ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಗೆಲುವಿನ ಒತ್ತಡದಲ್ಲಿ ಚೆಟ್ರಿ ಬಳಗ

ಸ್ಯಾಫ್ ಚಾಂಪಿಯನ್‌ಷಿಪ್‌: ಭಾರತಕ್ಕೆ ಇಂದು ಮಾಲ್ಡಿವ್ಸ್ ಎದುರಾಳಿ
Last Updated 12 ಅಕ್ಟೋಬರ್ 2021, 12:59 IST
ಅಕ್ಷರ ಗಾತ್ರ

ಮಾಲೆ, ಮಾಲ್ಡಿವ್ಸ್: ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡವು ಸ್ಯಾಫ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಆತಿಥೇಯ ಮಾಲ್ಡಿವ್ಸ್ ತಂಡದ ಸವಾಲು ಎದುರಿಸಲಿದೆ. ರೌಂಡ್‌ ರಾಬಿನ್ ಲೀಗ್‌ನಲ್ಲಿ ಸುನಿಲ್ ಚೆಟ್ರಿ ಪಡೆಗೆ ಇದು ಕೊನೆಯ ಸುತ್ತಿನ ಪಂದ್ಯವಾಗಿದೆ.

ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡೂ ಡ್ರಾ ಸಾಧಿಸಿರುವ ಭಾರತ, ಈ ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಸಾಧಿಸಿದರೂ ಟೂರ್ನಿಯಿಂದಲೇ ಹೊರಬೀಳುವ ಅಪಾಯದಲ್ಲಿದೆ. ಹಾಗಾದರೆ ಅದು ಭಾರತದ ಅತ್ಯಂತ ಕಳಪೆ ಸಾಮರ್ಥ್ಯವಾಗಲಿದೆ. ಈ ಪಂದ್ಯವು ಕೋಚ್ ಇಗರ್ ಸ್ಟಿಮ್ಯಾಚ್‌ ಅವರು ಮುಂದುವರಿಯುವ ಕುರಿತಂತೆ ಪ್ರಶ್ನೆಗಳನ್ನೂ ಎತ್ತಬಹುದು.

ಏಳು ಬಾರಿಯ ಚಾಂಪಿಯನ್ ಆಗಿರುವ ಭಾರತ, 2003ರಲ್ಲಿ ಮೂರನೇ ಸ್ಥಾನ ಗಳಿಸಿತ್ತು ತಂಡವು ದಾಖಲಿಸಿದ ಅತ್ಯಂತ ಕಳಪೆ ಫಲಿತಾಂಶವಾಗಿತ್ತು ಅದು. ಈ ಹಿಂದಿನ 11 ಆವೃತ್ತಿಗಳಲ್ಲಿ ತಂಡವು ಒಂದೋ ಚಾಂಪಿಯನ್‌ ಆಗಿದೆ ಅಥವಾ ರನ್ನರ್‌ಅಪ್ ಸ್ಥಾನದೊಂದಿಗೆ ಕೊನೆಗೊಳಿಸಿದೆ.

ಟೂರ್ನಿಯಲ್ಲಿರುವ ಐದು ತಂಡಗಳ ಪೈಕಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಇದೇ 16ರಂದು ನಡೆಯುವ ಫೈನಲ್‌ಗೆ ಸ್ಪರ್ಧೆಯಲ್ಲಿರಲಿವೆ.

ಐದು ಅಂಕಗಳೊಂದಿಗೆ ಭಾರತವು ಮೂರನೇ ಸ್ಥಾನದಲ್ಲಿದೆ. ಮಾಲ್ಡಿವ್ಸ್ (ಮೂರು ಪಂದ್ಯಗಳಿಂದ ಆರು ಅಂಕಗಳು) ಮತ್ತು ನೇಪಾಳ (ಮೂರು ಪಂದ್ಯಗಳಿಂದ ಆರು ಅಂಕಗಳು) ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿವೆ. ಬುಧವಾರ ನಡೆಯುವ ಮೊದಲ ಪಂದ್ಯದಲ್ಲಿ ನೇಪಾಳವು ಬಾಂಗ್ಲಾದೇಶವನ್ನು (ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನ) ಎದುರಿಸಲಿದೆ.

ಡಿಫೆನ್ಸ್ ವಿಭಾಗದಲ್ಲಿ ಭಾರತಕ್ಕೆ ಸಂದೇಶ್ ಜಿಂಗಾನ್ ಅವರ ಅನುಪಸ್ಥಿತಿ ಕಾಡುತ್ತಿದೆ. ನೇಪಾಳ ಎದುರಿನ ಪಂದ್ಯದಲ್ಲಿ ಚೆಟ್ರಿ ಗೋಲು ದಾಖಲಿಸುವ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಬ್ರೆಜಿಲ್‌ನ ದಿಗ್ಗಜ ಪೆಲೆ (77) ಸಾಧನೆಯನ್ನು ಸರಿಗಟ್ಟಿದ್ದರು. ಆದರೆ 37 ವರ್ಷದ ಈ ಅನುಭವಿಯ ಮೇಲೆಯೇ ಭಾರತ ಎಷ್ಟು ದಿನ ಅವಲಂಬಿಸಲಿದೆ ಎಂಬ ಸದ್ಯದ ಪ್ರಶ್ನೆ.

ಹಾಲಿ ಚಾಂಪಿಯನ್ ಆಗಿರುವ ಮಾಲ್ಡಿವ್ಸ್ ಕೂಡ ಬಲಿಷ್ಠ ತಂಡವಾಗಿದೆ. ಅನುಭವಿ ಆಟಗಾರ ಅಲಿ ಆಶ್ಫಾಕ್ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.

ಪಂದ್ಯ ಆರಂಭ: ರಾತ್ರಿ 9.30

ನೇರ ಪ್ರಸಾರ: ಯೂರೊ ಸ್ಪೊರ್ಟ್‌

ಮಹಿಳಾ ತಂಡಕ್ಕೆ ಚೀನಾ ತೈಪೆ ಎದುರಾಳಿ: ಮನಾಮಾದಲ್ಲಿ ನಡೆಯುವ ಸ್ನೇಹಪರ ಪಂದ್ಯದಲ್ಲಿ ಭಾರತ ಮಹಿಳಾ ಫುಟ್‌ಬಾಲ್ ತಂಡವು ಬಲಿಷ್ಠ ಷೀನಾ ತೈಪೆ ತಂಡಕ್ಕೆ ಮುಖಾಮುಖಿಯಾಗಲಿದೆ.

ಕಳೆದ ಪಂದ್ಯದಲ್ಲಿ ಬಹರೇನ್ ತಂಡವನ್ನು 5–0 ಅಂತರದಿಂದ ಮಣಿಸಿದ್ದ ಭಾರತವು ಅದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT