ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಕಾಂಟಿನೆಂಟಲ್ ಕಪ್‌: ಪ್ರಶಸ್ತಿಗೆ ಭಾರತ– ಲೆಬನಾನ್‌ ಸೆಣಸು

ಫುಟ್‌ಬಾಲ್‌: ಇಂಟರ್‌ಕಾಂಟಿನೆಂಟಲ್ ಕಪ್‌ ಫೈನಲ್‌ ಇಂದು
Published 17 ಜೂನ್ 2023, 15:20 IST
Last Updated 17 ಜೂನ್ 2023, 15:20 IST
ಅಕ್ಷರ ಗಾತ್ರ

ಭುವನೇಶ್ವರ: ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಲೆಬನಾನ್‌ ತಂಡಗಳು ಭಾನುವಾರ ಎದುರಾಗಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

2018 ರಲ್ಲಿ ಆಯೋಜಿಸಿದ್ದ ಚೊಚ್ಚಲ ಟೂರ್ನಿ ಗೆದ್ದುಕೊಂಡಿದ್ದ ಭಾರತ ತಂಡ, ಟ್ರೋಫಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಪ್ರಯತ್ನಿಸಲಿದೆ. ಗುರುವಾರ ಇವೆರಡು ತಂಡಗಳ ನಡುವಣ ಲೀಗ್‌ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು.

ಆತಿಥೇಯ ತಂಡ ಗೋಲು ಗಳಿಸುವ ಎರಡು ಉತ್ತಮ ಅವಕಾಶಗಳನ್ನು ಹಾಳುಮಾಡಿಕೊಂಡಿತ್ತು. ಅನಿರುದ್ಧ್‌ ಥಾಪಾ ಅವರು ನಾಲ್ಕನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಲು ವಿಫಲರಾಗಿದ್ದರೆ, ನಾಯಕ ಸುನಿಲ್‌ ಚೆಟ್ರಿ ತಮಗೆ ದೊರೆತಿದ್ದ ನಿಖರ್‌ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಎಡವಿದ್ದರು.

ಭಾರತ ತಂಡದ ಕೋಚ್‌ ಐಗೊರ್‌ ಸ್ಟಿಮ್ಯಾಚ್‌ ಅವರು ವನುವಾಟು ಮತ್ತು ಲೆಬನಾನ್‌ ವಿರುದ್ಧದ ಪಂದ್ಯಗಳಿಗೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದರು. ಭಾರತ ತಂಡ ಮೊದಲ ಪಂದ್ಯದಲ್ಲಿ 2–0 ರಲ್ಲಿ ಮಂಗೋಲಿಯಾ ತಂಡವನ್ನು ಮಣಿಸಿತ್ತು. ಆದರೆ ವನುವಾಟು ಎದುರಿನ ಪಂದ್ಯಕ್ಕೆ 9 ಬದಲಾವಣೆಗಳನ್ನು ಮಾಡಲಾಗಿತ್ತು. ಲೆಬನಾನ್‌ ವಿರುದ್ಧದ ಪಂದ್ಯಕ್ಕೆ 10 ಬದಲಾವಣೆಗಳನ್ನು ಮಾಡಿದ್ದರು. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಮತ್ತು ಚೆಟ್ರಿ ಅವರನ್ನು ಬೆಂಚ್‌ನಲ್ಲಿ ಕೂರಿಸಲಾಗಿತ್ತು.

ಮೂರು ಪಂದ್ಯಗಳಲ್ಲೂ ಆರಂಭಿಕ ಇಲೆವೆನ್‌ನಲ್ಲಿ ಆಡಿದ್ದ ಡಿಫೆಂಡರ್‌ ಸಂದೇಶ್‌ ಜಿಂಘಾನ್‌ ಅವರು ಗಮನ ಸೆಳೆದಿದ್ದರು. ಕಳೆದ ಪಂದ್ಯದಲ್ಲಿ ಚೆಟ್ರಿ ಬದಲು ಕಣಕ್ಕಿಳಿದಿದ್ದ ಆಶಿಖ್ ಕುರುಣಿಯನ್ ಕೂಡಾ ಸ್ಟಿಮ್ಯಾಚ್‌ ಅವರ ನಿರೀಕ್ಷೆಗೆ ತಕ್ಕಂತೆ ಆಡಿದ್ದರು. ಲೆಫ್ಟ್‌ ವಿಂಗ್‌ನಲ್ಲಿ ಆಡಿದ್ದ ಉದಾಂತ ಸಿಂಗ್‌ ಚುರುಕಿನ ಪಾಸ್‌ಗಳ ಮೂಲಕ ಮಿಂಚಿದ್ದರು.

‘ಗೋಲು ಗಳಿಸಿಲ್ಲ ಎಂಬುದನ್ನು ಹೊರತುಪಡಿಸಿದರೆ, ಕಳೆದ ಪಂದ್ಯದಲ್ಲಿ (ಲೆಬನಾನ್‌ ವಿರುದ್ಧ) ನಾವು ಹೆಚ್ಚಿನ ತಪ್ಪುಗಳನ್ನು ಮಾಡಿಲ್ಲ. ಆದ್ದರಿಂದ ಫೈನಲ್‌ ಪಂದ್ಯಕ್ಕೆ ತಂಡದಲ್ಲಿ ಭಾರಿ ಬದಲಾವಣೆಯ ಅಗತ್ಯವಿಲ್ಲ. ಲೆಬನಾನ್‌ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ತಕ್ಕ ಪೈಪೋಟಿ ನೀಡಲು ನಾವು ವೇಗ ಮತ್ತು ಆಕ್ರಮಣಕಾರಿ ಮನೋಭಾವದೊಂದಿಗೆ ಆಡಬೇಕು’ ಎಂದು ಸ್ಟಿಮ್ಯಾಚ್‌ ಹೇಳಿದ್ದಾರೆ.

ಸ್ಟಿಮ್ಯಾಚ್‌ ಮತ್ತು ಲೆಬನಾನ್‌ ಕೋಚ್‌ ಅಲೆಕ್ಸಾಂಡರ್‌ ಐಲಿಚ್‌ ಅವರು ಉತ್ತಮ ಗೆಳೆಯರೂ ಹೌದು. ಇವರು 1994 ರಲ್ಲಿ ಸ್ಪೇನ್‌ನ ಕ್ಯಾಡಿಜ್‌ ಸಿಎಫ್‌ ಕ್ಲಬ್‌ ಪರ ಜತೆಯಾಗಿ ಆಡಿದ್ದರು. ಭಾನುವಾರದ ಫೈನಲ್‌ ವೇಳೆ ಕಂಡುಬರಲಿರುವ ತೀವ್ರ ಪೈಪೋಟಿಯು, ಪ್ರತಿಸ್ಪರ್ಧಿ ಕೋಚ್‌ಗಳ ನಡುವಿನ ಗೆಳೆತನವನ್ನು ಮೀರಿಸುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT