ಮಂಗಳೂರು: ಏಕೈಕ ಗೋಲಿನ ಬಲದಿಂದ ಎದುರಾಳಿ ತಂಡವನ್ನು ಮಣಿಸಿದ ಮಣಿಪಾಲ ಶಾಲೆ ತಂಡ ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಹೈಸ್ಕೂಲ್ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿತು.
ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಮಣಿಪಾಲ ತಂಡ 1–0ಯಿಂದ ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ತಂಡದ ವಿರುದ್ಧ ಗೆಲುವು ಸಾಧಿಸಿತು.
ಕಾಲೇಜು ವಿಭಾಗದಲ್ಲಿ ಯೆನೆಪೋಯ ‘ಎ’ ಮತ್ತು ‘ಬಿ’ ತಂಡಗಳು, ಪಿ.ಎ ಕಾಲೇಜು ‘ಎ’ ತಂಡ ಮತ್ತು ಮಂಗಳಾ ಸಂಸ್ಥೆಗಳು ಸೆಮಿಫೈನಲ್ ಪ್ರವೇಶಿಸಿದವು.
ಕಳೆದ ಬಾರಿಯ ರನ್ನರ್ ಅಪ್, ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ಭಾನುವಾರ ಮಣಿಸಿದ್ದ ಎನ್‌ಎಂಎಎಂ ತಾಂತ್ರಿಕ ಕಾಲೇಜು ಸೋಮವಾರ ನಿರಾಸೆ ಅನುಭವಿಸಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯೆನೆಪೋಯ ‘ಬಿ’ ತಂಡ ಎನ್‌ಎಂಎಎಂ ವಿರುದ್ಧ 1–0ಯಿಂದ ಜಯಿಸಿತು.
ಯೆನೆಪೋಯ ‘ಎ’ ತಂಡ 3–0ಯಿಂದ ಟಿಪ್ಪು ಸುಲ್ತಾನ್ ಕಾಲೇಜು ಎದುರು ಜಯ ಸಾಧಿಸಿತು. ಪಿಎ ಕಾಲೇಜು ತಂಡಗಳು ಮಿಶ್ರ ಫಲ ಅನುಭವಿಸಿವು. ಶೂಟೌಟ್‌ಗೆ ತಲುಪಿದ ರೋಚಕ ಪಂದ್ಯದಲ್ಲಿ ಪಿಎ ‘ಎ’ ತಂಡ ಸಹ್ಯಾದ್ರಿ ಕಾಲೇಜು ತಂಡವನ್ನು 5–4ರಲ್ಲಿ ಮಣಿಸಿದರೆ ಮಂಗಳಾ ಸಂಸ್ಥೆ ಪಿಎ ‘ಬಿ’ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ (3–2) ಪರಾಭವಗೊಳಿಸಿತು. ಎರಡೂ ಪಂದ್ಯಗಳು ನಿಗದಿತ ಅವಧಿಯಲ್ಲಿ ಗೋಲುರಹಿತ ಸಮಬಲದಲ್ಲಿ ಮುಕ್ತಾಯಗೊಂಡಿದ್ದವು.
ಕಾಲೇಜು ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿಎ ಕಾಲೇಜು ‘ಬಿ’ (ಎಡ) ಮತ್ತು ಮಂಗಳಾ ಸಂಸ್ಥೆಯ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಸಂದರ್ಭ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್