ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸಂದೇಶ: ಮೈತೆಯಿ ಬಾವುಟ ಪ್ರದರ್ಶಿಸಿದ ಜೀಕ್ಸನ್ ಸಿಂಗ್

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಭಾರತ ತಂಡದ ಫುಟ್‌ಬಾಲ್ ಆಟಗಾರನ ಸಂದೇಶ
Published 5 ಜುಲೈ 2023, 16:48 IST
Last Updated 5 ಜುಲೈ 2023, 16:48 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಾತ್ರಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಫೈನಲ್‌ ನಂತರ ಭಾರತದ ತಂಡದ ಆಟಗಾರ ಜೀಕ್ಸನ್ ಸಿಂಗ್ ಅವರು ಮೈತೆಯಿ ಬಾವುಟವನ್ನು ತಮ್ಮ ಹೆಗಲಿಗೆ ಸುತ್ತಿಕೊಂಡು ವಿಜಯವೇದಿಕೆಗೆ ಬಂದರು. 

ಮಣಿಪುರದ ಜೀಕ್ಸನ್ ಹಾಕಿಕೊಂಡಿದ್ದ ಮೀಟಿ ಬಾವುಟವು ಚೌಕಾಕಾರದ್ದಾಗಿದ್ದು, ಏಳೂ ಬಣ್ಣಗಳನ್ನು ಹೊಂದಿದೆ. ಪುರಾತನ ಮಣಿಪುರದ ಏಳು ಬುಡಕಟ್ಟು ರಾಜವಂಶಗಳನ್ನು ಈ ಬಣ್ಣಗಳು ಪ್ರತಿನಿಧಿಸುತ್ತವೆ.

ಫೈನಲ್‌ನಲ್ಲಿ ಕುವೈತ್ ತಂಡದ ವಿರುದ್ಧ ಭಾರತ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಜಯಿಸಿತ್ತು. ಅದರ ನಂತರ ವೈಯಕ್ತಿಕ ಪದಕ ಗಳಿಸಲು ಬಂದ ಜೀಕ್ಸನ್ ಸಿಂಗ್ ಈ ಬಾವುಟ ಸುತ್ತಿಕೊಂಡಿದ್ದರು.

ಅವರು ತಂಡದ ವಿಜಯೋತ್ಸವದಲ್ಲಿ ಬಾವುಟ ಸುತ್ತಿಕೊಂಡು ಸಾಂಕೇತಿಕ ಪ್ರದರ್ಶನ ಮಾಡಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಜೀಕ್ಸನ್ ಕೂಡ  ಪ್ರತಿಕ್ರಿಯಿಸಿದ್ದಾರೆ.

‘ಪ್ರಿಯ ಅಭಿಮಾನಿಗಳೇ. ಈ ಬಾವುಟದಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ. ನನ್ನ ತವರು ಮಣಿಪುರವು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದಷ್ಟೇ ನನ್ನ ಗುರಿಯಾಘಿತ್ತು. ಇಂದಿನ ಈ ವಿಜಯವು ಎಲ್ಲ ಭಾರತೀಯರಿಗೂ ಅರ್ಪಣೆ‘ ಎಂದು ಟ್ವೀಟ್ ಮಾಡಿದ್ದಾರೆ.

2017ರಲ್ಲಿ ನಡೆದಿದ್ದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಜೀಕ್ಸನ್ ಇದ್ದರು.  ಆ ಟೂರ್ನಿಯಲ್ಲಿ ಭಾರತದ ಪರ ಗೋಲು ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರದ್ದು.

ಮಣಿಪುರದಲ್ಲಿ  ಕಳೆದ ಹಲವು ದಿನಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಮೈತೆಯಿ ಮತ್ತು ಕುಕಿ ಬುಡಕಟ್ಟು ಜನರ ನಡುವೆ ಭುಗಿಲೆದ್ದಿರುವ ಗಲಭೆಯಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

‘ಇದು ನನ್ನ ಮಣಿಪುರದ ಬಾವುಟ. ಎಲ್ಲರೂ ಶಾಂತಿಯಿಂದ ಬಾಳಬೇಕು ಮತ್ತು ಸಂಘರ್ಷ ಬೇಡ ಎಂಬ ಸಂದೇಶವನ್ನು ಭಾರತ ಮತ್ತು ಮಣಿಪುರಕ್ಕೆ ನೀಡಿದೆ. ನನಗೆ ಶಾಂತಿ ಮುಖ್ಯ. ಕಳೆದೆರಡು ತಿಂಗಳುಗಳಿಂದ ಸಂಘರ್ಷ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲಲಿ. ಸರ್ಕಾರ ಮತ್ತು ಜನರು ಈ ನಿಟ್ಟಿನಲ್ಲಿ ಪ್ರಯತ್ನಿಸಲಿ‘ ಎಂದು ಜೀಕ್ಸನ್ ಸಿಂಗ್ ಇಎಸ್‌ಪಿಎನ್. ಇನ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

’ಮಣಿಪುರದಲ್ಲಿರುವ ನನ್ನ ಕುಟುಂಬ ಸುರಕ್ಷಿತವಾಗಿದೆ. ಆದರೆ, ಅಲ್ಲಿಯ ಬಹಳಷ್ಟು ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ.  ಬಹಳ ಭೀಕರ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ನಾನು ಕೂಡ ಮರಳಿ ಹೋಗುವುದು ಕಷ್ಟವಿದೆ‘ ಎಂದೂ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಲು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ನಿರಾಕರಿಸಿದರು.

ಮಣಿಪುರಿ ಬಾವುಟದೊಂದಿಗೆ ಜೀಕ್ಸನ್ ಸಿಂಗ್
ಮಣಿಪುರಿ ಬಾವುಟದೊಂದಿಗೆ ಜೀಕ್ಸನ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT