ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯಾನೇಜರ್‌ಗಿಂತ ಆಟಗಾರನಾಗಿರಲು ಇಷ್ಟ: ಸೊಕ್ಸ್‌ಜರ್

Published 9 ಫೆಬ್ರುವರಿ 2024, 16:12 IST
Last Updated 9 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ಫುಟ್‌ಬಾಲ್ ತಂಡದಲ್ಲಿ ಆಟಗಾರನಾಗಿರುವುದು ಬಹಳ ಉತ್ತಮವಾದ ಅನುಭವ. ಆದರೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವುದು ಅಪಾರ ಒತ್ತಡ ಮತ್ತು ಸವಾಲಿನ ಕೆಲಸ ಎಂದು ಫುಟ್‌ಬಾಲ್ ತಾರೆ ಊಲಾ ಗುನಾರ್ ಸೊಕ್ಸ್‌ಜರ್ ಹೇಳಿದರು.

ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಆಟಗಾರನಾಗಿ ಮಿಂಚಿದ್ದ ಅವರು ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಎರಡು ವರ್ಷಗಳ ಹಿಂದೆ ಮ್ಯಾನೇಜರ್ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಗಿತ್ತು. ಅದರ ನಂತರ ಅವರು ಯಾವುದೇ ತಂಡಕ್ಕೂ ಸೇರಿಲ್ಲ.

ಕಾರ್ಪೊರೇಟ್ ಕ್ವಿಜ್ ಸಂಸ್ಥೆಯಾದ ಎಸ್‌ ಆಫ್ ಪಬ್ಸ್ ಆಹ್ವಾನದ ಮೇರೆಗೆ  ಸೊಕ್ಸ್‌ಜರ್ ಅವರು ಭಾರತದಲ್ಲಿ ಮೂರು ದಿನಗಳ ಪ್ರವಾಸಕ್ಕಾಗಿ ಬಂದಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಟಗಾರನಾಗಿದ್ದಾಗ ತಂಡದ ಮ್ಯಾನೇಜರ್‌ ಮಾತು ಪಾಲಿಸುವುದು. ಯೋಜನೆಗೆ ತಕ್ಕಂತೆ ಆಡುವುದು. ಸೋಲು, ಗೆಲುವುಗಳನ್ನು ಸ್ವೀಕರಿಸುವುದು. ಎಲ್ಲ ಆಟಗಾರರು, ಸಿಬ್ಬಂದಿ, ಆಡಳಿತ ಮತ್ತು ಅಭಿಮಾನಿಗಳೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ. ನಮ್ಮ ಕರ್ತವ್ಯ ಮುಗಿದ ಮೇಲೆ ಮನೆಗೆ ತೆರಳುತ್ತೇವೆ. ಆದರೆ ಯಾವುದೇ ತಂಡದ ಮ್ಯಾನೇಜರ್ ಆದರೆ ಇಂತಹ ನಿರಾಳತೆ ಇರುವುದಿಲ್ಲ. ಪ್ರತಿ ನಿಮಿಷವೂ ತಂಡ ಮತ್ತು ಆಟಗಾರರ ಕುರಿತು ಯೋಚಿಸಬೇಕು. ಯೋಜನೆಗಳನ್ನು ಹೆಣೆಯಬೇಕು. ಫ್ರ್ಯಾಂಚೈಸಿ ಮಾಲೀಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೆಕು. ಅಪಾರ ಒತ್ತಡದ ಬದುಕು ಅದು’ ಎಂದು 50 ವರ್ಷದ ಸೊಕ್ಸ್‌ಜರ್ ವಿವರಿಸಿದರು.

‘ವಿಶ್ವದಲ್ಲಿಯೇ ಪ್ರೀಮಿಯರ್ ಲೀಗ್ ಅತ್ಯುತ್ತಮ ಟೂರ್ನಿಯಾಗಿದೆ. ಇದರಲ್ಲಿ ಜಯಿಸುವುದು ಕಠಿಣ. ಯುನೈಟೆಡ್‌ನಲ್ಲಿ ನಾನು ಮೂರು ವರ್ಷ ಇದ್ದೆ. ಅದೊಂದು ಶ್ರೇಷ್ಠ ಕ್ಲಬ್. ಅದರ ಮ್ಯಾನೇಜರ್ ಆಗಿರುವುದೆಂದರೆ ಪ್ರತಿಯೊಬ್ಬರ ಕಣ್ಣು ನಮ್ಮ ಮೇಲೆ ಇರುತ್ತದೆ. ಪ್ರತಿಕ್ಷಣವೂ ಪರೀಕ್ಷೆಯಾಗಿರುತ್ತದೆ. ಆದರೆ ಅದನ್ನು ನಾನು ಮನಸಾರೆ ಅನಂದಿಸಿದ್ದೇನೆ. ಒತ್ತಡದಿಂದ ಒಂದಿಷ್ಟು ವಿಶ್ರಾಂತಿಯ ಅಗತ್ಯವಿತ್ತು. ಆದ್ದರಿಂದ ಬಿಟ್ಟು ಹೊರಬಂದೆ’ ಎಂದರು.

‘ಸದ್ಯದ ತಂಡದಲ್ಲಿ ಯುವ ಆಟಗಾರರು ಇದ್ದಾರೆ. ಲೀಗ್‌ನಲ್ಲಿ ಅಗ್ರಸ್ಥಾನ ಗಳಿಸಲು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಕ್ಲಬ್‌ನ ಹೊಸ ಆಡಳಿತವು ಸ್ಥಿರತೆಯತ್ತ ಹೆಚ್ಚು ಗಮನ ನೀಡಬೇಕಿದೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಏಸ್ ಆಫ್‌ ಪಬ್ಸ್ ಮಾಲೀಕ ತಿಲಕ್ ಗೌರಂಗ್ ಶಾ, ‘ಸೊಕ್ಸ್‌ಜರ್ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ನಮಗೆ ಇದು ಅಪಾರ ಹೆಮ್ಮೆಯ ವಿಷಯವಾಗಿದೆ. ಫುಟ್‌ಬಾಲ್ ಜಗತ್ತಿನ ದಂತಕತೆಯಾಗಿರುವ ಅವರು ತಮ್ಮ ಮೂರು ದಿನಗಳ ಭೇಟಿಯಲ್ಲಿ ಮುಂಬೈ ಮತ್ತು ನವದೆಹಲಿಗೂ ಭೇಟಿ ನೀಡುವರು. ಇಲ್ಲಿಯ ಫುಟ್‌ಬಾಲ್ ಬೆಳವಣಿಗೆಯನ್ನು ಗಮನಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT