ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಗೆ ಭಾರತದ ಬಿಡ್

Last Updated 5 ಏಪ್ರಿಲ್ 2020, 20:25 IST
ಅಕ್ಷರ ಗಾತ್ರ

ನವದೆಹಲಿ: ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್ ಟೂರ್ನಿಯ 2027ನೇ ಆವೃತ್ತಿಯನ್ನು ಭಾರತದಲ್ಲಿ ನಡೆಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಭಾನುವಾರ ಬಿಡ್‌ ಸಲ್ಲಿಸಿದೆ. ಭಾರತವು ಬಿಡ್‌ನಲ್ಲಿ ಯಶಸ್ವಿಯಾದರೆ ಮೊದಲ ಬಾರಿ ಎಎಫ್‌ಸಿ ಕಪ್ ಟೂರ್ನಿ ನಡೆಸಲು ಅವಕಾಶ ಪಡೆದಂತಾಗುತ್ತದೆ.

ಬಿಡ್ ಸಲ್ಲಿಸಲು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಈ ಹಿಂದೆ ಮಾರ್ಚ್ 31ರ ಗಡುವು ವಿಧಿಸಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಇದನ್ನು ಜೂನ್ 30ರ ವರೆಗೆ ಮುಂದೂಡಿದೆ.

‘ಟೂರ್ನಿ ನಡೆಸಲು ಸಿದ್ಧ ಎಂದು ಈ ಹಿಂದೆಯೇ ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ಗೆ ತಿಳಿಸಲಾಗಿತ್ತು. ಇದೀಗ ಅಧಿಕೃತವಾಗಿ ದಾಖಲೆ ಪತ್ರಗಳನ್ನು ಸಲ್ಲಿಸಲಾಗಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.

’ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಟೂರ್ನಿಯ ಕಳೆದ ಆವೃತ್ತಿ 2019 ಯುಎಇನಲ್ಲಿ ನಡೆದಿತ್ತು. ಆ ಟೂರ್ನಿಯಲ್ಲಿ 24 ತಂಡಗಳು ಪಾಲ್ಗೊಂಡಿದ್ದವು. 2027ರ ಆವೃತ್ತಿಗೆ ಆತಿಥ್ಯ ವಹಿಸುವ ರಾಷ್ಟ್ರ ಯಾವುದು ಎಂಬುದನ್ನು ಆದಷ್ಟು ಬೇಗ ಎಎಫ್‌ಸಿ ತಿಳಿಸಲಿದೆ. ಈ ಮೂಲಕ ಸಿದ್ಧತೆಗಳಿಗೆ ಸಾಕಷ್ಟು ಅವಕಾಶ ಸಿಗುವಂತೆ ಮಾಡಲಿದೆ’ ಎಂದು ಎಎಫ್‌ಸಿ ಪ್ರತಿನಿಧಿ ತಿಳಿಸಿದ್ದಾರೆ.

ಭಾರತದೊಂದಿಗೆ ಸೌದಿ ಅರೆಬಿಯಾ ಕೂಡ ಬಿಡ್ ಸಲ್ಲಿಸಿದೆ. ಆ ರಾಷ್ಟ್ರವು ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಆದರೆ ಒಮ್ಮೆಯೂ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ಲಭಿಸಿರಲಿಲ್ಲ. 2023ರ ಟೂರ್ನಿಗೆ ಚೀನಾ, ಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾ ಜೊತೆ ಭಾರತ ಬಿಡ್ ಸಲ್ಲಿಸಿತ್ತು. ಆದರೆ 2018ರ ಅಕ್ಟೋಬರ್‌ನಲ್ಲಿ ಹಿಂದೆ ಸರಿದಿತ್ತು. ನಂತರಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾ ಕೂಡ ಹಿಂದೆ ಸರಿದ ಕಾರಣ ಚೀನಾಗೆ ಅವಕಾಶ ಲಭಿಸಿತ್ತು. 10 ನಗರಗಳಲ್ಲಿ ಚೀನಾ ಟೂರ್ನಿಯನ್ನು ಆಯೋಜಿಸಲಿದೆ.

ದಕ್ಷಿಣ ಕೊರಿಯಾವು 2023ರ ಮಹಿಳೆಯರ ವಿಶ್ವಕಪ್ ಟೂರ್ನಿ ಆಯೋಜಿಸಲಿದ್ದು 2027ರ ಎಎಫ್‌ಸಿ ಏಷ್ಯಾಕಪ್ ಟೂರ್ನಿಗೂ ಬಿಡ್ ಸಲ್ಲಿಸುವ ಸಾಧ್ಯತೆ ಇದೆ. 2017ರಲ್ಲಿ 17 ವರ್ಷದೊಳಗಿನ ಪುರುಷರ ವಿಶ್ವಕಪ್ ಟೂರ್ನಿ ಆಯೋಜಿಸಿದ್ದ ಭಾರತ ಈ ವರ್ಷದ ನವೆಂಬರ್‌ನಲ್ಲಿ ಇದೇ ವಯೋಮಾನದ ಮಹಿಳೆಯರ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲು ಸಜ್ಜಾಗಿತ್ತು. ಆದರೆ ಕೊರೊನಾ ಆತಂಕದಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ. 2022ರ ಮಹಿಳಯರ ಎಎಫ್‌ಸಿ ಏಷ್ಯಾಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ.

ಭಾರತದ ಪುರುಷರ ತಂಡ ಎಎಫ್‌ಸಿ ಏಷ್ಯಾಕ‍ಪ್‌ನಲ್ಲಿ ಒಟ್ಟು ನಾಲ್ಕು ಬಾರಿ ಸೆಣಸಿದ್ದು 1964ರಲ್ಲಿಇ ರನ್ನರ್ ಅಪ್ ಆದದ್ದು ಈ ವರೆಗಿನ ಗರಿಷ್ಠ ಸಾಧನೆ. 1984, 2011 ಮತ್ತು 2019ರಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT