ಸೋಮವಾರ, ನವೆಂಬರ್ 30, 2020
19 °C

74ರ ಅಜ್ಜನಿಗೆ ದಾಖಲೆಯ ‘ಹಿರಿ’ಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂದಿನ ತಿಂಗಳ ಮೂರನೇ ತಾರೀಕು ಬಂತೆಂದರೆ ಈ ತಾತನಿಗೆ 75 ವರ್ಷ ತುಂಬುತ್ತದೆ. ಮುಕ್ಕಾಲು ಶತಮಾನದ ಸಂಭ್ರಮದ ಆಚರಣೆಗೆ ಕುಟುಂಬದವರು ಸಜ್ಜಾಗುತ್ತಿದ್ದರೆ, ತಾತ ಫುಟ್‌ಬಾಲ್ ಅಂಗಣದಲ್ಲಿ ಚೆಂಡು ಡ್ರಿಬಲ್ ಮಾಡುತ್ತ ಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಮುನ್ನುಗ್ಗುವ ತಂತ್ರದಲ್ಲಿ ಮಗ್ನರಾಗಿದ್ದರು.

ಇವರು ಈಜಿಪ್ಟ್‌ನ ಎಜೆಲ್ದಿನ್ ಬಹದೇರ್. ಕೈರೊದಲ್ಲಿ ಎರಡು ದಿನಗಳ ಹಿಂದೆ ನಡೆದ ಇಐ ಅಯಾತ್ ಸ್ಪೋರ್ಟ್ಸ್ ಕ್ಲಬ್ ತಂಡದ ಎದುರಿನ ಪಂದ್ಯದಲ್ಲಿ ಸಿಕ್ಸ್ತ್‌ ಅಕ್ಟೋಬರ್‌ ತಂಡದ ಪರ ಕಣಕ್ಕೆ ಇಳಿದ ಅವರು ವಿಶ್ವದ ಅತಿ ಹಿರಿಯ ವೃತ್ತಿಪರ ಫುಟ್‌ಬಾಲ್ ಆಟಗಾರ ಎಂಬ ಹಿರಿಮೆಗೆ ಪಾತ್ರಾಗಿದ್ದಾರೆ. 

ಇದು, ಅಂತಿಂಥ ಪಂದ್ಯವಲ್ಲ. ಈಜಿಪ್ಟ್‌ನ ಮೂರನೇ ಡಿವಿಷನ್ ಟೂರ್ನಿಯ ಹಣಾಹಣಿಯಾಗಿತ್ತು. ಅದರಲ್ಲಿ ಎಜೆಲ್ದಿನ್ ಬಹದೇರ್ ಪ್ರತಿನಿಧಿಸಿದ ತಂಡ 2–3ರಲ್ಲಿ ಸೋತಿತು. ಬಹದೇರ್ ಅವರಿಗೆ ಪೆನಾಲ್ಟಿ ಕಿಕ್‌ ಮೂಲಕ ಗೋಲು ಗಳಿಸುವ ಅಪೂರ್ವ ಅವಕಾಶ ಒದಗಿತ್ತು. ಅದನ್ನು ಇಐ ಅಯಾತ್ ಸ್ಪೋರ್ಟ್ಸ್ ಕ್ಲಬ್‌ನ ಗೋಲ್‌ ಕೀಪರ್ ತಡೆದರು. ಆದರೆ ಪಂದ್ಯ ಮುಗಿದ ನಂತರ ಗಿನೆಸ್ ವಿಶ್ವ ದಾಖಲೆಯ ಪುಸ್ತಕದ ಪುಟಗಳಲ್ಲಿ ಬಹದೇರ್ ಹೆಸರು ಅಚ್ಚಾಯಿತು. 73ನೇ ವಯಸ್ಸಿನಲ್ಲಿ ಫುಟ್‌ಬಾಲ್ ಆಡಿದ್ದ ಇಸ್ರೇಲ್‌ನ ಐಸಾಕ್ ಹಾಯಿಕ್ ಹೆಸರಿನಲ್ಲಿ ಇಲ್ಲಿಯ ವರೆಗೆ ಈ ದಾಖಲೆ ಇತ್ತು.

ಈ ಹಿಂದೆ ಹವ್ಯಾಸಿ ಫುಟ್‌ಬಾಲ್ ಆಡುತ್ತಿದ್ದ ಬಹದೇರ್ ಮಾರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೃತ್ತಿಪರ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಪೆನಾಲ್ಟಿ್ ಮೂಲಕ ಗೋಲು ಗಳಿಸಿ ಗಮನ ಸೆಳೆದಿದ್ದರು. ಅದೇ ತಿಂಗಳಲ್ಲಿ ಮತ್ತೊಂದು ಪಂದ್ಯ ಆಡುವುದಕ್ಕೆ ಸಜ್ಜಾಗಿದ್ದರು. ಆದರೆ ಅಷ್ಟರಲ್ಲಿ ಕೋವಿಡ್–19 ಹಾವಳಿ ತಡೆಗಟ್ಟುವ ಸಲುವಾಗಿ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡ ಕಾರಣ ಆಸೆ ಕೈಗೂಡಿರಲಿಲ್ಲ. 

ಬಹದೇರ್ ಅವರ ಮೊಮ್ಮಕ್ಕಳ ಪೈಕಿ ಆರು ಮಂದಿ ಶನಿವಾರದ ಪಂದ್ಯದ ಸಂದರ್ಭದಲ್ಲಿ ಸ್ಟ್ಯಾಂಡ್‌ಗಳಲ್ಲಿ ಕುಳಿತಿದ್ದರು. ಪ್ರೀತಿಯ ಅಜ್ಜ ಅಂಗಣದಲ್ಲಿ ಮಿಂಚುತ್ತಿದ್ದಾಗ ಅವರು ’ಕಮಾನ್ ಗ್ರ್ಯಾನ್‌ಪಾ...ಕಮಾನ್‘ ಎಂದು ಕೂಗುತ್ತ ಹುರಿದುಂಬಿಸಿದರು. ’ಇನ್ನೂ ಒಂದು ಪಂದ್ಯ ಆಡುವ ಹುಮ್ಮಸ್ಸು ಇದೆ’ ಎಂದು ಬಹದೇರ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು