಿವ್ಸನ್ ಸಿಂಗ್ ಅವರಿಗೂ ಬ್ಲಾಸ್ಟರ್ಸ್ ಆಹ್ವಾನ ನೀಡಿದೆ. 17 ವರ್ಷದ ಗಿವ್ಸನ್, ಐ–ಲೀಗ್‌ನಲ್ಲಿ 16 ಪಂದ್ಯಗಳನ್ನು ಆಡಿದ್ದು ಎರಡು ಗೋಲು ಗಳಿಸಿದ್ದಾರೆ.

ಕೇರಳ ಸುತ್ತಿ ಎಟಿಕೆಯತ್ತ ತಿರಿ?

ಕಳೆದ ಆವೃತ್ತಿಯಲ್ಲಿ ಜೆಮ್ಶೆದ್‌ಪುರ ಎಫ್‌ಸಿಯಲ್ಲಿ ಆಡಿದ್ದ ಸ್ಪೇನ್‌ನ ಜೋಸ್ ಲೂಯಿಸ್ ಅರೆರೊ ಅಥವಾ ತಿರಿ ತಮ್ಮ ಹಿಂದಿನ ಕ್ಲಬ್ ಮೋಹನ್ ಬಾಗನ್ ಕಡೆಗೆ ಹೆಜ್ಜೆ ಹಾಕಿದ್ದಾರೆ ಎಂಬುದು ಇತ್ತೀಚೆಗೆ ಗಮನ ಸೆಳೆದ ಪ್ರಮು ವಿಷಯ. 2019–20ನೇ ಸಾಲಿನ ಐಎಸ್‌ಎಲ್ ಟೂರ್ನಿ ಮುಗಿದ ಕೂಡಲೇ ಕೇರಳ ಬ್ಲಾಸ್ಟರ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾಗಲೇ ತಿರಿ ಸುದ್ದಿಯಾಗಿದ್ದರು. ಆದರೆ ಈಗ ಏಕಾಏಕಿ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ. ಫೆಬ್ರುವರಿಯಲ್ಲಿ ಬ್ಲಾಸ್ಟರ್ಸ್ ಮತ್ತು ತಿರಿ ನಡುವೆ ಮಾತುಕತೆ ನಡೆದಿತ್ತು. ತಂಡವನ್ನು ಸೇರಲು ತಿರಿ ಒಪ್ಪಿಕೊಂಡಿದ್ದರು ಕೂಡ. ಆದರೆ ಕೊವಿಡ್‌ನಿಂದ ಆಗಿರುವ ನಷ್ಟ ಸರಿದೂಗಿಸುವುದಕ್ಕಾಗಿ ಸಂಭಾವನೆ ಮೊತ್ತವನ್ನು ಕಡಿಮೆ ಮಾಡುವಂತೆ ಬ್ಲಾಸ್ಟರ್ಸ್ ಕೋರಿಕೊಂಡದ್ದರಿಂದ ತಿರಿ ಹಿಂದೆ ಸರಿದಿದ್ದಾರೆ.

ಬಿಎಫ್‌ಸಿ ಅಭಿಮಾನಿಗಳ ಕಣ್ಮಣಿ, ಮಿಕುಎಂದೇ ಹೆಸರಾಗಿರುವ ನಿಕೋಲಸ್ ಫೆಡರ್ ಕಳೆದ ಬಾರಿ ವೈಯಕ್ತಿಕ ಕಾರಣದಿಂದ ತಾಯ್ನಾಡು ವೆನೆಜುವೆಲಾಗೆ ತೆರಳಿದ್ದರು. ಈಗ ಮತ್ತೆ ಬೆಂಗಳೂರಿಗೆ ವಾಪಸಾಗುವ ಮನಸ್ಸು ಮಾಡಿದ್ದಾರೆ. ಈಚೆಗೆ ಬಿಎಫ್‌ಸಿ ಅಭಿಮಾನಿಗಳೊಂದಿಗೆ ನಡೆದ ಇನ್‌ಸ್ಟಾಗ್ರಾಮ್ ಸಂವಾದದಲ್ಲಿ ಅವರು ಈ ವಿಷಯ ಬಹಿರಂಗ ಮಾಡಿದ್ದಾರೆ.

‘ಅಭಿಮಾನಿಗಳ ಪ್ರೀತಿ ಎಲ್ಲಿ ಹೆಚ್ಚು ಇದೆಯೋ ಅಲ್ಲಿರುವುದಕ್ಕೆ ಮನಸ್ಸು ಹಾತೊರೆಯುವುದು ಸಹಜ. ಆದ್ದರಿಂದ ಬಿಎಫ್‌ಸಿಗೆ ಮರಳಿದರೂ ಅಚ್ಚರಿ ಇಲ್ಲ. ಆದರೆ ಸದ್ಯ ಯಾವುದೂ ನನ್ನ ಕೈಯಲಿಲ್ಲ. ಮುಂದೇನಾಗುವುದೋ ನೋಡೋಣ’ ಎಂದು ಮಿಕು ಹೇಳಿದ್ದರು.

ನಾರ್ತ್ ಈಸ್ಟ್ ತಂಡಕ್ಕೆ ಚರ್ಚಿಲ್ ಬ್ರದರ್ಸ್‌ನ ಡಿಫೆಂಡರ್ ಪಾನಿಫ್ ವಾಸ್‌ ಬರುವುದು, ಇಂಡಿಯನ್ ಆ್ಯರೋಸ್‌ನ ಯುವ ಆಟಗಾರ ವಿಕ್ರಂ ಪ್ರತಾಪ್ ಸಿಂಗ್ ಮುಂಬೈ ಸಿಟಿ ಎಫ್‌ಸಿಯನ್ನು ಸೇರುವುದು, ಬ್ಲಾಸ್ಟರ್ಸ್ ಜೊತೆಗಿನ ಆರು ವರ್ಷಗಳ ಸಂಬಂಧವನ್ನು ಸಂದೇಶ್ ಜಿಂಗಾನ್ ಮುರಿಯುವುದು, ಗೋಲ್‌ಕೀಪರ್ ಲಾಲ್‌ತ್ವಮಾವಿಯಾ ರಾಲ್ಟೆ ಬಿಎಫ್‌ಸಿಗೆ ಮರಳುವುದು, ಸಿ.ಕೆ.ವಿನೀತ್ ಮತ್ತು ರಿನೊ ಆ್ಯಂಟೊ ಐ ಲೀಗ್‌ನಲ್ಲಿ ಆಡುತ್ತಿರುವ ಈಸ್ಟ್ ಬೆಂಗಾಲ್ ಸೇರಲು ಉತ್ಸಾಹ ತೋರಿರುವುದು ಮುಂತಾದವು ಸದ್ಯ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿರುವವುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT