ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಎದುರಿನ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಡ್ರಾ ಸಾಧಿಸಿದ ಭಾರತ

Last Updated 13 ಅಕ್ಟೋಬರ್ 2018, 15:22 IST
ಅಕ್ಷರ ಗಾತ್ರ

ಸುಜೌ: ಫಿಫಾ ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ ಮೇಲಿನ ಸ್ಥಾನದಲ್ಲಿರುವ ಚೀನಾ ವಿರುದ್ಧ ಛಲದಿಂದ ಹೋರಾಡಿದ ಭಾರತ, ಸುಜೌ ಒಲಿಂಪಿಕ್‌ ಸ್ಪೋರ್ಟ್ಸ್‌ ಸೆಂಟರ್‌ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಮನ ಗೆದ್ದಿತು.

ಶನಿವಾರ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಸಂದೇಶ್ ಜಿಂಗಾನ್‌ ಬಳಗ ಆತಿಥೇಯರ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತು.

ಚೀನಾದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ‘ಬ್ಲೂ ಟೈಗರ್ಸ್‌’ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಫಿಫಾ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿರುವ ಜಿಂಗಾನ್‌ ಪಡೆಗೆ ಪಂದ್ಯದ ಕೊನೆಯ ನಿಮಿಷದಲ್ಲಿ ಗೋಲು ಗಳಿಸುವ ಉತ್ತಮ ಅವಕಾಶ ಸಿಕ್ಕಿತ್ತು. ಬದಲಿ ಆಟಗಾರ ಫಾರುಕ್‌ ಚೌಧರಿ ಇದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಹೀಗಾಗಿ ಚಾರಿತ್ರಿಕ ಸಾಧನೆಯ ಅವಕಾಶ ಕೈತಪ್ಪಿತು.

ಫಿಫಾ ರ‍್ಯಾಂಕಿಂಗ್‌ನಲ್ಲಿ 76ನೇ ಸ್ಥಾನ ಹೊಂದಿರುವ ಚೀನಾ ತಂಡಕ್ಕೆ ಏಳನೇ ನಿಮಿಷದಲ್ಲಿ ಖಾತೆ ತೆರೆಯುವ ಅವಕಾಶ ಲಭ್ಯವಾಗಿತ್ತು. ಎದುರಾಳಿ ತಂಡದ ಆಟಗಾರನ ಪ್ರಯತ್ನಕ್ಕೆ ಭಾರತದ ನಾಯಕ ಸಂದೇಶ್‌ ಅಡ್ಡಿಯಾದರು.

13ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ಅನಿರುದ್ಧ್‌ ಥಾಪಾ, ಅದನ್ನು ಪ್ರೀತಮ್‌ ಕೋಟಾಲ್‌ ಅವರತ್ತ ತಳ್ಳಿದರು. ಗೋಲು ಪೆಟ್ಟಿಗೆ ಬಲಭಾಗದಿಂದ ಪ್ರೀತಮ್‌ ಬಾರಿಸಿದ ಚೆಂಡನ್ನು ಚೀನಾ ತಂಡದ ಗೋಲ್‌ಕೀಪರ್‌ ಅಮೋಘ ರೀತಿಯಲ್ಲಿ ತಡೆದರು. 15ನೇ ನಿಮಿಷದಲ್ಲಿ ಗಾವೊ ಲಿನ್‌ ಅವರ ‘ಫ್ರೀ ಹೆಡರ್‌’ ಅನ್ನು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ತಡೆದರು. 17ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಚೆಂಡನ್ನು ಗುರಿ ಸೇರಿಸಲು ಸುನಿಲ್‌ ಚೆಟ್ರಿ ವಿಫಲರಾದರು. ಚೆಟ್ರಿ ಒದ್ದ ಚೆಂಡು ಚೀನಾ ತಂಡದ ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿದು ಅಂಗಳದ ಆಚೆ ಬಿತ್ತು.

ನಂತರ ಚೀನಾ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. ಆತಿಥೇಯ ಆಟಗಾರರ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ದ್ವಿತೀಯಾರ್ಧದಲ್ಲೂ ಚೀನಾ ತಂಡ ಪರಾಕ್ರಮ ಮೆರೆಯಿತು. 56, 69 ಮತ್ತು 75ನೇ ನಿಮಿಷಗಳಲ್ಲಿ ಸಿಕ್ಕ ಅವಕಾಶಗಳನ್ನು ಆತಿಥೇಯರು ಸದುಪಯೋಗಪಡಿಸಿಕೊಳ್ಳಲಿಲ್ಲ. ಹೀಗಾಗಿ ಈ ತಂಡದ ಗೆಲುವಿನ ಕನಸು ಕೈಗೂಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT