ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ:ಈಸ್ಟ್ ಬೆಂಗಾಲ್–ನಾರ್ತ್ ಈಸ್ಟ್‌ ಹಣಾಹಣಿ

ಮೊದಲ ಜಯದ ನಿರೀಕ್ಷೆಯಲ್ಲಿ ರಾಬಿ ಫಾವ್ಲರ್
Last Updated 4 ಡಿಸೆಂಬರ್ 2020, 14:53 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಇದೇ ಮೊದಲ ಬಾರಿ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುತ್ತಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಆರಂಭ ನೀರಸವಾಗಿದ್ದು ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆಲುವಿನ ನಿರೀಕ್ಷೆಯೊಂದಿಗೆ ಶನಿವಾರ ಕಣಕ್ಕೆ ಇಳಿಯಲಿರುವ ತಂಡಕ್ಕೆ ಎದುರಾಳಿ ನಾರ್ತ್ ಈಸ್ಟ್ ಯುನೈಟೆಡ್.

ಮೊದಲ ಪಂದ್ಯದಲ್ಲಿ ತನ್ನದೇ ನಗರದ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಮಣಿದ ಈಸ್ಟ್ ಬೆಂಗಾಲ್ ನಂತರ ಮುಂಬೈ ಸಿಟಿ ವಿರುದ್ಧವೂ ಸೋತಿತ್ತು. ಇತ್ತ ನಾರ್ತ್ ಈಸ್ಟ್ ಯುನೈಟೆಡ್ ಮೊದಲ ಪಂದ್ಯದಲ್ಲಿ ಗೆದ್ದು ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಅಜೇಯ ಓಟ ಮುಂದುವರಿಸಲು ಆ ತಂಡ ಪ್ರಯತ್ನಿಸಲಿರುವುದರಿಂದ ಶನಿವಾರದ ಪಂದ್ಯದ ಜಿದ್ದಾಜಿದ್ದಿನ ಹೋರಾಟಕ್ಕೆ ಕಾರಣವಾಗಲಿದೆ.

ರಾಬಿ ಫಾವ್ಲರ್ ಅವರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಎರಡು ಪಂದ್ಯಗಳಲ್ಲಿ ಐದು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಆದರೆ ತನ್ನ ಪರವಾಗಿ ಗೋಲಿನ ಖಾತೆ ತೆರೆಯಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ‘ಸಾಂಘಿಕವಾಗಿ ತಂಡ ಬಲಿಷ್ಠವಾಗಿದೆ. ವೈಯಕ್ತಿಕ ಪ್ರಮಾದಗಳಿಂದಾಗಿ ಎರಡೂ ಪಂದ್ಯಗಳಲ್ಲಿ ಸೋತಿದೆ. ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ನೀಡುವ ಆಟಗಾರರು ನಮ್ಮಲ್ಲಿ ಇದ್ದಾರೆ. ಅವರು ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ’ ಎಂಬುದು ಫಾವ್ಲರ್ ಅಭಿಪ್ರಾಯ.

ನಾರ್ತ್ ಈಸ್ಟ್ ಯುನೈಟೆಡ್‌ ತಂಡ ಎಲ್ಲ ವಿಭಾಗಗಳಲ್ಲೂ ಸಮರ್ಥ ಆಟ ಆಡುತ್ತಿದೆ. ಆದರೆ ಸೆಟ್‌ಪೀಸ್‌ ಮೂಲಕ ಬಂದಿರುವ ಗೋಲುಗಳು ತಂಡದ ಕೈಹಿಡಿದಿವೆ. ಆದ್ದರಿಂದ ‘ಓ‍ಪನ್ ಪ್ಲೇ’ಗೆ ಶನಿವಾರ ಹೆಚ್ಚು ಒತ್ತುನೀಡುವ ಸಾಧ್ಯತೆ ಇದೆ. ತಂಡ ಈ ವರೆಗೆ ಗಳಿಸಿರುವ ನಾಲ್ಕು ಗೋಲುಗಳ ಪೈಕಿ ಮೂರು ಗೋಲುಗಳು ಸೆಟ್‌ಪೀಸ್ ಮೂಲಕ ಬಂದಿದ್ದವು.

‘ನಮ್ಮ ಆರಂಭ ಚೆನ್ನಾಗಿಯೇ ಆಗಿದೆ. ಆದರೆ ಅಷ್ಟಕ್ಕೇ ಮೈಮರೆಯುವಂತಿಲ್ಲ. ಈ ಬಾರಿ ಟೂರ್ನಿ ಕಠಿಣ ಸ್ಪರ್ಧೆಯಿಂದ ಕೂಡಿದೆ. ಆದ್ದರಿಂದ ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಕಾಣಬೇಕಾಗಿದೆ. ತಂತ್ರಗಳನ್ನು ಹೆಣೆಯುವ ದೃಷ್ಟಿಯಿಂದ ಒಂದು ಪಂದ್ಯದ ಮೇಲೆ ಮಾತ್ರ ಹೆಚ್ಚು ಗಮನ ನೀಡಲಾಗುತ್ತದೆ. ಶನಿವಾರದ ಪಂದ್ಯದ ನಂತರ ಮುಂದಿನ ಹಾದಿಯ ಬಗ್ಗೆ ಯೋಚನೆ ಮಾಡಲಾಗುವುದು’ ಎಂದು ಕೋಚ್ ಜೆರಾರ್ಡ್ ನೂಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT