ಶನಿವಾರ, ನವೆಂಬರ್ 28, 2020
18 °C
ಲಾಕ್‌ಡೌನ್ ನಂತರ ಹೊಸ ಭರವಸೆ; ಗೋವಾದ ಮೂರು ಅಂಗಣಗಳಲ್ಲಿ ಐಎಸ್‌ಎಲ್‌ ಪಂದ್ಯಗಳು: ಬಿಎಫ್‌ಸಿ ಪಂದ್ಯ 22ರಂದು

ಕೋವಿಡ್ ಕಾಲದ ಕಾಲ್ಚಳಕಕ್ಕೆ ಕಿಕ್‌ ಆಫ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್, ಗೋವಾ: ಗ್ಯಾಲರಿಗಳಲ್ಲಿ ಪ್ರೇಕ್ಷಕರ ಸಂಭ್ರಮದ ಕುಣಿತವಿರುವುದಿಲ್ಲ, ನೆಚ್ಚಿನ ತಂಡಗಳನ್ನು ಬೆಂಬಲಿಸುವ ವಿಶಿಷ್ಟ ಹಾಡುಗಳು ಮತ್ತು ಘೋಷಣೆಗಳು ಮೊಳಗುವುದಿಲ್ಲ. ಆರೋಗ್ಯ ಸುರಕ್ಷಾ ಕವಚದಲ್ಲೇ ಇದ್ದುಕೊಂಡು ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಇಂಥ ವಿಶೇಷ ಪರಿಸ್ಥಿತಿಯಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ.

ಕೋವಿಡ್–19ರ ಸಂಕಷ್ಟದ ನಡುವೆ ಭಾರತದಲ್ಲಿ ಎಂಟು ತಿಂಗಳ ನಂತರ ನಡೆಯಲಿರುವ ಮೊದಲ ಪ್ರಮುಖ ಟೂರ್ನಿ ಇದಾಗಿದ್ದು ಪಂದ್ಯದಲ್ಲಿ ಎರಡು ಬಾರಿಯ ರನ್ನರ್ ಅಪ್ ಕೇರಳ  ಬ್ಲಾಸ್ಟರ್ಸ್ ಮತ್ತು ಹಾಲಿ ಚಾಂಪಿಯನ್ ಎಟಿಕೆ ಮೋಹನ್ ಬಾಗನ್ ತಂಡಗಳು ಸೆಣಸಲಿವೆ. ಎಟಿಕೆ ಈ ಬಾರಿ ಕೋಲ್ಕತ್ತದ ಮೋಹನ್ ಬಾಗನ್ ಜೊತೆಗೂಡಿದ್ದು ಕೋಲ್ಕತ್ತದ ಮತ್ತೊಂದು ದೈತ್ಯ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಕಣಕ್ಕೆ ಇಳಿಯಲಿದೆ. ಈ ತಂಡಗಳು ಇದೇ 27ರಂದು ಮುಖಾಮುಖಿಯಾಗಲಿವೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಮೊದಲ ಪಂದ್ಯ 22ರಂದು ಆತಿಥೇಯ ಗೋವಾ ವಿರುದ್ಧ ನಡೆಯಲಿದೆ.

ಕಳೆದ ಬಾರಿ ಅಮೋಘ ಆಟವಾಡಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಫಿಜಿ ಆಟಗಾರ ರಾಯ್ ಕೃಷ್ಣ ಅವರ ಮೇಲೆ ಭರವಸೆ ಇರಿಸಿಕೊಂಡಿರುವ ಎಟಿಕೆ ಮೋಹನ್ ಬಾಗನ್ ಈ ಬಾರಿ ಸಂದೇಶ್ ಜಿಂಗಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ಇನ್ನಷ್ಟು ಬಲಿಷ್ಠವಾಗಿದೆ. ರಾಯ್ ಕಳೆದ ಬಾರಿ 21 ಪಂದ್ಯಗಳಲ್ಲಿ 15 ಗೋಲು ಗಳಿಸಿದ್ದು ಅತಿ ಹೆಚ್ಚು ಗೋಲು ಸಾಧಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಹಂಚಿಕೊಂಡಿದ್ದರು. ಆರು ಗೋಲುಗಳಿಗೆ ಅಸಿಸ್ಟ್ ಕೂಡ ಮಾಡಿರುವ ಅವರಿಗೆ ಈಗ ನಾಯಕತ್ವದ ಹೊಣೆಯೂ ಇದೆ. ಸ್ಪೇನ್‌ನ ಮಿಡ್‌ಫೀಲ್ಡರ್ ಎಡು ಗಾರ್ಸಿಯಾ, ಭಾರತದ ಪ್ರೀತಮ್ ಕೊತಾಲ್, ಅರಿಂದಂ ಭಟ್ಟಾಚಾರ್ಯ ಅವರ ಬಲವೂ ತಂಡಕ್ಕೆ ಇದೆ. 

ಅ್ಯಂಟೊನಿಯೊ ಹಬಾಸ್ ಕೋಚ್ ಆಗಿರುವ ಎಟಿಕೆ ಮೋಹನ್ ಬಾಗನ್ ಎದುರು ಬ್ಲಾಸ್ಟರ್ಸ್‌ನ ಹೊಸ ಕೋಚ್ ಕಿಬಿ ವಿಕುನಾ ಅವರು ಯಾವ ತಂತ್ರಗಳನ್ನು ಬಳಸುವರು ಎಂಬುದು ಕೂಡ ಕುತೂಹಲ ಕೆರಳಿಸಿದೆ. ಕಳೆದ ಬಾರಿಗಿಂತ ಈ ಸಲ ಬ್ಲಾಸ್ಟರ್ಸ್ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದ್ದು ಅದನ್ನು ಬೇಧಿಸಿ ಎಟಿಕೆ ಗೋಲು ಗಳಿಸಿ ಮುನ್ನುಗ್ಗಬಲ್ಲುದೇ ಎಂಬುದನ್ನು ಕಾದುನೋಡಬೇಕು. ಕೋಸ್ಟಾ ನಮೋನಿಸು, ಬಕಾರಿ ಕೋನೆ, ನಿಶು ಕುಮಾರ್ ಮತ್ತು ಜೆಸೆಲ್ ಕಾರ್ನಿರೊ ಅವರು ಬ್ಲಾಸ್ಟರ್ಸ್‌ಗೆ ಬಲ ತುಂಬಲಿದ್ದಾರೆ. ಜೀಕ್ಸನ್ ಸಿಂಗ್, ಸಹಾಲ್ ಅಬ್ದುಲ್ ಸಮದ್, ಸತ್ಯಸೇನ್ ಸಿಂಗ್, ನೊಂಗ್ಡಾಂಬ ನೊರೆಮ್, ಜೋರ್ಡಾನ್ ಮರೆ ಅವರ ಮೇಲೂ ತಂಡ ನಿರೀಕ್ಷೆ ಇರಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು