ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ, ಈಸ್ಟ್‌ ಬೆಂಗಾಲ್‌ ವಿರುದ್ಧ ಹೋರಾಟ

Last Updated 10 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡು ಸೋಲಿನ ನಿರಾಸೆಯಿಂದ ಹೊರಬರುವ ಪ್ರಯತ್ನದಲ್ಲಿರುವ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಕ್ರವಾರ ಈಸ್ಟ್‌ ಬೆಂಗಾಲ್‌ ಎಫ್‌ಸಿಯ ಸವಾಲು ಎದುರಿಸಲಿದೆ.

ತವರು ನೆಲ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಮೂಲಕ ಗೆಲುವಿನ ಹಾದಿಗೆ ಮರಳುವ ವಿಶ್ವಾಸವನ್ನು ಬೆಂಗಳೂರಿನ ತಂಡ ಹೊಂದಿದೆ.

ಲೀಗ್‌ನಲ್ಲಿ ಬಿಎಫ್‌ಸಿ ಇದುವರೆಗೆ ಸವೆಸಿದ ಹಾದಿ ಏರಿಳಿತಗಳಿಂದ ಕೂಡಿದ್ದಾಗಿದೆ. ಅ.8 ರಂದು ಕಂಠೀರವದಲ್ಲಿ ಋತುವಿನ ಮೊದಲ ಪಂದ್ಯ ಆಡಿತ್ತಲ್ಲದೆ, ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು 1–0 ರಲ್ಲಿ ಮಣಿಸಿತ್ತು.

ಆ ಬಳಿಕ ಗೆಲುವಿನ ಸಿಹಿ ದೊರೆತಿಲ್ಲ. ಒಂದು ತಿಂಗಳಲ್ಲಿ ಮೂರು ‘ಅವೇ’ ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಸೋಲು ಎದುರಾಗಿದ್ದು, ಒಂದನ್ನು ಡ್ರಾ ಮಾಡಿಕೊಂಡಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ತಂಡ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಚೆನ್ನೈಯಿನ್‌ ಎಫ್‌ಸಿ ವಿರುದ್ಧ 1–1 ರಲ್ಲಿ ಡ್ರಾ ಸಾಧಿಸಿದ್ದರೆ, ಹೈದರಾಬಾದ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ಕೈಯಲ್ಲಿ 0–1 ಗೋಲಿನಿಂದ ಸೋತಿತ್ತು.

‘ತಂಡದ ಸದಸ್ಯರು ಸತತ ಎರಡು ಸೋಲುಗಳಿಂದ ನಿರಾಸೆಗೊಂಡಿಲ್ಲ. ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದ್ಧಾರೆ’ ಎಂದು ಕೋಚ್ ಸೈಮನ್‌ ಗ್ರೇಸನ್‌ ಹೇಳಿದ್ದಾರೆ.

‘ಕಳೆದ ಒಂದು ವಾರದ ಅವಧಿಯಲ್ಲಿ ಆಟಗಾರರು ಕಠಿಣ ತರಬೇತಿ ನಡೆಸಿದ್ದಾರೆ. ಎಲ್ಲರೂ ಸಕಾರಾತ್ಮಕ ಮನೋಭಾವ ಹೊಂದಿದ್ದು, ಶುಕ್ರವಾರದ ಆಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸವಿದೆ’ ಎಂದು ನುಡಿದಿದ್ದಾರೆ.

ನಾಲ್ಕು ಪಂದ್ಯಗಳಲ್ಲಿ ಕೇವಲ ಎರಡು ಗೋಲುಗಳನ್ನು ಮಾತ್ರ ಗಳಿಸಿರುವ ಬಿಎಫ್‌ಸಿ, ಈ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ಜಾವಿ ಹೆರ್ನಾಂಡೆಸ್‌ ಮತ್ತು ಸುನಿಲ್‌ ಚೆಟ್ರಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಸ್ಟ್ರೈಕರ್‌ಗಳಿಗೆ ನಿಖರ ಪಾಸ್‌ಗಳನ್ನು ನೀಡಲು ಇತರ ಆಟಗಾರರು ವಿಫಲವಾಗಿರುವುದರಿಂದ ತಂಡಕ್ಕೆ ಹೆಚ್ಚಿನ ಗೋಲು ಗಳಿಸಲು ಆಗಿಲ್ಲ. ಸ್ಟ್ರೈಕರ್‌ ಪ್ರಿನ್ಸ್‌ ಇಬಾರ ಅವರು ಗಾಯಗೊಂಡಿದ್ದು, ಶುಕ್ರವಾರ ಕಣಕ್ಕಿಳಿಯುತ್ತಿಲ್ಲ.

ಸ್ಟೀಫನ್‌ ಕಾನ್‌ಸ್ಟಂಟೈನ್‌ ಮಾರ್ಗದರ್ಶನದಲ್ಲಿ ಆಡುತ್ತಿರುವ ಈಸ್ಟ್ ಬೆಂಗಾಲ್‌, ಐದು ಪಂದ್ಯಗಳಲ್ಲಿ ಒಂದು ಗೆಲುವು ಸಾಧಿಸಿ 10ನೇ ಸ್ಥಾನದಲ್ಲಿದೆ. ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಬೇಕಾದರೆ ಕೋಲ್ಕತ್ತದ ತಂಡಕ್ಕೆ ಗೆಲುವು ಅನಿವಾರ್ಯ. ಆದ್ದರಿಂದ ಕಂಠೀರವ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT